ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ಸಿದ್ದರಾಮಯ್ಯ-ಡಿಕೆಶಿ ಒಗ್ಗಟ್ಟು ಪ್ರದರ್ಶನ: "ಏಕತೆಯ"ಯ ಹಿಂದಿದೆ ಬಿಡಿಸಲಾಗದ ಕಗ್ಗಂಟು; ಕ್ಷಣಿಕ 'ಆಪ್ಟಿಕ್ಸ್' ಎನ್ನುವುದು ಗ್ಯಾರಂಟಿ..!

ನಿಜ ಹೇಳಬೇಕು ಅಂದರೆ ಇದು ದಿನಬೆಳಗಾದರೆ ಒಬ್ಬರ ಮೇಲೊಬ್ಬರು ಹೊಂಚು ಹಾಕುವ, ಕತ್ತಿ ಮಸಿಯುವ ಎರಡು ಯುದ್ಧ ನಿರತ ಬಣಗಳ ಕಮಾಂಡರ್‌ಗಳ ನಡುವಿನ "ಕದನ ವಿರಾಮ" ಸಭೆಯಂತೆ ಕಾಣಿಸಿತು.

ಡಿಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಜೊತೆಗೆ ಮಲ್ಲಿಕಾರ್ಜುನ ಖರ್ಗೆ.
Manjula VN
Updated On : 30 Nov 2025, 10:26 am

ಬೆಂಗಳೂರು: ಇಬ್ಬರೂ ನಾಯಕರು ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿರುವ ಎಲ್ಲಾ ಗೊಂದಲಗಳಿಗೆ ಮಾಧ್ಯಮಗಳನ್ನೇ ದೂಷಿಸುತ್ತಿರುವುದು. ಇಷ್ಟಕ್ಕೂ ಈ ಗೊಂದಲ ಸೃಷ್ಟಿಸಿದ್ದು ಯಾರು? ಮಾಧ್ಯಮಗಳೋ, ತಾವುಗಳೋ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರಿಗೆ ಬಿಜೆಪಿ ಪ್ರಶ್ನೆ ಮಾಡಿದೆ.

ಬಿಜೆಪಿಯ ಹಿರಿಯ ಶಾಸಕ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ.ಶಿವಕುಮಾರ್ ಅವರ ನಡುವಿನ ಬಹುನಿರೀಕ್ಷಿತ 'ಬೆಳಗಿನ ಉಪಾಹಾರ ಶೃಂಗಸಭೆ' ಅಂತೂ ಇಂತೂ ಜರುಗಿದೆ. ಅಸಲಿಗೆ ಇದನ್ನು "ಬ್ರೇಕ್‌ಫಾಸ್ಟ್ ಮೀಟಿಂಗ್" ಎಂದು ಕರೆಯುವುದು ಒಂದು ಔದಾರ್ಯವೇ ಸರಿ. ನಿಜ ಹೇಳಬೇಕು ಅಂದರೆ ಇದು ದಿನಬೆಳಗಾದರೆ ಒಬ್ಬರ ಮೇಲೊಬ್ಬರು ಹೊಂಚು ಹಾಕುವ, ಕತ್ತಿ ಮಸಿಯುವ ಎರಡು ಯುದ್ಧ ನಿರತ ಬಣಗಳ ಕಮಾಂಡರ್‌ಗಳ ನಡುವಿನ "ಕದನ ವಿರಾಮ" ಸಭೆಯಂತೆ ಕಾಣಿಸಿತು ಎಂದು ಹೇಳಿದ್ದಾರೆ.

ಎಲ್ಲಕ್ಕಿಂತ ಮಿಗಿಲಾದ ಅತ್ಯಂತ ಹಾಸ್ಯಾಸ್ಪದ ಸಂಗತಿ ಏನೆಂದರೆ - ಇಬ್ಬರೂ ನಾಯಕರು ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿರುವ ಎಲ್ಲಾ ಗೊಂದಲಗಳಿಗೆ ಮಾಧ್ಯಮಗಳನ್ನೇ ದೂಷಿಸುತ್ತಿರುವುದು. ಪ್ರಶ್ನೆ ಇಷ್ಟೇ, ಇಷ್ಟಕ್ಕೂ ಈ ಗೊಂದಲ ಸೃಷ್ಟಿಸಿದ್ದು ಯಾರು? ಮಾಧ್ಯಮಗಳೋ, ತಾವುಗಳೋ? ಎಂದು ಪ್ರಶ್ನಿಸಿದ್ದಾರೆ.

Advertisement

Advertisement

ನವೆಂಬರ್‌ನಲ್ಲಿ ‘ಕ್ರಾಂತಿ’ ಎಂದು ಕರೆ ನೀಡಿ, ಹೇಳಿಕೆಗಳ ಮೇಲೆ ಹೇಳಿಕೆ ಕೊಟ್ಟು, ಪಕ್ಷದಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿದ್ದು ಪತ್ರಕರ್ತರಾ? "ಕೊಟ್ಟ ಮಾತು ಉಳಿಸಿಕೊಳ್ಳವವನು ನಿಜವಾದ ನಾಯಕ," "ಐದಾರು ಜನರ ಮಧ್ಯೆ ನಡೆದಿರುವ 'ವ್ಯಾಪಾರ'", "ಐದು ವರ್ಷ ನಾನೇ ಸಿಎಂ" ಎಂದೆಲ್ಲಾ ಬಹಿರಂಗ ಹೇಳಿಕೆಗಳ ಮೂಲಕ ಬಿಕ್ಕಟ್ಟು ಸೃಷ್ಟಿಸಿದ್ದು ಪತ್ರಕರ್ತರಾ? ಶಕ್ತಿ ಪ್ರದರ್ಶನಕ್ಕೆಂದು ಶಾಸಕರ ಗುಂಪುಗಳನ್ನು ಕಟ್ಟಿಕೊಂಡು ತಂಡ ತಂಡವಾಗಿ ದೆಹಲಿಗೆ ಹೋಗಿ, ಗುಪ್ತ ಸಭೆಗಳನ್ನು ನಡೆಸಿದ್ದು ಪತ್ರಕರ್ತರಾ? ಎಂದು ಸರಣಿ ಪ್ರಶ್ನೆ ಮಾಡಿದ್ದಾರೆ.

ಇವತ್ತು ರಾಜ್ಯದಲ್ಲಿ ಸೃಷ್ಟಿ ಆಗಿರುವ ಈ ಎಲ್ಲಾ ಗೊಂದಲಗಳಿಗೆ ಕಾರಣವೇನು ಗೊತ್ತೇ? ತಮ್ಮಿಬ್ಬರ ಒಣಪ್ರತಿಷ್ಠೆ, ಅಧಿಕಾರದ ಲಾಲಸೆ ಮತ್ತು ಶಾಸಕರ ಗುಂಪುಗಾರಿಕೆಯೇ ಕಾರಣವೇ ಹೊರತು, ನಿಮ್ಮ ನಾಟಕಗಳನ್ನು ವರದಿ ಮಾಡಿ ಸತ್ಯವನ್ನು ಬಿತ್ತರಿಸಿದ ಮಾಧ್ಯಮಗಳಲ್ಲ. ಈ ತೋರಿಕೆಯ "ಏಕತೆಯ ಪ್ರದರ್ಶನ"ದ ಹಿಂದೆ ಎಲ್ಲರಿಗೂ ಸ್ಪಷ್ಟವಾಗಿ ಕಾಣುತ್ತಿರುವುದು ಬಿಡಿಸಲಾಗದ ಕಗ್ಗಂಟು ಮತ್ತು ಸಂಪೂರ್ಣವಾಗಿ ಒಡೆದ ಕನ್ನಡಿಯ ಚೂರುಗಳೇ ಹೊರತು, ಯಾವುದೇ ಪ್ರಾಮಾಣಿಕ ಮೈತ್ರಿಯಲ್ಲ. ಇದು ಕೇವಲ ಒಂದು ಕ್ಷಣಿಕ 'ಆಪ್ಟಿಕ್ಸ್' ಅಷ್ಟೇ ಎನ್ನುವುದು ಮಾತ್ರ ಗ್ಯಾರಂಟಿ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ನಾಯಕ ಲೆಹರ್ ಸಿಂಗ್ ಸಿರೋಯಾ ಕೂಡ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಾರ್ಶ್ವವಾಯುವಿಗೆ ಸಿಲುಕಿದೆ. ಇಲ್ಲಿ ಸಣ್ಣ ಹಾಗೂ ದೊಡ್ಡ ನಾಯಕರು ಕೂಡ ಸಮಸ್ಯೆಗೆ ಪರಿಹಾರ ನೀಡುತ್ತಿದ್ದಾರೆ. ಈ ಪರಿಸ್ಥಿತಿಯನ್ನು ನೋಡಿದರೆ, ನನ್ನ ಹುಟ್ಟೂರು ಉದಯಪುರದಲ್ಲಿ ಆಗಾಗ್ಗೆ ಬಳಸಲಾಗುವ ಒಂದು ಮಾತು ನನಗೆ ನೆನಪಾಗುತ್ತದೆ. ಆನೆ ಜೌಗು ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡರೆ, ಹೆಣ್ಣು ಕಪ್ಪೆ ಕೂಡ ಅದಕ್ಕೆ ಒದೆಯಲು ಇಷ್ಟಪಡುತ್ತದೆ. ಬಿಕ್ಕಟ್ಟು ಪರಿಹರಿಸಲು ಡಿಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಉಪಹಾರ ಸಭೆಯಲ್ಲಿ ಭಾಗಿಯಾಗಿರುವುದು ರಾಜ್ಯದ ಬಿಕ್ಕಟನ್ನು ಪರಿಹರಿಸಲು ಕಾಂಗ್ರೆಸ್ ಹೈಕಮಾಂಡ್ ಅಸಮರ್ಥತೆಯನ್ನು ತೋರಿಸುತ್ತದೆ. ಜೌಗು ಪ್ರದೇಶದಲ್ಲಿ ಆನೆ ಸಿಲುಕಿಕೊಂಡಿರುವ ಪರಿಸ್ಥಿತಿ ಕಾಂಗ್ರೆಸ್ ಪಕ್ಷದ್ದಾಗಿದೆ. ಇದೀಗ ಅಲ್ಲಿಂದ ಹೊರಬರುವುದು ಎಷ್ಟು ಸುಲಭವಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಜೆಡಿಎಸ್ ಪ್ರತಿಕ್ರಿಯಿಸಿ ಕಾಂಗ್ರೆಸ್‌ನಲ್ಲಿ ತಿಂಡಿ ತಿನ್ನಿಸೋಕ್ಕೆ ಹೈಕಮಾಂಡ್‌ ಬರಬೇಕಾಯ್ತು. ಕಾಂಗ್ರೆಸ್ ರಾಜ್ಯಕ್ಕೆ ಉತ್ತಮ ಆಡಳಿತ ನೀಡುತ್ತೇವೆ ಎಂದು ಸುಳ್ಳು ಭರವಸೆಗಳನ್ನು ಕೊಟ್ಟು, ಜನರನ್ನು ಯಾಮಾರಿಸುತ್ತಿರುವ ಕಾಂಗ್ರೆಸ್ ಸರ್ಕಾರ, ಕುರ್ಚಿಗಾಗಿ 2.5 ವರ್ಷಕ್ಕೇ ಬಣಗಳಾಗಿ ಒಡೆದು ಹೋಳಾಗಿದೆ ಎಂದು ಕಿಡಿಕಾರಿದೆ.

Also Read

Watch | ಸಿಎಂ-ಡಿಸಿಎಂ ಒಗ್ಗಟ್ಟಿನ ಮಂತ್ರ! ಇದೇನಿದು ಹೈಕಮಾಂಡ್ ತಂತ್ರ?

ಅಧಿಕಾರಕ್ಕಾಗಿ ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ತಮ್ಮ ಪರ-ವಿರೋಧ ಶಾಸಕರ ಪಟಾಲಂಗೆ ಮೇವು ಹಾಕಿ ದಿನಬೆಳಗಾದರೆ ಕೂಗುಮಾರಿಯಂತೆ ನೋಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಬೆಳೆಗಳಿಗೆ ಬೆಂಬಲ ಬೆಲೆ ಸಿಗದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ನೆರೆಹಾನಿ, ಕಬ್ಬು, ಮೆಕ್ಕೆಜೋಳ ಬೆಲೆ ಕುಸಿತದಿಂದ ಅನ್ನದಾತರು ಕಂಗಾಲಾಗಿದ್ದಾರೆ. ಬೆಲೆ ಏರಿಕೆ , ಮೂಲಸೌಕರ್ಯ ಕೊರತೆ, ಸಾವಿರಾರು ಸರ್ಕಾರಿ ಶಾಲೆಗಳು ಬಂದ್‌, ಅಭಿವೃದ್ಧಿ ಇಲ್ಲದೆ ಜನಸಾಮಾನ್ಯರು ಹೈರಾಣಾಗಿದ್ದಾರೆ.

ಇವೆಲ್ಲದರ ಪರಿವೇ ಇಲ್ಲದೇ, ಕುರ್ಚಿಗಾಗಿ ಭಂಡ ಸಿಎಂ-ಡಿಸಿಎಂ ಬ್ರೇಕ್‌ ಫಾಸ್ಟ್‌ ಮೀಟಿಂಗ್‌, ಹೈಕಮಾಂಡ್‌ ಮೀಟಿಂಗ್‌, ಬೆಂಬಲಿಗರ ಮೀಟಿಂಗ್‌, ಟೆಂಪಲ್‌ ರನ್‌ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದು, ರಾಜ್ಯದ ಪರಿಸ್ಥಿತಿ ಅದೋಗತಿಗೆ ಇಳಿಸಿದ್ದಾರೆಂದು ವಾಗ್ದಾಳಿ ನಡೆಸಿದೆ.

ಇದರಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಜೆಡಿಎಸ್ ನಾಯಕ ಮತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement