ಹಾವೇರಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಅವರು, ರಾಜ್ಯ ರಾಜಧಾನಿಯಲ್ಲಿ ಬಿಜೆಪಿಯ ಪ್ರಭಾವವನ್ನು ದುರ್ಬಲಗೊಳಿಸಲು ಕಾಂಗ್ರೆಸ್ ಬಳಕಿಸಿರುವ ತಂತ್ರವಾಗಿದೆ ಎಂದು ಶನಿವಾರ ಆರೋಪಿಸಿದ್ದಾರೆ,
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವು ಬಿಜೆಪಿಗೆ ಬಲವಾದ ಬೆಂಬಲವಿರುವ ವಾರ್ಡ್‌ಗಳನ್ನು ವಿಭಜಿಸಲು ಮತ್ತು ಐದು ನಿಗಮಗಳಲ್ಲಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬದಲು ಬೆಂಗಳೂರಿನ ಅಭಿವೃದ್ಧಿಯಲ್ಲಿ ಅದೇ ಶಕ್ತಿಯನ್ನು ಬಳಕೆ ಮಾಡಿದ್ದರೆ, ಇಲ್ಲಿನ ಜನರು ಇಷ್ಟೊಂದು ಸಮಸ್ಯೆ ಅನುಭವಿಸುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ.
ಭಾರೀ ಮಳೆಯ ನಂತರ ಬೆಂಗಳೂರಿನಲ್ಲಿ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ಹಿಂದಿನ ಬಿಜೆಪಿ ಸರ್ಕಾರವು ರಾಜಕಾಲುವೆ ಅತಿಕ್ರಮಣವನ್ನು ತೆಗೆದುಹಾಕಲು, ದ್ವಿತೀಯ ಮತ್ತು ತೃತೀಯ ಹಂತದ ಚರಂಡಿಗಳನ್ನು ಬಲಪಡಿಸಲು ಮತ್ತು ಅವುಗಳಲ್ಲಿ ಸಂಗ್ರಹವಾಗಿರುವ ಹೂಳು ಮತ್ತು ಕಸವನ್ನು ಸ್ವಚ್ಛಗೊಳಿಸಲು ಕೆಲಸಗಳನ್ನು ಅಧಿಕಾರಿಗಳು ನಿಲ್ಲಿಸಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ, ಇಂತಹ ಕೆಲಸಗಳಿಗೆ 8,000 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದ್ದೆ ಎಂದು ಹೇಳಿದರು.
ಇದೇ ವೇಳೆ ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಕೇಂದ್ರ ನಾಯಕತ್ವದಲ್ಲಿಯೇ ಎರಡು ಬಣಗಳು ಸೃಷ್ಟಿಯಾಗಿದೆ. ಈ ಬಗ್ಗೆ ಪಕ್ಷದ ಹೈಕಮಾಂಡ್ ಸಂದಿಗ್ಧತೆಯಲ್ಲಿದೆ, ಒಂದು ಬಣ ಸಿಎಂ ಸಿದ್ದರಾಮಯ್ಯ ಮತ್ತು ಇನ್ನೊಂದು ಬಣ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬೆಂಬಲಿಸುತ್ತಿದೆ. ಇದು ಕಾಂಗ್ರೆಸ್‌ನ ಆಂತರಿಕ ವಿಷಯವಾಗಿದ್ದರೂ, 2023 ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಇದು ರಾಜ್ಯದ ಅಭಿವೃದ್ಧಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರಿಗೆ ಇದೀಗ ಪರೀಕ್ಷೆ ಎದರಾಗಿದ್ದು, ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಾರೋ ಅಥವಾ ರಾಜಿ ಮಾಡಿಕೊಳ್ಳುತ್ತಾರೋ ಎಂಬುದನ್ನು ಕಾಲವೇ ಹೇಳುತ್ತದೆ, ಇದು ಕಾಂಗ್ರೆಸ್ ಹೈಕಮಾಂಡ್‌ನ ಬಲಕ್ಕೂ ಒಂದು ಪರೀಕ್ಷೆಯಾಗಿದೆ ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಯಡಿ ಅಕ್ಕಿಯನ್ನು 'ಇಂದಿರಾ ಕಿಟ್' ಎಂದು ಬದಲಾಯಿಸುವ ಕುರಿತು ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ 10 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿದೆ. ಕೇಂದ್ರವು 5 ಕೆಜಿ ನೀಡಲಿದ್ದು, ಇದರೊಂದಿಗೆ ಒಟ್ಟು 15 ಕೆಜಿ ಅಕ್ಕಿ ನೀಡಬೇಕು. ಆದರೆ, ಸರ್ಕಾರಕ್ಕೆ ಅಕ್ಕಿ ನೀಡಲು ಹಣದ ಕೊರತೆಯಿರುವುದರಿಂದ ಈ ರೀತಿಯ ಪ್ರಯತ್ನಕ್ಕೆ ಕೈಹಾಕುತ್ತಿದೆ ಎಂದು ಹೇಳಿದರು.
ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಶಾಸಕ ಕೆ.ಸಿ. ವೀರೇಂದ್ರ ಅವರು ಹಣವನ್ನು ವರ್ಗಾಯಿಸುತ್ತಿದ್ದಾರೆ ಎಂಬ ಆರೋಪಗಳ ಕುರಿತು ಮಾತನಾಡಿ, ಇ.ಡಿ. ವಿವರವಾದ ತನಿಖೆ ನಡೆಸುತ್ತಿದೆ, ಇದರಿಂದ ಸತ್ಯ ಬಯಲಾಗಲಿದೆ ಎಂದು ಹೇಳಿದರು.