ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನಾಯಕತ್ವದ ಬಗ್ಗೆ ಜೋರಾದ ಚರ್ಚೆ ನಡೆಯುತ್ತಿರುವಂತೆಯೇ ನನಗೇನೂ ಬೇಡ, ಆತುರಪಡಲು ಬಯಸುವುದಿಲ್ಲ ಮತ್ತು ಪಕ್ಷದ ಹೈಕಮಾಂಡ್ ಸಿಎಂ ಹುದ್ದೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪುನರುಚ್ಚರಿಸಿದ್ದಾರೆ.
ಅಧಿಕಾರಕ್ಕಾಗಿ ಬಣ ಬಡಿದಾಟಗಳ ನಡುವೆ ಒಕ್ಕಲಿಗ ಸಮುದಾಯದ ನಂಜಾವದೂತ ಸ್ವಾಮೀಜಿ ಅವರೊಂದಿಗಿನ ಭೇಟಿಯ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಕಾಂಗ್ರೆಸ್ ನನ್ನ ಸಮುದಾಯವಾಗಿದ್ದು, ರಾಜ್ಯದ ಎಲ್ಲಾ ಸಮುದಾಯಗಳನ್ನು ಸಮಾನವಾಗಿ ನೋಡುವುದಾಗಿ ಹೇಳಿದರು.
ನನಗೆ ಏನೂ ಬೇಡ. ಯಾವುದಕ್ಕೂ ಆತುರಪಡುತ್ತಿಲ್ಲ. ನನ್ನ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ. ನಾನು ಯಾವುದೇ ಒಂದು ಸಮುದಾಯಕ್ಕೆ ಸೇರಿಲ್ಲ. ಕಾಂಗ್ರೆಸ್ ನನ್ನ ಸಮುದಾಯ. ಸಮಾಜದ ಎಲ್ಲಾ ವರ್ಗಗಳನ್ನು ನಾನು ಪ್ರೀತಿಸುತ್ತೇನೆ ಎಂದರು.
ಖಂಡಿತವಾಗಿ ದೆಹಲಿಗೆ ಹೋಗ್ತೀನಿ: ಮುಖ್ಯಮಂತ್ರಿ ಹುದ್ದೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಜೊತೆ ಸಭೆ ನಡೆಯಲಿದೆ ಎಂಬ ವದಂತಿಗಳಿದ್ದರೂ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ಕರ್ನಾಟಕದ ರೈತ ಸಮಸ್ಯೆಗಳನ್ನು ಇಟ್ಟುಕೊಳ್ಳಲು ದೆಹಲಿಗೆ ಭೇಟಿ ನೀಡುವುದಾಗಿ ಶಿವಕುಮಾರ್ ಹೇಳಿದರು.
ಖಂಡಿತವಾಗಿಯೂ ದೆಹಲಿಗೆ ಹೋಗುತ್ತೇನೆ. ಅದು ನಮ್ಮ ದೇವಾಲಯ. ಕಾಂಗ್ರೆಸ್‌ಗೆ ದೀರ್ಘ ಇತಿಹಾಸವಿದ್ದು, ದೆಹಲಿ ಯಾವಾಗಲೂ ನಮಗೆ ಮಾರ್ಗದರ್ಶನ ನೀಡುತ್ತದೆ. ಅವರು ನನ್ನನ್ನು, ಪಕ್ಷದ ನಾಯಕರು ಮತ್ತು ಮುಖ್ಯಮಂತ್ರಿಯನ್ನು ಕರೆದಾಗ, ನಾವು ಅಲ್ಲಿಗೆ ಹೋಗುತ್ತೇವೆ ಎಂದರು.
ಸಂಸದರನ್ನು ಭೇಟಿಯಾಗಬೇಕಾಗಿದೆ: 'ನನಗೆ ದೆಹಲಿಯಲ್ಲಿ ಬಹಳಷ್ಟು ಕೆಲಸಗಳಿವೆ. ಸಂಸತ್ತಿನ ಚಳಿಗಾಲದ ಅಧಿವೇಶನ ಬರುತ್ತಿದ್ದು, ಸಂಸದರನ್ನು ಭೇಟಿಯಾಗಬೇಕಾಗಿದೆ. ಏಕೆಂದರೆ ನಮ್ಮ ಕೆಲವು ಯೋಜನೆಗಳನ್ನು ಮುಂದಕ್ಕೆ ತೆಗೆದುಕೊಳ್ಳಬೇಕಾಗಿದೆ. ಮುಖ್ಯಮಂತ್ರಿ ಕೇಂದ್ರದೊಂದಿಗೆ ಸಮಸ್ಯೆಗಳನ್ನು ಚರ್ಚಿಸುತ್ತಿದ್ದಾರೆ. ಮೆಕ್ಕೆಜೋಳದ ಸಮಸ್ಯೆ ಇದೆ. ಕೇಂದ್ರ ಸರ್ಕಾರ ರೈತರಿಗೆ ಬೆಂಬಲ ನೀಡುತ್ತಿಲ್ಲ ಅಥವಾ ಸಹಾಯ ಮಾಡುತ್ತಿಲ್ಲ. ನಾವು ಕಾರ್ಖಾನೆ ಮಾಲೀಕರ ಸಭೆ ಕರೆಯಲು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದರು.
ನವೆಂಬರ್‌ನಲ್ಲಿ ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷಗಳನ್ನು ಪೂರೈಸಿದ ನಂತರ ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಬಣ ಬಡಿದಾಟ ಶುರುವಾಯಿತು.
ಡಿಕೆಶಿ ಭೇಟಿಯಾದ ಶಾಸಕರು: ಈ ಮಧ್ಯೆ ಮಾಲೂರು, ಕೋಲಾರ, ಮುಳಬಾಗಿಲು ಮತ್ತು ಕುಣಿಗಲ್ ಶಾಸಕರು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದು, ರಾಜ್ಯ ರಾಜಕೀಯದ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಮಾಲೂರಿನ ಕೆ. ವೈ. ನಂಜೇಗೌಡ, ಕೋಲಾರದ ಕೊತ್ತೂರು ಮಂಜುನಾಥ್, ಮುಳಬಾಗಿಲಿನ ಆದಿ ನಾರಾಯಣ, ಕುಣಿಗಲ್ ನ ಡಾ. ರಂಗನಾಥ್ ಮತ್ತು ಪ್ರೊಫೆಸರ್ ಎಂ. ವಿ. ರಾಜೇಗೌಡ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದು, ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.