ಬೆಳಗಾವಿ: ಮುಂಬರುವ ನವೆಂಬರ್ ಇಲ್ಲವೇ ಡಿಸೆಂಬರ್ ಒಳಗಾಗಿ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಇಳಿಯುವುದು ಖಚಿತ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಶುಕ್ರವಾರ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂವರೆ ವರ್ಷ ಆದ ಮೇಲೆ ಮುಖ್ಯಮಂತ್ರಿ ಬದಲಾವಣೆ ಮಾಡುವ ಬಗ್ಗೆ ಒಪ್ಪಂದ ಆಗಿರುವುದು ನಿಜ. ಆದರೆ, ಸಿದ್ದರಾಮಯ್ಯ ಸುಲಭವಾಗಿ ಅಧಿಕಾರ ಬಿಟ್ಟುಕೊಡುವ ವ್ಯಕ್ತಿಯಲ್ಲ. ಈ ಅಧಿಕಾರ ಜಗಳ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಈಗಾಗಲೇ ಅಧಿಕಾರಕ್ಕಾಗಿ ಜಗಳ ಆರಂಭವಾಗಿದೆ. ಸಿದ್ದರಾಮಯ್ಯ ಅವರದ್ದು ಅಧಿಕಾರ ಬಿಟ್ಟುಕೊಡುವ ಜಾಯಮಾನ ಅಲ್ಲ. ಆದರೆ ಡಿ ಕೆ ಶಿವಕುಮಾರ ಹಠ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಇಡೀ ಪಕ್ಷ ಮಂತ್ರಿ ಮಂಡಲದ ರಚನೆಯಲ್ಲಿದೆ. ಎಲ್ಲಾ ಶಾಸಕರು ನಾನು ಮಂತ್ರಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ ಈ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೂರು ಕಾಸಿನ ಬೆಲೆಯೂ ಇಲ್ಲ ಎಂದು ವಾಗ್ಧಾಳಿ ನಡೆಸಿದರು.
ಸ್ವತಃ ಕಾಂಗ್ರೆಸ್ ನಾಯಕರೇ ಸಿದ್ದರಾಮಯ್ಯ ಅವರು ಯಾವಾಗ ನಿರ್ಗಮಿಸುತ್ತಾರೆಂದು ಕೇಳುತ್ತಿದ್ದಾರೆ. ಸಿದ್ದರಾಯ್ಯ ಬಳಿಕ ಮುಂದಿನ ಸಿಎಂ ಯಾರಾಗುತ್ತಾರೆಂಬುದರ ಕುರಿತು ಗುಸುಗುಸುಗಳು ಎರಡೂವರೆ ವರ್ಷಗಳಿಂದ ಕೇಳಿಬರುತ್ತಲೇ ಇದೆ. ಶಿವಕುಮಾರ್, ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಹೆಸರುಗಳು ಓಡಾಡುತ್ತಿದೆ. ಒಂದು ವೇಳೆ ಈ ಸರಕಾರ ಬಿದ್ದುಹೋದರೆ ನಾವು ಹಿಂದಿನಂತೆ ಸರಕಾರ ರಚನೆ ಮಾಡುವ ಆಸಕ್ತಿ ಹೊಂದಿಲ್ಲ. ಬದಲಾಗಿ ಚುನಾವಣೆಗೆ ಹೋಗುವ ತಯಾರಿ ಮಾಡುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಆಂತರಿಕ ಕಿತ್ತಾಟದಲ್ಲಿ ಮುಳುಗಿರುವ ಸರ್ಕಾರ, ರಾಜ್ಯವನ್ನು ನಿರ್ಲಕ್ಷಿಸಿದೆ ಎಂದ ಅವರು, ಗುತ್ತಿಗೆದಾರರ ಸಂಘದ ಪತ್ರದ ಕುರಿತು ತೀವ್ರವಾಗಿ ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರವು "ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಎರಡು ಪಟ್ಟು ಹೆಚ್ಚು ಭ್ರಷ್ಟವಾಗಿದೆ, ಕಾಂಗ್ರೆಸ್ ಸರ್ಕಾರ ಶೇ.80ರಷ್ಟು ಕಮಿಷನ್ ಸಂಗ್ರಹಿಸುತ್ತಿದೆ ಎಂದು ಆರೋಪಿಸಿದ್ದಾರೆ.