ಬೆಂಗಳೂರು: ಬಿಜೆಪಿ ಹೇಳೋದು ಮಾತ್ರ ಆಚಾರ, ನಡೆದುಕೊಳ್ಳುವುದೆಲ್ಲ ಅನಾಚರವೇ. ಶಾಲೆ, ಸರ್ಕಾರಿ ಆವರಣಗಳು ಶಿಕ್ಷಣೇತರ ಚಟುವಟಿಕೆಗಳಿಂದ ದೂರ ಇರಬೇಕೆಂದು ಬಿಜೆಪಿ ಸರ್ಕಾರದ ಅವಧಿಯಲ್ಲೇ ಆದೇಶ ಮಾಡಿರುವುದನ್ನ ಬಿಜೆಪಿ ಮರೆತಂತಿದೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಸಂವಿಧಾನವನ್ನು ಒಪ್ಪಿಕೊಂಡವರು ಸರ್ಕಾರದ ನೀತಿ, ನಿಯಮಗಳನ್ನು ಪಾಲಿಸಬೇಕಾದ್ದೂ ಮೊದಲ ಕರ್ತವ್ಯ. ಪ್ರಜೆಗಳು ಮಾತ್ರವಲ್ಲ, ಯಾವ ಸಂಘ ಸಂಸ್ಥೆಗಳು ಕೂಡ ಕಾನೂನುಗಳನ್ನು ಮೀರಿ ವರ್ತನೆ ಮಾಡುವಂತಿಲ್ಲ. ಆರ್.ಎಸ್ಎಸ್ ಹಾಗೂ ಸಂಘ ಪರಿವಾರ ಕಾನೂನನ್ನೂ ಮೀರಿದವರೇ? ದೇಶದ ಯಾವ ನೀತಿ,ನಿಯಮ,ಕಾನೂನುಗಳು ಸಂಘ ಪರಿವಾರಕ್ಕೆ ಅನ್ವಯಿಸುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಸಂವಿಧಾನವನ್ನು ಒಪ್ಪದವರು, ಸಂವಿಧಾನವನ್ನು ಪಾಲಿಸದವರಿಂದ ಶಾಂತಿ,ಸೌಹಾರ್ದತೆ, ಸಹಬಾಳ್ವೆ ನಿರೀಕ್ಷಿಸಲು ಸಾಧ್ಯವಿಲ್ಲ. ಅನೈತಿಕ, ಅಕ್ರಮ ಚಟುವಟಿಕೆಗಳನ್ನು ನಡೆಸುವ ಉದ್ದೇಶಕ್ಕಾಗಿಯೇ ಆರ್‌ಎಸ್ಎಸ್ ಸಂಘಟನೆ ನೊಂದಾವಣಿ ಮಾಡಿಕೊಂಡಿಲ್ಲ ಎಂಬುದು ಸ್ಪಷ್ಟ.
ಈ ಕಾರಣಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭೂಗತವಾಗಿಯೇ ತನ್ನ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದೆ. ಇಂತಹ ಸಮಾಜ ಘಾತುಕ ಸಂಘಟನೆಗಳ ಉಪಟಳಕ್ಕೆ ಕಡಿವಾಣ ಹಾಕಲೇಬೇಕು. ಸರ್ಕಾರ ಕೂಡಲೇ ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.