ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸಿಎಂ ಕುರ್ಚಿ ಗುದ್ದಾಟದ ನಡೆದ ಸಿಎಂ ಆಪ್ತ ಗುಂಪಿನಿಂದ ಮತ್ತೊಂದು ಸ್ಪೋಟಕ ಸಂದೇಶ ರವಾನೆಯಾಗಿದೆ.
ಕಾಂಗ್ರೆಸ್ ಹೈಕಮಾಂಡ್ ನಾಯಕತ್ವ ಬದಲಾವಣೆಗೆ ನಿರ್ಧರಿಸಿದರೆ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಗುರುವಾರ ಹೇಳಿದ್ದಾರೆ.
ಮುಖ್ಯಮಂತ್ರಿ ಆಕಾಂಕ್ಷೆ ಬಗ್ಗೆ ಕೇಳಿದಾಗ, ನಾನು ಮುಖ್ಯಮಂತ್ರಿ ರೇಸ್‌ನಲ್ಲಿದ್ದೇನೆ ಎಂದು ಸ್ವಾಭಾವಿಕವಾಗಿಯೇ ಉತ್ತರಿಸುತ್ತೇನೆ. ಆದರೆ ಅಧಿಕಾರ ಬದಲಾವಣೆಯಾಗಿ ಡಿಕೆ ಮುಖ್ಯಮಂತ್ರಿಯಾದರೆ, ನಾವು ಅದನ್ನು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದರು.
ಇದು ರಾಜ್ಯದಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಹುದ್ದೆ ಪೈಪೋಟಿ ನಡುವೆ ಸಿದ್ದರಾಮಯ್ಯ ಬಣದಿಂದ ಬಂದ ಮಹತ್ವದ ಸಂದೇಶವಾಗಿದೆ. ಪಕ್ಷ ಒಪ್ಪಿದರೆ ಬದಲಾವಣೆ ಸುಗಮವಾಗಿರುತ್ತದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಹುದ್ದೆ ಆಕಾಂಕ್ಷೆ ತನಗೂ ಇದೆ ಎಂದು ಅವರು ಪುನರುಚ್ಚರಿಸಿದರು. ಪಕ್ಷಕ್ಕಾಗಿ ತನ್ನ ಕೊಡುಗೆ ಹೈಕಮಾಂಡ್ ಗೆ ತಿಳಿದಿದೆ. ಆದರೆ ಅಂತಿಮ ತೀರ್ಮಾನವನ್ನು ಅವರಿಗೆ ಬಿಟ್ಟಿದ್ದೇನೆ ಎಂದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ "ಮುಖ್ಯಮಂತ್ರಿ ಹುದ್ದೆಗೆ ಸೂಕ್ತ ಅಭ್ಯರ್ಥಿ" ಎಂದು ಪರಮೇಶ್ವರ್ ಹೇಳಿದರು. ಆದರೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಯಾವುದೇ ಒಪ್ಪಂದದ ಬಗ್ಗೆ ತಮಗೆ ತಿಳಿದಿಲ್ಲ ಎಂದರು.
ಅಧಿಕಾರ ಸೂತ್ರ ಹಂಚಿಕೆ ವರದಿ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಪ್ತರ ಒತ್ತಡದ ನಡುವೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವದಂತಿ ಜೋರಾಗಿ ನಡೆಯುತ್ತಿದ್ದು, ರಾಜ್ಯ ರಾಜಕಾರಣ ತೀವ್ರ ಕುತೂಹಲ ಕೆರಳಿಸಿದೆ.