ಬೆಂಗಳೂರು: ಅಧಿಕಾರ ಹಸ್ತಾಂತರ ಕುರಿತು ಡಿಕೆ.ಶಿವಕುಮಾರ್ ಅವರಿಗೆ ನೀಡಿರುವ ಮಾತಿನಂತೆ ನಡೆದುಕೊಳ್ಳಿ, ಮಾತಿಗೆ ತಪ್ಪದಿರಿ ಎಂದು ಕಾಂಗ್ರೆಸ್'ಗೆ ಬಿಜೆಪಿ ಎಂಎಲ್‌ಸಿ ಎಎಚ್ ವಿಶ್ವನಾಥ್ ಬುಧವಾರ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ವಿಧಾನಸಭಾ ಚುನಾವಣೆ 50:50 ಅನುಪಾತದಲ್ಲಿ ಒಪ್ಪಂದವಾಗಿದೆ ಎಂಬುದು ಎಲ್ಲರಿಗೂ ತಿಳಿದೇ ಇದೆ. ಇದೀಗ ಕೊಟ್ಟ ಮಾತಿನಿಂದ ಹಿಂದೆ ಸರಿಯುವುದು ದ್ರೋಹಕ್ಕೆ ಸಮಾನವಾಗಿರುತ್ತದೆ ಎಂದು ಎಚ್ಚರಿಸಿದರು.
ಜೆಡಿಎಸ್ ಯಡಿಯೂರಪ್ಪ ಅವರಿಗೆ ಕೊಟ್ಟ ಭರವಸೆಯನ್ನು ಮುರಿದಾಗ ಅದರಿಂದಾಗ ಪರಿಣಾಮಗಳನ್ನು ನಾವು ನೋಡಿದ್ದೇವೆ. ನೀವು ವಚನ ಭ್ರಷ್ಟರಾದರೆ, ಮುಂದೆ ನಾಡಿನ ಆಡಳಿತ ಬಿಜೆಪಿಯ ಪರ ಎನ್ನುವುದುನ್ನು ಲಘುವಾಗಿ ತೆಗೆದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿಯಲ್ಲಿದ್ದಾಗಲೂ ಕಾಂಗ್ರೆಸ್ ವಿಷಯಗಳ ಬಗ್ಗೆಯೇಕೆ ಮಾತನಾಡುತ್ತಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ನನ್ನ ರಾಜಕೀಯ ಜೀವನದ 45 ವರ್ಷಗಳನ್ನು ಕಾಂಗ್ರೆಸ್‌ನಲ್ಲಿ ಕಳೆದಿದ್ದೇನೆಂದು ಹೇಳಿದರು.
ಇದೇ ವೇಳೆ ಕುರುಬರ ಕಲ್ಯಾಣವನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ ಅವರು, ‘ನಾನು ರಾಜಕಾರಣಕ್ಕೆ ಬರದೇ ಹೋಗಿದ್ದರೆ ಕುರುಬರ ಸಂಘವನ್ನು ಉಳಿಸಲು ಸಾಧ್ಯವಾಗುತ್ತಿರಲಿಲ್ಲ. ಕಾಗಿನೆಲೆ ಕನಕಗುರು ಪೀಠವೂ ಸ್ಥಾಪನೆಯಾಗುತ್ತಿರಲಿಲ್ಲ. ಇವೆಲ್ಲವನ್ನೂ ನಾನೇ ಮಾಡಿದ್ದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಸರಿಯಲ್ಲ ಎಂದು ತಿಳಿಸಿದರು.
ಪುಟ್ಟಸ್ವಾಮಿ ಎಂಬ ಪದಾಧಿಕಾರಿಯೊಬ್ಬ ಕುರುಬರ ಸಂಘವನ್ನು ರೂ.3 ಕೋಟಿಗೆ ಅಡಮಾನವಿಟ್ಟಿದ್ದ, ಅದನ್ನು ನಾನು ಬಿಡಿಸಿದೆ ಎಂದು ಸಿದ್ದರಾಮಯ್ಯ ಅವರು ಸುಳ್ಳು ಹೇಳಿಕೆ ನೀಡಿದ್ದಾರೆ. ಆ ಸಂದರ್ಭದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಹೇಗಿತ್ತು ಎನ್ನುವುದನ್ನು ವಿಮರ್ಶೆ ಮಾಡಿಕೊಳ್ಳಬೇಕು ಎಂದರು.
ಸಮುದಾಯದ ಮುಖಂಡರು ಕನಕ ಗುರುಪೀಠವನ್ನು ಸ್ಥಾಪಿಸುವ ಕುರಿತು ಸಭೆಗೆ ಆಹ್ವಾನಿಸಿದಾಗ ಅದಕ್ಕೆ ಸಿದ್ದರಾಮಯ್ಯ ಅವರು ವಿರೋಧ ವ್ಯಕ್ತಪಡಿಸಿದ್ದರು. ನಾನು ಸಮಾಜವಾದಿ ಹಿನ್ನೆಲೆಯಿಂದ ಬಂದವನು. ಲೋಹಿಯಾ ಚಿಂತನೆಗಳನ್ನು ಅಳವಡಿಸಿಕೊಂಡವನು, ಕುರುಬರಿಗೆ ಮಠ ಯಾಕೆ ಬೇಕು? ನಮ್ಮವರನ್ನು ಮಡಿವಂತಿಕೆಗೆ ಏಕೆ ದೂಡುತ್ತೀರಿ ಎಂದು ಹೇಳಿದ್ದವರು ನೀವೇ ಅಲ್ಲವೇ’ ಎಂದು ಪ್ರಶ್ನಿಸಿದರು.
ಕುರುಬರ ಸಂಘ, ಕನಕ ಗುರುಪೀಠ ಅಥವಾ ಕುರುಬ ಸಮಾಜದ ಟ್ರಸ್ಟ್‌ನಿಂದ ಸಮುದಾಯದ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕಾಗಿ ಒಂದು ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲು ಅವಕಾಶ ನೀಡಲಿಲ್ಲ. ಮೈಸೂರಿನಲ್ಲಿ ಎಂಜಿನಿಯರಿಂಗ್ ಕಾಲೇಜು ನಿರ್ಮಾಣ ಹಂತದಲ್ಲಿ ಉಳಿದಿದೆ ಎಂದು ಇದೇ ವೇಳೆ ಆರೋಪಿಸಿದರು.