ಬೆಂಗಳೂರು: ಬಿಜೆಪಿಯು 'ವೋಟ್ ಚೋರಿ' (ಮತ ಕಳ್ಳತನ) ಮೂಲಕ ಜನರ ಆದೇಶವನ್ನು ಕದಿಯಲು 'ಯೋಜಿತ ಪಿತೂರಿ' ನಡೆಸುತ್ತಿದೆ. ಇದು 'ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಶುಕ್ರವಾರ ಆರೋಪಿಸಿದ್ದಾರೆ.
'ವೋಟ್ ಚೋರಿ' ಕೇವಲ ಮಹದೇವಪುರ ವಿಧಾನಸಭಾ ಕ್ಷೇತ್ರ ಅಥವಾ ಆಳಂದ ಅಥವಾ ಮಹಾರಾಷ್ಟ್ರದ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಪುಲಕೇಶಿನಗರದಲ್ಲಿ ನಡೆದ ಮತ ಕಳ್ಳತನದ ವಿರುದ್ಧ ಸಹಿ ಅಭಿಯಾನವನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಜನರ ಆದೇಶವನ್ನು ಕದಿಯುವ 'ವೋಟ್ ಚೋರಿ' ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲಿನ ಉದ್ದೇಶಪೂರ್ವಕ ದಾಳಿಯಾಗಿದೆ. ಬಿಜೆಪಿಯ ದುಷ್ಟ ಶಕ್ತಿಗಳು ನಿಮ್ಮ ಆಯ್ಕೆಯ ವ್ಯಕ್ತಿಯನ್ನು ಆಯ್ಕೆ ಮಾಡುವ ನಿಮ್ಮ ಹಕ್ಕನ್ನು ಕಸಿದುಕೊಳ್ಳುತ್ತಿವೆ' ಎಂದು ತಿಳಿಸಿದರು.
ಅಂಬೇಡ್ಕರ್, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಅಬ್ದುಲ್ ಕಲಾಂ ಆಜಾದ್, ಡಾ. ರಾಜೇಂದ್ರ ಪ್ರಸಾದ್ ಮತ್ತು ಇತರ ಹಲವಾರು ಸ್ವಾತಂತ್ರ್ಯ ಹೋರಾಟಗಾರರು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಒಬ್ಬ ವ್ಯಕ್ತಿ, ಒಂದು ಮತ ತತ್ವವನ್ನು ಕಸಿದುಕೊಳ್ಳುವುದು ಈ 'ಯೋಜಿತ ಪಿತೂರಿ' ಹಿಂದಿದೆ ಎಂದು ಹೇಳಿದರು.
ಮತ ಕಳ್ಳತನದಲ್ಲಿ ತೊಡಗಿರುವ ಬಿಜೆಪಿ ಶಕ್ತಿಗಳು ಮತ್ತು 'ಬಂಧಿಯಾಗಿರುವ' ಭಾರತೀಯ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಪಕ್ಷವು 'ವೋಟ್ ಚೋರಿ' ಕುರಿತು ರಾಷ್ಟ್ರವ್ಯಾಪಿ ಸಹಿ ಅಭಿಯಾನವನ್ನು ಪ್ರಾರಂಭಿಸಿದೆ. ಚುನಾವಣಾ ಆಯೋಗವು ಮೂಕ ಪ್ರೇಕ್ಷಕ ಮತ್ತು ಭಾಗಿದಾರನಾಗಿದೆ ಎಂದು ಆರೋಪಿಸಿದರು.
'ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿ ಅವರು ದತ್ತಾಂಶವನ್ನು ಬಹಿರಂಗಪಡಿಸುತ್ತಿದ್ದಂತೆ, ಸಂವಿಧಾನದ ಮೇಲೆ, ಮತದಾನದ ಹಕ್ಕಿನ ಮೇಲೆ, ಪ್ರಜಾಪ್ರಭುತ್ವದ ಮೇಲೆ ಮತ್ತು ಭಾರತದ ಆತ್ಮದ ಮೇಲೆ ನಡೆದ ದಾಳಿಯ ವ್ಯಾಪ್ತಿಯನ್ನು ಇಡೀ ರಾಷ್ಟ್ರವು ಅರ್ಥಮಾಡಿಕೊಳ್ಳುತ್ತದೆ' ಎಂದರು.
ಇತ್ತೀಚಿನ ಅಧಿಕಾರ ಹಂಚಿಕೆ ಹೇಳಿಕೆಗಳ ನಂತರ ಕಾಂಗ್ರೆಸ್ ಕೆಲವು ನಾಯಕರಿಗೆ ನೋಟಿಸ್ ನೀಡಿರುವುದರ ಕುರಿತು, ಪಕ್ಷದಲ್ಲಿನ ಯಾವುದೇ ಭಿನ್ನಾಭಿಪ್ರಾಯದ ಬಗ್ಗೆ ವರದಿಗಳನ್ನು ಅವರು ತಳ್ಳಿಹಾಕಿದರು.
'ನಮ್ಮ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಅಧ್ಯಕ್ಷರು ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪಕ್ಷದ ಎಲ್ಲ ಸದಸ್ಯರು ಪಕ್ಷದ ಅಧಿಕೃತ ನಿಲುವನ್ನು ಅನುಸರಿಸುವಂತೆ ಮತ್ತು ಗಡಿ ಮೀರಿ ಮಾತನಾಡದಂತೆ ನೋಡಿಕೊಳ್ಳುವ ಸಂಪೂರ್ಣ ಅಧಿಕಾರವನ್ನು ಹೊಂದಿದ್ದಾರೆ. ಅಂತವರನ್ನು ನಿಭಾಯಿಸಲು ನಾನು ಶಿವಕುಮಾರ್ ಅವರಿಗೆ ಸೂಚಿಸಿದ್ದೇನೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಳುತ್ತಿದ್ದಾರೆ.
ರಾಜ್ಯದ ಜನರಿಗೆ ಆಡಳಿತದಲ್ಲಿ ಪೂರ್ಣ ಭಾಗವಹಿಸುವಿಕೆ ಮತ್ತು ಐದು ಭರವಸೆಗಳ ಯಶಸ್ಸನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಪಕ್ಷದ ಆದ್ಯತೆಯಾಗಿದೆ ಎಂದು ಅವರು ಒತ್ತಿ ಹೇಳಿದರು.