ಬೆಳಗಾವಿ: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಶುಕ್ರವಾರ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿ ಬದಲಾಗುವುದರಿಂದ ರಾಜ್ಯದಲ್ಲಿ ಭ್ರಷ್ಟಾಚಾರ ಕೊನೆಗೊಳ್ಳಲ್ಲ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಶುಕ್ರವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಅಕಾಲಿಕ ಮಳೆಯಿಂದಾಗಿ ಬೆಳಗಾವಿ, ವಿಜಯಪುರ, ರಾಯಚೂರು, ಬೀದರ್ ಮತ್ತು ಕಲಬುರಗಿಯಂತಹ ಜಿಲ್ಲೆಗಳಾದ್ಯಂತ ರೈತರು ಭಾರಿ ಬೆಳೆ ನಷ್ಟ ಅನುಭವಿಸಿದ್ದಾರೆ. ಆದರೆ, ಸರ್ಕಾರವು ಎಲ್ಲಾ ಸೂಕ್ಷ್ಮತೆಯನ್ನು ಕಳೆದುಕೊಂಡಿದೆ. ರಾಜ್ಯದ ಸಚಿವರಿಗೆ ರೈತರ ಸಂಕಷ್ಟಕ್ಕಿಂತ ಚುನಾವಣೆಗಳು ಮುಖ್ಯ. ಬೆಳಗಾವಿ ರೈತರು ಸಂಕಷ್ಟದಲ್ಲಿದ್ದಾರೆ, ಆದರೆ, ಸಚಿವರು ರೈತರ ಕೂಗಿಗೆ ಕಿವಿಗೊಡುತ್ತಿಲ್ಲ ಎಂದು ಆರೋಪಿಸಿದರು.
ಸಿಎಂ ಆಗಿ ಮುಂದುವರೆಯುತ್ತೇನೆಂದು ಸಿದ್ದರಾಮಯ್ಯ ಅವರು ಪದೇ ಪದೇ ಹೇಳಿಕೆ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಯಾರೆಂಬುದು ಮುಖ್ಯವಲ್ಲ. ಜನರ ಕಷ್ಟಗಳಿಗೆ ಸ್ಪಂದಿಸುವುದು ಮುಖ್ಯ. ಆದರೆ ಸಿದ್ದರಾಮಯ್ಯ ಅವರು ಇನ್ನೂ ಎರಡು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಉಳಿಯುವುದಾಗಿ ಹೇಳುತ್ತಾರೆ. ಯಾವುದಕ್ಕಾಗಿ? ಭ್ರಷ್ಟಾಚಾರದ ಅಧ್ಯಕ್ಷತೆ ವಹಿಸಲೇ? ಈ ಸರ್ಕಾರದ ಅಡಿಯಲ್ಲಿ ಭ್ರಷ್ಟಾಚಾರ ದ್ವಿಗುಣಗೊಂಡಿದೆ ಎಂದು ಗುತ್ತಿಗೆದಾರರು ಇತ್ತೀಚೆಗೆ ಬರೆದ ಪತ್ರದಲ್ಲಿ ಬಹಿರಂಗವಾಗಿದೆ. ನಿಮಗೆ ನಾಚಿಕೆಯಾಗುವುದಿಲ್ಲವೇ? ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಲೆ ನಿಯಂತ್ರಣದಲ್ಲಿ ಕಾಂಗ್ರೆಸ್ ವಿಫಲವಾಗಿದೆ, ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ, 60 ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ, ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳನ್ನು ಬದಲಾಯಿಸಾಕ್ಷಣ ಏನೂ ಆಗುವುದಿಲ್ಲ. ಸಿದ್ದರಾಮಯ್ಯ, ಡಿಕೆ.ಶಿವಕುಮಾರ್ ಇಬ್ಬರೂ ಭ್ರಷ್ಟರೇ. ಸರ್ಕಾರಕ್ಕೆ ಕಣ್ಣಿದ್ದರೂ ಕುರುಡಾಗಿದೆ, ಕಿವಿಗಳಿದ್ದರೂ ಕಿವುಡಾಗಿದೆ ಎಂದು ಕಿಡಿಕಾರಿದರು.
ಬೆಳಗಾವಿಯಲ್ಲಿ ಹೊಸ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನೆ ಕುರಿತು ಪ್ರತಿಕ್ರಿಯಿಸಿ, ನಾವು ಉದ್ಘಾಟನೆಗಳನ್ನು ವಿರೋಧಿಸುವುದಿಲ್ಲ, ಆದರೆ ರೈತರ ಸಮಸ್ಯೆಗಳಿಗೆ ಸ್ಪಂದಿಸುವುದರ ಬಗ್ಗೆ ಏನು ಹೇಳುತ್ತಾರೆ? ಈ ಸರ್ಕಾರಕ್ಕೆ, ಜನರ ಬಿಕ್ಕಟ್ಟಿಗಿಂತ ಸಂಭ್ರಮಗಳೇ ಮುಖ್ಯವಾಗಿದೆ ಎಂದು ಹೇಳಿದರು.