ಚಿಕ್ಕಮಗಳೂರು: ಬಿಜೆಪಿಗೆ ಡಿ.ಕೆ ಶಿವಕುಮಾರ್ ಅವರ ಅವಶ್ಯಕತೆಯಿಲ್ಲ ಆ ಬಗ್ಗೆ ನಾವು ಯೋಚಿಸಿಯೂ ಇಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಡಿಕೆಶಿಗೆ ಬಿಜೆಪಿಯಿಂದ ಬೆಂಬಲದವಿದೆ ಎಂಬ ವದಂತಿ ಬಗ್ಗೆ ಪ್ರತಿಕ್ರಿಯಿಸಿದರು. ಅವರ ಅವಶ್ಯಕತೆ ನಮಗಿಲ್ಲ. ಅದರ ಬಗ್ಗೆ ನಾವು ಚಿಂತನೆಯನ್ನು ಕೂಡ ಮಾಡಿಲ್ಲ. ಬಿಜೆಪಿ ಬಲಿಷ್ಠವಾಗಿದೆ ಎಂದಿದ್ದಾರೆ.
ಸೀಟಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಟಕವಾಡುತ್ತಿದ್ದು, ಜನಾದೇಶ ಧಿಕ್ಕರಿಸಿದ್ದಾರೆ. ಜನಾದೇಶಕ್ಕೆ ಬೆಲೆ ಕೊಡದ ಇವರಿಗೆ ನೈತಿಕತೆಯೇ ಇಲ್ಲ. ಇದೊಂದು ಭ್ರಷ್ಟ, ಲಜ್ಜೆಗೆಟ್ಟ, ಮರ್ಯಾದೆಯಿಲ್ಲದ ಸರ್ಕಾರ, ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ.
ಹಿಂದೆ ಬಿಜೆಪಿ ಮೇಲೆ 40 ಪರ್ಸೆಂಟ್ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು. ಆದರೀಗ ರಾಜ್ಯದಲ್ಲಿ ಶೇ.60-70ರಷ್ಟು ಭ್ರಷ್ಟಾಚಾರ ನಡೆಯುತ್ತಿದ್ದು, ಸಾರ್ವಜನಿಕರ ಹಣವನ್ನು ತಿಂದು ತೇಗುತ್ತಿದ್ದಾರೆ.
ಇನ್ನು ಜಾಸ್ತಿ ದಿನ ಕಾಯುವುದು ಬೇಡ, ಕೆಲವೇ ದಿನಗಳಲ್ಲಿ ಸರ್ಕಾರ ಪತನವಾಗಲಿದೆ. ಇವರ ಪಾಪದ ಕೊಡ ತುಂಬಿ ಹೋಗಿದ್ದು, ಅದಕ್ಕೆ ಪ್ರಾಯಶ್ಚಿತವೂ ಆಗಬೇಕಿದೆ ಎಂದರು. ಡಿಕೆಶಿ ಮುಖ್ಯಮಂತ್ರಿಯಾದರೆ ಬಿಜೆಪಿಯವರು ಕೈಜೋಡಿಸುತ್ತಾರಾ ಎಂಬ ಪ್ರಶ್ನೆಗೆ, ನಮಗೆ ಏನಕ್ಕೆ ಬೇಕು ಇದೆಲ್ಲ. ಅವರನ್ನು ಕಟ್ಟಿಕೊಂಡು ನಾವು ಏನು ಮಾಡೋಣ?
ಅವರಿಗೆ ಧೈರ್ಯವಿದ್ದರೆ ಸರ್ಕಾರ ವಿಸರ್ಜನೆ ಮಾಡಲಿ. ಚುನಾವಣೆಗೆ ಹೋಗೋಣ. ಬಿಜೆಪಿ ಬಲಾಢ್ಯವಾಗಿದ್ದು, ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ನಾಯಕತ್ವದ ಮೇಲೆ ನಿಂತಿದೆ. ರಾಷ್ಟ್ರಕ್ಕೆ, ರಾಜ್ಯಕ್ಕೆ ಒಳ್ಳೆಯದಾಗಬೇಕು ಎಂಬುದು ನಮ್ಮ ಆಶಯ ಎಂದರು.