ಬೆಂಗಳೂರು: ಜಂಬೂ ಸವಾರಿ ಆರಂಭಕ್ಕೂ ಮುನ್ನ ನಡೆದ ವೈಭವದ ದಸರಾ ಮೆರವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರ ಮೊಮ್ಮಗ ಕಾಣಿಸಿಕೊಂಡಿದ್ದಕ್ಕೆ ಬಿಜೆಪಿ ಹಾಗೂ ಜೆಡಿಎಸ್ ತೀವ್ರವಾಗಿ ಕಿಡಿಕಾರಿದೆ.
ಮೈಸೂರು ದಸರಾದ ಸರ್ಕಾರಿ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಮಹದೇವಪ್ಪ ಅವರ ಮೊಮ್ಮಗನಿಗೆ ಯಾವ ಪ್ರೋಟೋಕಾಲ್ ನೀಡಲಾಗಿತ್ತು? ಎಂದು ಬಿಜೆಪಿ ಪ್ರಶ್ನಿಸಿದೆ.
ರೂ.7 ಸಾವಿರದ ಗೋಲ್ಡನ್ ಟಿಕೆಟ್ ತೆಗೆದುಕೊಂಡ ಪ್ರವಾಸಿಗರನ್ನೇ ಒಳಗೆ ಬಿಡದೆ ಗೇಟ್‌ನಲ್ಲೇ ನಿಲ್ಲಿಸಿದ ಭ್ರಷ್ಟ ಕಾಂಗ್ರೆಸ್ ಸರ್ಕಾರ, ಸಿಎಂ ಸಿದ್ದರಾಮಯ್ಯ ಅವರ ತೆರೆದ ಜೀಪ್‌ನ ಪೆರೇಡ್‌ನಲ್ಲಿ ಮಹದೇವಪ್ಪ ಮೊಮ್ಮಗನನ್ನು ಬಿಟ್ಟಿದ್ಹೇಗೆ?
ವಿಧಾನಸೌಧದ ಆರ್'ಸಿಬಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮೊಮ್ಮಗ, ಜಮೀರ್ ಮಗ ಸೇರಿ ತಮ್ಮ ಕುಟುಂಬದವರ ಫೋಟೋಶೂಟ್ ಹುಚ್ಚಿಗೆ 11 ಜನ ಅಮಾಯಕರನ್ನು ಬಲಿ ಪಡೆದ ಮೇಲೂ ಸರ್ಕಾರ ಬುದ್ಧಿ ಕಲಿತಿಲ್ಲ. ಕಾಂಗ್ರೆಸ್ ಲಜ್ಜೆಬಿಟ್ಟು ನಿಂತಿದೆ ಎಂದು ಕಿಡಿಕಾರಿದೆ.
ಜೆಡಿಎಸ್ ಪ್ರತಿಕ್ರಿಯಿಸಿ, ಸಂವಿಧಾನದ ಹೆಸರಲ್ಲಿ ಕಾಂಗ್ರೆಸ್ ಜನರನ್ನು ಯಾಮಾರಿಸುತ್ತಿದ್ದು, ಅಸಂವಿಧಾನಿಕ ನಡೆಗಳ ಅನುಸರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದೆ.
ಸಚಿವ ಮಹದೇವಪ್ಪ ಮೊಮ್ಮಗನಿಗಾಗಿ ನಾಡಹಬ್ಬ ದಸರಾ ಪರೇಡ್'ನಲ್ಲಿ ಸಾಂವಿಧಾನಿಕ ಹುದ್ದೆ ದುರ್ಬಳಕೆ ಮಾಡಿಕೊಂಡಿರುವುದು ಸಂವಿಧಾನಕ್ಕೆ ಮಾಡಿರುವ ಅಪಚಾರ. ಸಂವಿಧಾನಿಕ ಹುದ್ದೆಯಲ್ಲಿ ಇಲ್ಲದ ಮಹದೇವಪ್ಪನ ಮೊಮ್ಮಗನನ್ನು ಗೌರವ ವಂದನೆ ಸ್ವೀಕರಿಸುವ ವಾಹನದಲ್ಲಿ ಅವಕಾಶ ಮಾಡಿಕೊಟ್ಟಿದ್ದು ಸಂವಿಧಾನ ವಿರೋಧಿ ಕ್ರಮವಾಗಿದೆ.
ದಸರಾ ಉತ್ಸವ ಜಂಬೂ ಸವಾರಿ ವೀಕ್ಷಿಸಲು 6,500 ರೂ. ಕೊಟ್ಟು ಗೋಲ್ಡನ್ ಪಾಸ್ ಖರೀದಿಸಿದ್ದ ಜನಸಾಮಾನ್ಯರಿಗೆ ಪ್ರವೇಶ ನೀಡದ ಜಿಲ್ಲಾಡಳಿತ ಮತ್ತು ಪೊಲೀಸರು ಕಾಂಗ್ರೆಸ್ ನಾಯಕರ ಮಕ್ಕಳಿಗೆ ರಾಜ ಮರ್ಯಾದೆ ನೀಡಿರುವುದು ನಾಚಿಕೆಗೇಡು.
ಹಿಂದೆ ವಿಧಾನಸೌಧ ಮುಂದೆ ನಡೆದಿದ್ದ ಆರ್'ಸಿಬಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ತನ್ನ ಮೊಮ್ಮಗನನ್ನು ವೇದಿಕೆ ಮೇಲೆ ಕೂರಿಸಿ ವಿರಾಟ್ ಕೊಹ್ಲಿ ಜೊತೆ ಸೆಲ್ಫಿ ತೆಗೆಸಿಕೊಂಡು ಅಂಧಾ ದರ್ಬಾರ್ ನಡೆಸಿದ್ರು. ಕಾಂಗ್ರೆಸ್ ಸಂವಿಧಾನದ ಪುಸ್ತಕ ಹಿಡಿದರಷ್ಟೇ ಸಾಲದು, ಸಂವಿಧಾನಕ್ಕೆ ಗೌರವ ಕೊಟ್ಟು, ಅದನ್ನು ಆಡಳಿತದಲ್ಲಿಯೂ ಪಾಲಿಸುವುದನ್ನು ಕಲಿಯಿರಿ ಎಂದು ಹೇಳಿದೆ.