ಬೆಂಗಳೂರು: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹಾಗೂ ರಾಜ್ಯಾಧ್ಯಕ್ಷರಾಗಿ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಶನಿವಾರ ಅವಿರೋಧವಾಗಿ ಪುನರ್ ಆಯ್ಕೆಯಾದರು.
ಜೆಡಿಎಸ್ ಪಕ್ಷ ಸ್ಥಾಪನೆ ಆಗಿ 25 ವರ್ಷ ತುಂಬಿದ ಹಿನ್ನಲೆಯಲ್ಲಿ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಡೆದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಈ ಇಬ್ಬರು ನಾಯಕರನ್ನು ಪುನರಾಯ್ಕೆ ಮಾಡಲು ರಾಷ್ಟ್ರೀಯ ಪ್ರತಿನಿಧಿಗಳು ಒಮ್ಮತದ ನಿರ್ಧಾರ ಕೈಗೊಂಡರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ಅವರು, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಅವಿರೋಧವಾಗಿ ಪುನರಾಯ್ಕೆ ಮಾಡಲಾಗಿದೆ ಎಂದರು.
ಜೆಡಿಎಸ್ ರಾಜ್ಯದ ಏಕೈಕ ಪ್ರಾದೇಶಿಕ ಪಕ್ಷ ಆಗಿದ್ದು, ಪಕ್ಷಕ್ಕೆ ಈಗ 25 ವರ್ಷ ತುಂಬಿದೆ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವಿರತ ಶ್ರಮದಿಂದ ಪಕ್ಷ ಇವತ್ತಿಗೂ ಗಟ್ಟಿಯಾಗಿ ಉಳಿದಿದೆ. ಅಸಂಖ್ಯಾತ ಕಾರ್ಯಕರ್ತ ಪಡೆಯನ್ನು ಹೊಂದಿದೆ. ದೇವೇಗೌಡರು ಪಕ್ಷವನ್ನು ಕಟ್ಟಿ ಬೆಳೆಸಿ, ತಮ್ಮ ಬದುಕನ್ನೇ ಪಕ್ಷಕ್ಕೆ ಮೀಸಲು ಇರಿಸಿದ್ದಾರೆ. ಬೆಳ್ಳಿಹಬ್ಬದ ಸಂದರ್ಭದಲ್ಲಿ ಈ ಇಬ್ಬರು ಬಲಿಷ್ಠ ನಾಯಕರೇ ಪಕ್ಷವನ್ನು ಮುನ್ನಡೆಸಬೇಕು ಎಂದು ರಾಷ್ಟ್ರೀಯ ಮಂಡಳಿ ತೀರ್ಮಾನಿಸಿದೆ ಎಂದು ಅವರು ಹೇಳಿದರು.