ಬೆಂಗಳೂರು: ನಿಮಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಹೆಣ್ಣಿನ ಬಗ್ಗೆ ಯಾಕಿಷ್ಟು ತಾತ್ಸಾರ ಎಂದು ಶಾಸಕ ಮುನಿರತ್ನ ಅವರಿಗೆ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕುಸುಮಾ ಹನುಮಂತ ರಾಯಪ್ಪ ಅವರು ಪ್ರಶ್ನಿಸಿದ್ದಾರೆ.
ಶಾಸಕ ಮುನಿರತ್ನ ಆರೋಪಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಯಾಕ್ರಿ, ಒಂದು ಹೆಣ್ಣಿನ ಬಗ್ಗೆ ಇಷ್ಟು ತುಚ್ಛವಾಗಿ ಮಾತನಾಡುತ್ತೀರಾ? ಈ ದೇಶದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ರಾಣಿ ಲಕ್ಷ್ಮೀ ಬಾಯಿ, ಹೆಣ್ಣು ಮಕ್ಕ ಳಿಗೆ ಶಿಕ್ಷಣ ನೀಡಬೇಕು. ಸಮಾಜ ಸುಧಾರಣೆ ಆಗಬೇಕೆಂದು ಪ್ರಯತ್ನಿಸಿದ ಸಾವಿತ್ರಿ ಬಾಯಿ, ಈ ದೇಶದಲ್ಲಿ ಎರಡು ಬಾರಿ ಪ್ರಧಾನಿ ಆಗಿ ಆಡಳಿತ ನಡೆಸಿದ ಇಂದಿರಾ ಗಾಂಧಿ, ಪ್ರಪಂಚದಾದ್ಯಂತ ಬಾಹ್ಯಾಕಾಶದ ಕಡೆ ತಿರುಗಿ ನೋಡುವಂತೆ ಮಾಡಿದ ಕಲ್ಪನಾ ಚಾವ್ಲಾ ಎಲ್ಲರೂ ಹೆಣ್ಣು ಮಗಳೇ ಅಷ್ಟೆಲ್ಲ ಬೇಡ, ನಿಮ್ಮಂತವರಿಗೆ ಜನ್ಮ ನೀಡಿದವರು, ನೀವು ಜನ್ಮ ನೀಡಿರುವುದು ಸಹ ಇಬ್ಬರು ಹೆಣ್ಣು ಮಕ್ಕಳಿವೆ ಎಂಬುದು ನೆನಪಿರಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಒಬ್ಬ ಗುತ್ತಿಗೆದಾರರನ್ನು ಮನೆಗೆ ಕರೆದು ಅವರಿಗೆ ಲಂಚದ ಬೇಡಿಕೆ ಇಟ್ಟು, ಲಂಚ ಕೊಡುವುದಕ್ಕೆ ಆಗದಿದ್ದರೆ ನಿನ್ನ ಹೆಂಡ್ತಿ- ಮಕ್ಕಳನ್ನು ಮಂಚಕ್ಕೆ ಕಳುಹಿಸು ಎಂದ ಮಹಾಪುರುಷ ನೀವು. ನಿಮ್ಮಿಂದ ಇನ್ನೇನು ನಿರೀಕ್ಷೆ ಮಾಡುವುದಕ್ಕೆ ಸಾಧ್ಯ.
ಹೆಣ್ಣನ್ನು ಯಾವ ಭಾವನೆಯೊಂದ ನೋಡುತ್ತೀರಾ ಎಂಬ ನಿಮ್ಮ ನುಡಿ ಮುತ್ತು ಗಳನ್ನು ಇಡೀ ರಾಜ್ಯದ ಜನ ಕೇಳಿಸಿಕೊಂಡಿದ್ದಾರೆ. ಕೆಲಸ ಮಾಡುವುದಕ್ಕೆ ರಾಜಕಾರಣದಲ್ಲಿ ನಿಮಗೆ ಅವಕಾಶ ಸಿಕ್ಕಿದೆ. ರಸ್ತೆ ಗುಂಡಿ ಮುಚ್ಚಿ ಎಂದರೆ ಎಂಜಿನಿಯರ್‌ಗಳನ್ನು ಕರೆದು ಗುಂಡಿ ಮುಚ್ಚ ಬಾರದು. ಜನರು ಹೇಗಾದರೂ ಸಾಯಲಿ, ಸರ್ಕಾರಕ್ಕೆ, ಸಚಿವರಿಗೆ ಕೆಟ್ಟ ಹೆಸರು ಬರಬೇಕು. ಗುಂಡಿ ಮುಚ್ಚುವುದಕ್ಕೆ ಬಿಡದ ನೀವು, ಇವತ್ತು ಅಭಿವೃದ್ಧಿ ಬಗ್ಗೆ ನಿಮ್ಮನ್ನು ಕಡೆಗಣಿಸುವುದರ ಬಗ್ಗೆ ಮಾತನಾಡುತ್ತೀರಿ ಎಂದು ಹೇಳಿದ್ದಾರೆ.