ಬೆಂಗಳೂರು: ರಾಜ್ಯ ರಾಜಕಾರಣ ಕುರಿತು ನನಗೇನು ಗೊತ್ತಿಲ್ಲ, ನನ್ನೇನು ಕೇಳಬೇಡಿ, ಏನೇ ಇದ್ದರೂ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆಯವರು ಸೋಮವಾರ ಹೇಳಿದ್ದು, ಈ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ಕುರಿತು ಬಿಜೆಪಿ ಹಾಗೂ ಜೆಡಿಎಸ್ ವ್ಯಂಗ್ಯವಾಡಿದೆ.
ಖರ್ಗೆ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ನಡೆಸಿಕೊಳ್ಳುತ್ತಿರುವ ಪರಿ ನೋಡಿ. ರಾಜ್ಯ ರಾಜಕಾರಣದ ಪರಿಸ್ಥಿತಿ ಬಗ್ಗೆ "ನನಗೇನೂ ಗೊತ್ತಿಲ್ಲ, ನನ್ನನೇನೂ ಕೇಳಬೇಡಿ" ಎನ್ನುವ ಅವರ ಹೇಳಿಕೆಯಲ್ಲಿರುವ ಅಸಹಾಯಕತೆ ಕಾಂಗ್ರೆಸ್ ಪಕ್ಷದಲ್ಲಿ ಅವರಿಗಿರುವ ನಿಜವಾದ ಸ್ಥಾನಮಾನ ಏನು ಅನ್ನುವುದನ್ನ ತೋರಿಸುತ್ತದೆ ಎಂದು ಹೇಳಿದ್ದಾರೆ.
ಸುಮ್ಮನೆ ನಾಮಕಾವಸ್ತೆ ಖರ್ಗೆ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿ, ಅಧಿಕಾರವವನ್ನೆಲ್ಲಾ ತಮ್ಮ ಬಳಿಯೇ ಇಟ್ಟುಕೊಂಡಿರುವ ನಕಲಿ ಗಾಂಧಿಗಳು, ಖರ್ಗೆ ಅವರಂತಹ ಹಿರಿಯ ಮುತ್ಸದ್ಧಿ ನಾಯಕನಿಗೆ ಅವಮಾನ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಬಿಹಾರ ಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರ ದುರ್ಬಲವಾಗಿದೆಯ ಬಿಜೆಪಿ ಶೀಘ್ರದಲ್ಲೇ ಚುನಾವಣೆಗಳನ್ನು ನಿರೀಕ್ಷಿಸುತ್ತಿದ್ದು, "ಚುನಾವಣೆ ನಡೆದಿದ್ದೇ ಆದರೆ, ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುತ್ತದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಕುರ್ಚಿಗಾಗಿ ಹಗ್ಗಜಗ್ಗಾಟ ಮುಂದುವರೆದಿದ್ದು, ಸಿಎಂ ಯಾರೆಂದು ಯಾರಿಗೂ ತಿಳಿದಿಲ್ಲ. ಆ ಪಕ್ಷದಿಂದ ಶಾಸಕರ ಖರೀದಿ ಆರಂಭವಾಗಿದೆ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಬಿರುಕು ಉಂಟಾಗಿರುವುದರಿಂದ ಸರ್ಕಾರ ರೈತರ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಮೆಕ್ಕೆಜೋಳ ಖರೀದಿ ಇನ್ನೂ ಆರಂಭವಾಗಿಲ್ಲ. ಹೈನುಗಾರರ ಬಾಕಿ ಹಣವನ್ನು ಪಾವತಿಸಿಲ್ಲ. ಸರ್ಕಾರದ "ರೈತ ವಿರೋಧಿ" ನೀತಿಯ ವಿರುದ್ಧ ಬಿಜೆಪಿ ಎಲ್ಲಾ ಜಿಲ್ಲೆಗಳಲ್ಲಿ ಅಭಿಯಾನ ಆರಂಭಿಸಲಿದೆ.
ನವೆಂಬರ್ 27 ಮತ್ತು 28 ರಂದು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು ಡಿಸೆಂಬರ್ 1 ಮತ್ತು 2 ರಂದು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಜೆಡಿಎಸ್ ಪ್ರತಿಕ್ರಿಯಿಸಿ, ಖರ್ಗೆ ಸಾಹೇಬರೇ, ತಾವು ಕಾಂಗ್ರೆಸ್ ಪಕ್ಷದ ಅಧ್ಯಕ್ಷರೋ? ಅಥವಾ ಕಾಂಗ್ರೆಸ್ ಉಸ್ತುವಾರಿಯೋ? ಈ ಅಸಹಾಯಕತೆಯ ಮಾತುಗಳಿಂದ ತಿಳಿಯುತ್ತದೆ ಅಧ್ಯಕ್ಷರಾಗಿದ್ದರೂ ನಿಮಗೆ ಚಲಾಯಿಸಲು ಯಾವುದೇ ಅಧಿಕಾರ ಇಲ್ಲ. ತಾವೊಬ್ಬ “ರಬ್ಬರ್ ಸ್ಟಾಂಪ್ ಅಧ್ಯಕ್ಷ” ಎಂಬುದು ಸಾಬೀತಾಗುತ್ತಿದ್ದು, ಜೊತೆಗೆ ಕಾಂಗ್ರೆಸ್ ಪಕ್ಷದ ಗುಲಾಮಿತನವನ್ನು ಜಗಜ್ಜಾಹೀರುಗೊಳಿಸಿದೆ ಎಂದು ವ್ಯಂಗ್ಯವಾಡಿದೆ.