ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ಹೊಗಳಲು ಅಲ್ಲ, ಉಗಿಯಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಬಿರಕ್ಕೆ ಹೋಗಿದ್ದರು ಎಂದು ಸಚಿವ ಪ್ರಿಯಾಂಕ್ ಖರ್ಗೆಯವರು ಸೋಮವಾರ ಹೇಳಿದ್ದಾರೆ.
ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಸ್ವತಃ ಆ ಶಿಬಿರಕ್ಕೆ ಭೇಟಿ ನೀಡಿ, ಆರೆಸ್ಸೆಸ್‌ನ ಸಮಾಜಮುಖಿ ಕಾರ್ಯಗಳನ್ನು ಮೆಚ್ಚಿಕೊಂಡು, ಪೂರ್ಣ ಸಹಕಾರ ನೀಡಿದ್ದರು ಎಂಬ ಬಿಜೆಪಿ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆಯವರು ಪ್ರತಿಕ್ರಿಯೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಆರೆಸ್ಸೆಸ್ ಕಾರ್ಯಕ್ರಮ ಸ್ಥಳಕ್ಕೆ ಮಲ್ಲಿಕಾರ್ಜುನ ಖರ್ಗೆ ಭೇಟಿ ನೀಡಿದ ವೇಳೆ ಅವರು ರಾಜ್ಯದ ಗೃಹ ಸಚಿವರಾಗಿದ್ದರು. ಅಂದು ಅವರು ತಮ್ಮ ಅಧ್ಯಕ್ಷತೆಯಲ್ಲಿ ಎಲ್ಲ ಸಮುದಾಯಗಳ ಅಧಿಕಾರಿಗಳು ಮತ್ತು ಪ್ರತಿನಿಧಿಗಳೊಂದಿಗೆ ಶಾಂತಿ ಸಮಿತಿ ನಡೆಸಿದ ಬಳಿಕ ಆರೆಸ್ಸೆಸ್ ಕಾರ್ಯಕ್ರಮದ ಸ್ಥಳಕ್ಕೆ ಭೇಟಿ ನೀಡಿದ್ದರು. ಅದು ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರದಂತೆ ನಿಮ್ಮ ಜನರಿಗೆ ಎಚ್ಚರಿಕೆ ನೀಡಲು ನೀಡಿದ ಭೇಟಿಯಾಗಿತ್ತು ಎಂದು ಹೇಳಿದ್ದಾರೆ.
ಸರಿಯಾಗಿ ಗಮನಿಸಿ, ಅವರು ಅಂದಿನ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸಾಂಗ್ಲಿಯಾನ ಅವರೊಂದಿಗೆ ಅಲ್ಲಿಗೆ ಆಗಮಿಸಿದ್ದರು. ನೀವು ಸರಿಯಾಗಿ ನೆನಪಿಸಿಕೊಂಡರೆ, "ಒಂದೋ ದೇಶದ ಕಾನೂನಿಗೆ ಬದ್ಧರಾಗಿರಿ ಅಥವಾ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಿ" ಎಂದು ಮಲ್ಲಿಕಾರ್ಜುನ ಖರ್ಗೆ ಅಂದು ನಿಮ್ಮನ್ನು ಎಚ್ಚರಿಸಿದ್ದರು ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಮಲ್ಲಿಕಾರ್ಜುನ ಖರ್ಗೆಯವರು ಆರ್'ಎಸ್ಎಸ್ ಶಿಬಿರಕ್ಕೆ ಭೇಟಿ ನೀಡಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಬಿಜೆಪಿ, ಇಲ್ಲೊಮ್ಮೆ ನೋಡಿ ಪ್ರಿಯಾಂಕ್ ಖರ್ಗೆಯವರೇ, ಇಂದು ನೀವು ಆರೆಸ್ಸೆಸ್ ವಿರುದ್ಧ ವಿಷ ಕಾರುತ್ತಾ ಸಂಘದ ಚಟುವಟಿಕೆ “ನಿಷೇಧಿಸಬೇಕು” ಎಂದು ಹೇಳುತ್ತಿದ್ದೀರ. ಆದರೆ 2002ರಲ್ಲಿ ಬೆಂಗಳೂರಿನ ನಾಗವಾರದಲ್ಲಿ ನಡೆದ ಸಮರಸತಾ ಸಂಗಮ ಕಾರ್ಯಕ್ರಮದ ಸಮಯದಲ್ಲಿ,
ಅಂದು ಗೃಹಸಚಿವರಾಗಿದ್ದ ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಸ್ವತಃ ಆ ಶಿಬಿರಕ್ಕೆ ಭೇಟಿ ನೀಡಿ, ಆರೆಸ್ಸೆಸ್‌ನ ಸಮಾಜಮುಖಿ ಕಾರ್ಯಗಳನ್ನು ಮೆಚ್ಚಿಕೊಂಡು, ಪೂರ್ಣ ಸಹಕಾರ ನೀಡಿದ್ದರು ಎಂಬುದನ್ನು ಮರೆತಿದ್ದೀರಾ? ನೀವು ಇಂದು ಹೈಕಮಾಂಡ್ ಮೆಚ್ಚಿಸಲು ನಾಟಕವಾಡುತ್ತಿದ್ದೀರಾ? ಮೊದಲು ಮನೆಯ ಇತಿಹಾಸ ತಿಳಿದು ನಂತರ ರಾಷ್ಟ್ರಸೇವಕರ ಬಗ್ಗೆ ಮಾತನಾಡಿ ಎಂದು ಹೇಳಿತ್ತು.