ಬೆಳಗಾವಿ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಬಿಟ್ಟರೆ ಎಲ್ಲ ಚುನಾವಣೆಗಳಿಗೆ ರೆಸಾರ್ಟ್, ಪ್ರವಾಸ ರಾಜಕೀಯ ಅನ್ವಯಿಸುತ್ತದೆ. ರೆಸಾರ್ಟ್ ರಾಜಕೀಯ ಸಾಮಾನ್ಯವಾದದ್ದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಸೋಮವಾರ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲ ಚುನಾವಣೆಗಳಿಗೆ ರೆಸಾರ್ಟ್ ರಾಜಕೀಯ ಸಾಮಾನ್ಯವಾಗಿದೆ. ಇದೀಗ ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿಯೂ ಈ ಪದ್ಧತಿ ಕಾಲಿಟ್ಟಿದೆ. ನಮ್ಮ ಜಿಲ್ಲೆಯಲ್ಲಿ ರೆಸಾರ್ಟ್ ರಾಜಕೀಯ ಪ್ರಚಾರದಷ್ಟೇ ಸಾಮಾನ್ಯವಾಗಿದೆ ಎಂದು ಹೇಳಿದ್ದಾರೆ.
ಲಿಂಗಾಯತರನ್ನು ಒಡೆದು ಆಳುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಆ ರೀತಿ ಹೇಳಿದವರು ಯಾರು.? ಚರ್ಚೆಗಳಿಗೆಲ್ಲಾ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ಚರ್ಚೆಗೆ ಟ್ಯಾಕ್ಸ್, ಜಿಎಸ್ಟಿ ಇರುವುದಿಲ್ಲ ಎಂದು ತಿರುಗೇಟು ನೀಡಿದರು.
ಅಕ್ಟೋಬರ್ 19 ರಂದು ಬೆಳಗಾವಿಯಲ್ಲಿ ನಡೆಯಲಿರುವ ಡಿಸಿಸಿ ಬ್ಯಾಂಕ್ ಚುನಾವಣೆಗಳ ಕುರಿತು ಪ್ರತಿಕ್ರಿಯಿಸಿ, ಕೆಲವು ಕ್ಷೇತ್ರಗಳಲ್ಲಿ ಹೊಂದಾಣಿಕೆಗಳನ್ನು ಮಾಡಲಾಗಿದ್ದರೂ, ನಿಪ್ಪಣಿ, ಹುಕ್ಕೇರಿ ಮತ್ತು ರಾಮದುರ್ಗದಂತಹ ಇತರ ಕ್ಷೇತ್ರಗಳಲ್ಲಿ ಚುನಾವಣೆಗಳು ಅನಿವಾರ್ಯವಾಗಿವೆ. ಎಲ್ಲರಿಗೂ ಸೋಲಿನ ಭಯ ಇದ್ದೆ ಇರುತ್ತದೆ. ಭಯ ಇದ್ದರೆ ಹೆಚ್ಚಿನ ಮತಗಳಿಂದ ಗೆಲ್ಲುತ್ತಾರೆ. ಇನ್ನು ಎಲ್ಲ ಚುನಾವಣೆಗಳಲ್ಲಿ ಕ್ರಾಸ್ ವೋಟಿಂಗ್ ನಡೆದೇ ನಡೆಯುತ್ತದೆ. ಮೊದಲಿನಿಂದಲೂ ಈ ಪದ್ಧತಿ ಇದೆ. ಈ ಕಡೆ ಇದ್ದವರು ಆ ಕಡೆ, ಆ ಕಡೆ ಇದ್ದವರು ಈ ಕಡೆ ವೋಟ್ ಹಾಕುತ್ತಾರೆ. ಹಾಗಾಗಿ, ನಿಪ್ಪಾಣಿ, ಹುಕ್ಕೇರಿ, ರಾಮದುರ್ಗ ಸೇರಿ ಎಲ್ಲಾ ಕಡೆ ಕ್ರಾಸ್ ವೋಟಿಂಗ್ ಆಗಬಹುದು ಎಂದು ಸುಳಿವು ನೀಡಿದರು.
ಕಿತ್ತೂರಿನಲ್ಲಿ ಯಾಕೆ ಸಂಧಾನ ಯಶಸ್ವಿ ಆಗಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಕೆಲವು ಕ್ಷೇತ್ರಗಳಲ್ಲಿ ಅನಿವಾರ್ಯವಾಗಿ ಚುನಾವಣೆ ಆಗುತ್ತದೆ. ಇದನ್ನು ಮುಂಚೆಯೇ ಹೇಳಿದ್ದೆ. ಮತದಾರರು ಹೆಚ್ಚು ಯಾರಿಗೆ ಆಶೀರ್ವಾದ ಮಾಡುತ್ತಾರೆ ಅವರು ಗೆಲ್ಲುತ್ತಾರೆ ಎಂದರು.
ಹುಕ್ಕೇರಿಯಲ್ಲಿ ಮತದಾನದ ಹಕ್ಕು ತೆಗೆದುಕೊಂಡವರು ಯಾರಿಗೆ ಮತ ಹಾಕಬೇಕು ಎಂದು ನಿರ್ಧರಿಸಿ ಮತ ಚಲಾಯಿಸುತ್ತಾರೆ. ಹಾಗಾಗಿ, ಪ್ರಚಾರ ಮಾಡುವ ಅವಶ್ಯಕತೆ ಇಲ್ಲ. ಆದರೆ, ಗೆಲ್ಲಲು ಎಲ್ಲ ರೀತಿ ಪ್ರಯತ್ನಿಸುತ್ತೇವೆ. ಇನ್ನು ಹುಕ್ಕೇರಿ ಕೆಇಬಿ ಚುನಾವಣೆ ಒಂದು ತಾಲೂಕಿಗೆ ಸಿಮೀತವಾಗಿದೆ. ಡಿಸಿಸಿ ಬ್ಯಾಂಕ್ ಜಿಲ್ಲಾ ಮಟ್ಟದ ಚುನಾವಣೆ. ಅದಕ್ಕೂ ಇದಕ್ಕೂ ಹೋಲಿಕೆ ಮಾಡಲು ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಸಿಎಂ ಡಿನ್ನರ್ ಪಾರ್ಟ್ ಕುರಿತು ಪ್ರತಿಕ್ರಿಯಿಸಿ, ನನ್ನನ್ನೂ ಕರೆದಿದ್ದರು. ಡಿಸಿಸಿ ಬ್ಯಾಂಕ್ ಚುನಾವಣೆ ಇದೆ ಹಾಗಾಗಿ, ಬರಲು ಆಗುವುದಿಲ್ಲ ಎಂದು ಹೇಳಿದ್ದೆ. ಇಲ್ಲಿಯೇ ಇದ್ದಿದ್ದರಿಂದ ಎರಡು ಸ್ಥಾನಗಳ ಹೆಚ್ಚು ಅವಿರೋಧ ಆಯ್ಕೆ ಸಾಧ್ಯವಾಯಿತು. ಡಿನ್ನರ್ ಪಾರ್ಟಿಯಲ್ಲಿ ಏನು ಚರ್ಚೆ ಆಗಿದೆ ಗೊತ್ತಿಲ್ಲ. ಸಚಿವ ಸಂಪುಟದ ಬಗ್ಗೆ ಇಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿಕೆ ನೀಡಿದ್ದಾರೆ. ಮುಂದೆ ಏನಾಗುತ್ತದೆ ಎಂದು ಕಾದು ನೋಡೋಣ ಎಂದರು.