ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ನಡೆದಿರುವ ದರೋಡೆ ಪ್ರಕರಣ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎನ್ನುವುದು ಎಷ್ಟರ ಮಟ್ಟಿಗೆ ಮರೀಚಿಕೆಯಂತಾಗಿದೆ ಎನ್ನುವುದಕ್ಕೆ ನಿದರ್ಶನವಾಗಿದೆ ಎಂದು ಬಿಜೆಪಿ ಕಿಡಿಕಾರಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ರಾಜಧಾನಿ ಬೆಂಗಳೂರು ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಆ ದಿನಗಳ ಬೆಂದಕಾಳೂರಾಗಿ ಬದಲಾಗುತ್ತಿದೆ. ಅಸಮರ್ಥ ಗೃಹ ಸಚಿವ ಪರಮೇಶ್ವರ್ ಅವರ ಕಾರಣದಿಂದ ಒಂದು ಕಡೆ ಬೆಂಗಳೂರಿನ ವಿಧಾನಸೌಧದ ಮುಂದೆಯೇ ಗಲಭೆ ಆಗುತ್ತಿದ್ದರೆ, ಮತ್ತೊಂದಡೆ ಹಾಡಹಗಲೇ ದರೋಡೆಕೋರರು ಡೇರಿ ಸರ್ಕಲ್ ಬಳಿ ಸುಮಾರು 7 ಕೋಟಿ ರೂ. ಬ್ಯಾಂಕ್ ಸಿಬ್ಬಂದಿಯಿಂದ ದೋಚಿಕೊಂಡು ಹೋಗಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ದಿನ ದಿನಕ್ಕೂ ದುರ್ಬಲವಾಗುತ್ತಿರುವುದರಿಂದಲೇ ಗಲಭೆಕೋರರು, ದರೋಡೆಕೋರರು, ಗೂಂಡಗಳು ಬೀದಿಗಿಳಿದು ರಾಜಾರೋಷವಾಗಿ ಮೆರೆದಾಡುತ್ತಿದ್ದಾರೆಂದು ಕಿಡಿಕಾರಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪೋಸ್ಟ್ ಮಾಡಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ದುರಾಡಳಿತ, ವೈಫಲ್ಯ, ಭ್ರಷ್ಟಾಚಾರಗಳಿಗೆ ದಿನ ನಿತ್ಯ ನಡೆಯುತ್ತಿರುವ ಕರ್ಮಕಾಂಡಗಳೇ ಸಾಕ್ಷಿ ಹೇಳುತ್ತಿವೆ. ಅತ್ತ ಹಾವೇರಿಯಲ್ಲಿ ನವಜಾತ ಶಿಶುವಿನ ದುರಂತ ಅರೋಗ್ಯ ಇಲಾಖೆಯ ಅವ್ಯವಸ್ಥೆಗೆ ಕನ್ನಡಿ ಹಿಡಿದಿದ್ದರೆ, ಈಗ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ನಡೆದಿರುವ ದರೋಡೆ ಪ್ರಕರಣ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎನ್ನುವುದು ಎಷ್ಟರ ಮಟ್ಟಿಗೆ ಮರೀಚಿಕೆಯಂತಾಗಿದೆ ಎನ್ನುವುದಕ್ಕೆ ನಿದರ್ಶನವಾಗಿದೆ ಎಂದು ಕಿಡಿಕಾರಿದ್ದಾರೆ.
ಜನರಿಗೆ ಕಾಂಗ್ರೆಸ್ ಸರ್ಕಾರದ ಮೇಲೆ ನಂಬಿಕೆ ಎಂದೋ ಕಳೆದುಹೋಗಿದೆ. ಗೃಹ ಇಲಾಖೆ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ ಎಂದು ಹೇಳಿಕೊಳ್ಳಲಾದರೂ ಕೂಡಲೇ ದರೋಡೆಕೋರರನ್ನು ಬಂಧಿಸಬೇಕಾಗಿದೆ. ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಎಟಿಎಂ ಕ್ಯಾಶ್ ವ್ಯಾನ್ ಅಡ್ಡಗಟ್ಟಿ ದರೋಡೆಕೋರರು 7 ಕೋಟಿ ರೂ. ಹಣದೊಂದಿಗೆ ಪರಾರಿಯಾಗಿದ್ದಾರೆ. ನಗರದ ಮಧ್ಯಭಾಗದಲ್ಲಿ, ಹಾಡುಹಗಲೇ ನಡೆದಿರುವ ದರೋಡೆ ಸಹಜವಾಗಿ ಜನರಲ್ಲಿ ಭೀತಿಯನ್ನು ಉಂಟುಮಾಡಿದೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದುಷ್ಕರ್ಮಿಗಳಿಗೆ ಕಾನೂನಿನ ಭಯ ಇಲ್ಲದಂತಾಗಿರುವುದು ಮೇಲಿಂದ ಮೇಲೆ ಸಾಬೀತಾಗುತ್ತಲೇ ಇದೆ. ಸರ್ಕಾರ ಕೂಡಲೇ ದುಷ್ಕರ್ಮಿಗಳನ್ನು ಪತ್ತೆ ಮಾಡಿ, ಬಂಧಿಸಬೇಕು ಎಂದು ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತೇನೆಂದು ತಿಳಿಸಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಪೋಸ್ಟ್ ಮಾಡಿ, ಬ್ಯಾಂಕ್ ಲೂಟಿ ಆಯಿತು ಈಗ ಎಟಿಎಂಗೆ ಹಣ ಸಾಗಿಸುತ್ತಿದ್ದ ಹಣ ಮಟಮಟ ಮಧ್ಯಾಹ್ನ ನಡುರಸ್ತೆಯಲ್ಲಿ ದರೋಡೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ ಎನ್ನುವುದಕ್ಕೆ ಬೆಂಗಳೂರಿನಲ್ಲಿ ಇಂದು ಮಟಮಟ ಮಧ್ಯಾಹ್ನ ನಡೆದಿರುವ ಎಟಿಎಂ ವಾಹನ ದರೋಡೆಯೇ ಸ್ಪಷ್ಟ ನಿದರ್ಶನ.
ಒಂದು ಕಡೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ.ಶಿವಕುಮಾರ್ ಅವರು ಕುರ್ಚಿ ಉಳಿಸಿಕೊಳ್ಳುವ, ಕುರ್ಚಿ ಕಸಿದುಕೊಳ್ಳುವ ಜಟಾಪಟಿಯಲ್ಲಿ ಮಗ್ನರಾಗಿದ್ದರೆ, ಸಚಿವರು ತಮ್ಮ ಗತಿ ಏನು ಎಂದು ಕಂಗಾಲಾಗಿದ್ದಾರೆ. ಇನ್ನು ಸರ್ಕಾರವೇ ಗಡಗಡ ಎಂದು ಅಲ್ಲಾಡುತ್ತಿರುವಾಗ ಅಧಿಕಾರಿಗಳು ದಿಕ್ಕು ತೋಚದೆ ನಿಷ್ಕ್ರಿಯರಾಗಿದ್ದಾರೆ.
ನಡುರಸ್ತೆಯಲ್ಲಿ, ಹಾಡುಹಗಲೇ, ಗನ್ ಮ್ಯಾನ್ ಗಳ ಉಪಸ್ಥಿತಿಯಲ್ಲಿ 7 ಕೋಟಿ ರೂಪಾಯಿ ತುಂಬಿರುವ ಎಟಿಎಂ ವಾಹನ ದರೋಡೆ ಆಗುತ್ತೆ ಅಂದರೆ ಇನ್ನು ಜನಸಾಮಾನ್ಯರ ಗತಿ ಏನು? ಜನಸಾಮಾನ್ಯರ ಮನೆ, ಅಂಗಡಿಗಳು ಆಸ್ತಿ-ಪಾಸ್ತಿಗೆ ಸುರಕ್ಷತೆ ಎಲ್ಲಿದೆ? ಒಟ್ಟಿನಲ್ಲಿ ಒಂದಂತೂ ಗ್ಯಾರೆಂಟಿ. ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಕನ್ನಡಿಗರಿಗೆ ನೆಮ್ಮದಿಯಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.