ಬೆಂಗಳೂರು: 140 ಶಾಸಕರನ್ನು ಹೊಂದಿದ್ದರೂ ಕಾಂಗ್ರೆಸ್ ಆಡಳಿತ ನಡೆಸಲು ಸಾಧ್ಯವಿಲ್ಲವೆಂದಾದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಸವಾಲೆಸೆದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿಯ ಅಧಿವೇಶನದಲ್ಲಿ ತಮ್ಮ ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸಲಾಗುವುದು ಎಂದು ರೈತರು ಆಶಿಸುತ್ತಿರುವುದರಿಂದ ಬೆಳಗಾವಿ ಅಧಿವೇಶನದ ಸಮಯದಲ್ಲಿ ಚರ್ಚೆಗಳು ಅರ್ಥಪೂರ್ಣವಾಗಿರುವುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ರೈತರು ಚಳಿಗಾಲದ ಅಧಿವೇಶನವನ್ನು ಕಾತರದಿಂದ ಕಾಯುತ್ತಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆ, ಮೆಕ್ಕೆ ಜೋಳ, ಭತ್ತ ಬೆಳೆಯುವ ರೈತರಿಗೆ ಸರಕಾರವು ಪರಿಹಾರ ಕೊಡುವುದಾಗಿ ರೈತರು ಕಾಯುತ್ತಿದ್ದಾರೆ. ಅಡಿಕೆ ಬೆಳೆಗಾರರೂ ಸಂಕಷ್ಟದಲ್ಲಿದ್ದು, ಇದ್ಯಾವುದಕ್ಕೂ ಪರಿಹಾರ ನೀಡುವ ಲಕ್ಷಣ ಕಾಣುತ್ತಿಲ್ಲ ಎಂದು ಎಂದರು.
ಆಡಳಿತ ನಡೆಸಲು ಸಾಧ್ಯವಿದ್ದರೆ ನಡೆಸಿ, ಇದೇ ರೀತಿ ಕಿತ್ತಾಟ ಮಾಡಿಕೊಂಡು ದೆಹಲಿಯಲ್ಲಿ ನಾಲ್ಕು ದಿನ, ಬೆಂಗಳೂರಿನಲ್ಲಿ 3 ದಿನ ಇರುವುದಾದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ ಎಂದು ಆಗ್ರಹಿಸಿದರು.
ಇವರು ಬೀದಿಗಿಳಿದು ಬಡಿಗೆ ತೆಗೆದುಕೊಂಡು ಹೊಡೆದಾಡುವ ಸನ್ನಿವೇಶ ಸೃಷ್ಟಿಯಾಗಿದೆ. ಅವರು ಹೊಡೆದಾಡಿಕೊಂಡರೆ ನಾವೇನು ಮಾಡಬೇಕೆಂದು ಯೋಚಿಸುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ಸಿನ ಒಳಗಿನ ಬಡಿದಾಟದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಇದರ ನಡುವೆ ಕಬ್ಬು ಬೆಳೆಗಾರರು, ತೊಗರಿ, ಹುರುಳಿ ಬೆಳೆಗಾರರು ಸೇರಿ ರೈತರು ಸಂಕಷ್ಟದಲ್ಲಿದ್ದಾರೆ. ಮೆಕ್ಕೆಜೋಳ, ಭತ್ತ ಬೆಳೆಯುವ ರೈತರು ಖರೀದಿ ಕೇಂದ್ರ ಪ್ರಾರಂಭಿಸಲು ಬೊಬ್ಬೆ ಹೊಡೆಯುತ್ತಿದ್ದಾರೆ. ಪಾಪ, ಮುಖ್ಯಮಂತ್ರಿಗಳಿಗೆ ಸಮಸ್ಯೆಗಳನ್ನು ಪರಿಹರಿಸಲು ಸಮಯ ಸಿಗುತ್ತಿಲ್ಲ.
ನಮ್ಮ ನಿಲುವು ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟದಲ್ಲಿ ನಮಗೆ ಆಸಕ್ತಿ ಇಲ್ಲ, ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್ ಆಗಲೀ, ಮತ್ಯಾರಾದರೂ ಹೊರಗೆ ಬಂದರೆ ಅವರಿಗೆ ಬಾಹ್ಯ ಬೆಂಬಲ ಕೊಡುವುದಾಗಲೀ ಅಥವಾ ಬೆಂಬಲ ಪಡೆಯುವುದಾಗಲೀ ಪ್ರಶ್ನೆ ಉದ್ಭವವಾಗುವುದಿಲ್ಲ. ಮತದಾರರು ನಮ್ಮನ್ನು ವಿಪಕ್ಷವಾಗಿ ಕೂರಿಸಿದ್ದಾರೆ. ವಿಪಕ್ಷವಾಗಿ ಜವಾಬ್ದಾರಿಯುತ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಅದರ ಬಗ್ಗೆ ಚರ್ಚೆ ಮಾಡುವ ಪ್ರಶ್ನೆ ಇಲ್ಲ ಎಂದರು.