ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಕ್ಯಾಬಿನೆಟ್ ಸಚಿವರಿಗೆ ಅಕ್ಟೋಬರ್ 13 ರಂದು ಔತಣಕೂಟ ಆಯೋಜಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. AICC ಹೈಕಮಾಂಡ್ ಜೊತೆಗಿನ ಚರ್ಚೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯ ಎರಡೂವರೆ ವರ್ಷಗಳನ್ನು ಪೂರ್ಣಗೊಳಿಸಿದ ನಂತರ ನವೆಂಬರ್‌ನಲ್ಲಿ ಸಂಪುಟ ಪುನಾರಚನೆಯನ್ನು ಕೈಗೊಳ್ಳುವ ಯೋಜನೆಯನ್ನು ಸೂಚಿಸಿದ್ದಾರೆಂದು ವರದಿಯಾಗಿದೆ.
ಮೂಲಗಳ ಪ್ರಕಾರ ಹಾಲಿ ಶೇ.50ರಷ್ಟು ಸಚಿವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕುವ ಉದ್ದೇಶವನ್ನು ಮುಖ್ಯಮಂತ್ರಿ ಹೊಂದಿದ್ದಾರೆ. ನವೆಂಬರ್‌ನಲ್ಲಿ ಸುಮಾರು 15 ಹೊಸ ಸಚಿವರನ್ನು ಸೇರ್ಪಡೆಗೊಳಿಸುವುದರಿಂದ ಮುಖ್ಯಮಂತ್ರಿಯನ್ನು ತಕ್ಷಣವೇ ಬದಲಾಯಿಸಲು ಹೈಕಮಾಂಡ್‌ಗೆ ಕಷ್ಟವಾಗಬಹುದು.
ಏಕೆಂದರೆ ಅಷ್ಟರಲ್ಲಿ ಹೊಸ ಕ್ಯಾಬಿನೆಟ್ ಅಸ್ತಿತ್ವಕ್ಕೆ ಬಂದಿರುತ್ತದೆ. ಬಿಹಾರ ಚುನಾವಣೆಯ ನಂತರದ ಸಂಪುಟ ಪುನರ್ ರಚನೆ ಕಾರ್ಯತಂತ್ರ ಮುಖ್ಯಮಂತ್ರಿ ಸ್ಥಾನವನ್ನು ಬಲಪಡಿಸಬಹುದು ಎಂದು ಪಕ್ಷದೊಳಗಿನವರು ಹೇಳುತ್ತಾರೆ.
ಡಿಕೆ ಶಿವಕುಮಾರ್ ಹೇಳಿದ್ದು ಏನು?
ಸಚಿವ ಸಂಪುಟ ಪುನಾರಚನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಅಂತಹ ಯಾವುದೇ ಮಾಹಿತಿ ಗೊತ್ತಿಲ್ಲ. ಇದು ಮುಖ್ಯಮಂತ್ರಿಗೆ ಬಿಟ್ಟದ್ದು. ನಾವೆಲ್ಲರೂ ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ. ನಾನು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಇದು ಮುಖ್ಯಮಂತ್ರಿ ಮತ್ತು ಪಕ್ಷಕ್ಕೆ ಬಿಟ್ಟದ್ದು. ನಾನು ಸಲಹೆಗಳನ್ನು ನೀಡಬಲ್ಲೆ. ಯಾರೂ ಗೊಂದಲ ಸೃಷ್ಟಿಸಬೇಡಿ ಎಂದು ಹೇಳಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಊಹಾಪೋಹ ಕಾಂಗ್ರೆಸ್ ಪಕ್ಷದೊಳಗೆ ಹರಿದಾಡುತ್ತಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತಿತರ ಹಲವು ನಾಯಕರು ಎರಡೂವರೆ ವರ್ಷಗಳ ನಂತರ ನಾಯಕತ್ವದ ಸಂಭಾವ್ಯ ಬದಲಾವಣೆಯ ಸುಳಿವು ನೀಡಿದ್ದು, ಸಿದ್ದರಾಮಯ್ಯ ಅವರ ಅಧಿಕಾರಾವಧಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ನಾಯಕತ್ವ ಬದಲಾವಣೆ ಇಲ್ಲ:
ಈ ಊಹಾಪೋಹಗಳ ಹೊರತಾಗಿಯೂ, ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ. ನಾಯಕತ್ವದ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.
ದಲಿತ ಸಚಿವರ ಸಭೆ: ಈ ಬೆಳವಣಿಗೆಗಳ ನಡುವೆ ಮೂವರು ದಲಿತ ಸಚಿವರಾದ ಡಾ. ಜಿ ಪರಮೇಶ್ವರ್, ಸತೀಶ್ ಜಾರಕಿಹೊಳಿ ಮತ್ತು ಮಹಾದೇವಪ್ಪ ಅವರು ಉಪಹಾರದ ನೆಪದಲ್ಲಿ ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಸಭೆ ನಡೆಸಿದ್ದಾರೆ.
ಮುಖ್ಯಮಂತ್ರಿ ಬದಲಾವಣೆಯಾದರೆ ದಲಿತ ಮುಖಂಡರು ಏನು ಮಾಡಬೇಕು ಎಂದು ಚರ್ಚಿಸಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ದಲಿತ ಸಚಿವರು ತಮ್ಮ ಗುಂಪಿನಲ್ಲಿ ಮುಖ್ಯಮಂತ್ರಿಯಾಗಿ ಪರಮೇಶ್ವರ್ ಅವರನ್ನು ಸೂಚಿಸಲು ಯೋಚಿಸುತ್ತಿದ್ದಾರೆಂದು ವರದಿಗಳು ಹೇಳಿವೆ.