ಗದಗ: ಕಾಂಗ್ರೆಸ್ ನಾಯಕರೇ ಹೇಳಿದಂತೆ ನವೆಂಬರ್ ನಲ್ಲಿ ಕ್ರಾಂತಿಯಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿ ಖಾಲಿಯಾಗುತ್ತದೆʼ ಎಂದು ಬಿಜೆಪಿ ನಾಯಕ ಬಿ ಶ್ರೀರಾಮುಲು ಅವರು ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼಕಾಂಗ್ರೆಸ್ ನಾಯಕರೇ ಹೇಳಿದಂತೆ ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತದೆಯೋ ಅಥವಾ ಜನವರಿಯಲ್ಲಿ ಸಂಕ್ರಾಂತಿ ಬರುತ್ತದೆಯೋ ಗೊತ್ತಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿ ಖಾಲಿಯಾಗುತ್ತದೆ. ಅದು ಗ್ಯಾರಂಟಿ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕರನ್ನು ಬದಿಗಿಟ್ಟು ಅಭಿವೃದ್ಧಿಯನ್ನು ನಿರ್ಲಕ್ಷಿಸುತ್ತಿದ್ದಾರೆ. ರಾಜಕಾರಣಿಗಳಿಗೆ ಗೌರವ ಬಹಳ ಮುಖ್ಯ. ಆದರೆ ಮುಖ್ಯಮಂತ್ರಿ ನಮಗೆ ಕವಡೆ ಕಾಸಿನ ಕಿಮ್ಮತ್ತು ಕೊಡಲ್ಲ ಎಂದು ಶಾಸಕರು ಹೇಳಿದ್ದಾರೆ. ಜೊತೆಗೆ ಅನುದಾನವನ್ನೂ ಬಿಡುಗಡೆ ಮಾಡಿಲ್ಲ. ಆದರೆ ಈಗ ಸಿದ್ದರಾಮಯ್ಯ ಅವರಿಗೆ ಶಾಸಕರ ಮೇಲೆ ಪ್ರೀತಿ ಬಂದಿದೆ. ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತದೆ ಎನ್ನುವ ಕಾರಣಕ್ಕೆ ಪ್ರೀತಿ ಬಂದಿದೆಯೋ ಗೊತ್ತಿಲ್ಲ. ಒಟ್ಟು ಪ್ರೀತಿ ಮಾತ್ರ ಬಂದಿದೆ.
ಭಯದಿಂದ ಔತಣಕೂಟಕ್ಕೆ ಬರಬೇಕೆಂದು ದಿಢೀರ್ ಆದೇಶ ಮಾಡಿದ್ದಾರೆ. 13ನೇ ತಾರೀಖಿನಿಂದ ಔತಣಕೂಟ ಆರಂಭವಾಗುತ್ತೇ. ನವೆಂಬರ್‌ನಲ್ಲಿ ಅಧಿಕಾರ ಹಸ್ತಾಂತರ ಆಗುತ್ತೆ ಅಂತಾ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ಸಿಎಂ ಅವರು ಕರೆದಿರುವ ಔತಣಕೂಟದಲ್ಲಿ ಎಲ್ಲಾ ಚರ್ಚೆ ಆಗೇ ಆಗುತ್ತವೆ. ಶಾಸಕರು-ಸಚಿವರು ಕಡ್ಡಾಯವಾಗಿ ಬರಬೇಕೆಂದು ತೀರ್ಮಾನ ತಗೆದುಕೊಂಡಿದ್ದಾರೆ. ನೂರಕ್ಕೆ ನೂರರಷ್ಟು ಕ್ರಾಂತಿ ಆಗೇ ಆಗುತ್ತೇ ಎನ್ನುವುದು ನಮ್ಮ ಬಿಜೆಪಿ ವಾದ ಎಂದು ತಿಳಿಸಿದರು,
ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಡಿಕೆ.ಶಿವಕುಮಾರ್ ಅವರನ್ನು ನೇಮಿಸುವ ವಿಚಾರವಾಗಿ ಪ್ರತಿಕ್ರಿಯಿಸಿ, ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬ ಚರ್ಚೆಗಳು ಹೆಚ್ಚುತ್ತಿವೆ. ಹೀಗಾಗಿ ಅಧಿಕಾರವನ್ನು ಉಳಿಸಿಕೊಳ್ಳಲು ಸಿದ್ದರಾಮಯ್ಯ ಅವರು ಶಾಸಕರನ್ನು ಬ್ಲಾಕ್ ಮೇಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ನವೆಂಬರ್‌ನಲ್ಲಿ ಕ್ರಾಂತಿ (ಕ್ರಾಂತಿ) ಇರುತ್ತದೆ ಮತ್ತು ಜನವರಿಯಲ್ಲಿ ಎಲ್ಲರಿಗೂ ಸಂಕ್ರಾಂತಿ ಇರುತ್ತದೆ ಎಂದು ವ್ಯಂಗ್ಯವಾಡಿದರು.