ಬೆಂಗಳೂರು: ಮೂಲಸೌಕರ್ಯ, ಮಾನವ ಸಂಪನ್ಮೂಲ, ನವೋದ್ಯಮ, ಅನ್ವೇಷಣೆ ವಿಚಾರದಲ್ಲಿ ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ. ಬೇರೆಯವರು ತಮ್ಮನ್ನು ಮಾರ್ಕೆಟಿಂಗ್ ಮಾಡಿಕೊಳ್ಳಲು ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ ಎಂದು ಆಂಧ್ರ ಐಟಿ ಸಚಿವ ನಾರಾ ಲೋಕೇಶ್ ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
ವಿಧಾನಸೌಧದದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು. ಬೆಂಗಳೂರಿನ ವಿಚಾರವಾಗಿ ಆಂಧ್ರ ಪ್ರದೇಶ ಐಟಿ ಸಚಿವ ನಾರಾ ಲೋಕೇಶ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾರಾ ಲೋಕೇಶ್ ಆಗಲಿ, ಬೇರೆಯವರಾಗಲಿ, ಯಾರ ಹೇಳಿಕೆಗೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಬೆಂಗಳೂರಿನಲ್ಲಿ 25 ಲಕ್ಷ ಐಟಿ ವೃತ್ತಿಪರರು, 2 ಲಕ್ಷ ವಿದೇಶಿಗರು ಕೆಲಸ ಮಾಡುತ್ತಿದ್ದಾರೆ.
ದೇಶದ ಪ್ರಗತಿಯಲ್ಲಿ ಬೆಂಗಳೂರಿನ ಕೊಡುಗೆ ಅಪಾರವಾಗಿದೆ. ಕೇಂದ್ರ ಸರ್ಕಾರಕ್ಕೆ ಸುಮಾರು 40% ತೆರಿಗೆ ಆದಾಯ ಇಲ್ಲಿಂದಲೇ ಹೋಗುತ್ತಿದೆ. ಅವರು ತಮ್ಮ ಬಗ್ಗೆ ಮಾರ್ಕೆಟಿಂಗ್ ಮಾಡಿಕೊಳ್ಳಲು ಮಾತನಾಡುತ್ತಾರೆ. ಅವರು ಏನಾದರೂ ಮಾಡಿಕೊಳ್ಳಲಿ. ಅವರಿಗೆ ಕೇಂದ್ರ ಸರ್ಕಾರವೂ ಸಹಾಯ ಮಾಡಲಿ. ಆದರೆ ಬೆಂಗಳೂರಿಗೆ ಸರಿಸಮನಾಗಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು
ಎಷ್ಟು ವಿದೇಶಿ ನಾಯಕರು ನನ್ನನ್ನು ಸಂಪರ್ಕಿಸುತ್ತಿದ್ದಾರೆ ಎಂದು ನಮಗೆ ಗೊತ್ತಿದೆ. ನಾನು ಐಟಿ ಸಚಿವರು, ಬೃಹತ್ ಕೈಗಾರಿಕೆ ಸಚಿವರು ಕೂತು ಚರ್ಚೆ ಮಾಡುತ್ತೇವೆ. ವಿದೇಶಿ ಕಂಪನಿಗಳು ಇಷ್ಟು ದಿನ ಬೆಂಗಳೂರಿನಲ್ಲಿ ಬಾಡಿಗೆ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಅಮೆರಿಕದಲ್ಲಿನ ಬೆಳವಣಿಗೆ ನಂತರ ಈಗ ಅವರು ಸ್ವಂತ ಜಾಗ ಖರೀದಿಗೆ ಮುಂದಾಗುತ್ತಿದ್ದಾರೆ. ತಮ್ಮದೇ ಸ್ವಂತ ಕ್ಯಾಂಪಸ್ ಹೊಂದಲು ಮುಂದಾಗಿದ್ದಾರೆ ಇದು ಬೆಂಗಳೂರಿನ ಶಕ್ತಿ ಎಂದು ತಿಳಿಸಿದರು.
ಗೂಗಲ್ ಎಐ ಹಬ್ ಆಂಧ್ರ ಪ್ರದೇಶ ಪಾಲಾಗಿದೆ ಎಂದು ಕೇಳಿದಾಗ, “ಆಂಧ್ರ ಪ್ರದೇಶಕ್ಕೆ ಹೋಗುವವರಿಗೆ ನಾವು ಬೇಡ ಎನ್ನಲು ಸಾಧ್ಯವೇ? ಅವರು ಹೆಚ್ಚಿನ ವಿನಾಯಿತಿ ಕೊಡುತ್ತಾರೆ ಎಂದು ಹೋಗುವುದಾದರೆ ಹೋಗಲಿ. ಅವರಿಗೂ ಎಲ್ಲ ಕಡೆ ನೋಡಿ ಅನುಭವವಾಗಲಿ” ಎಂದು ತಿಳಿಸಿದರು.
ನಮ್ಮ ರಾಜ್ಯಕ್ಕೆ 1 ಲಕ್ಷ ಕೋಟಿಗೂ ಹೆಚ್ಚಿನ ಬಂಡವಾಳ ಹೂಡಿಕೆ ಕೈತಪ್ಪಿದೆ ಎಂದು ಕೇಳಿದಾಗ. “ವಿದೇಶಿ ಪ್ರತಿನಿಧಿಗಳು ನನ್ನನ್ನು, ಪ್ರಿಯಾಂಕ್ ಖರ್ಗೆ, ಎಂ.ಬಿ. ಪಾಟೀಲ್ ಅವರನ್ನು ನಿರಂತರವಾಗಿ ಭೇಟಿ ಮಾಡುತ್ತಲೇ ಇದ್ದಾರೆ. 12ರಂದು ಸಿಂಗಾಪುರದ ಉದ್ಯಮಿಗಳ ನಿಯೋಗ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅನೇಕ ಖಾಸಗಿ ವಿವಿಗಳು, ಸಂಸ್ಥೆಗಳು ಬೆಂಗಳೂರಿನಲ್ಲಿ ತಮ್ಮ ಸಂಸ್ಥೆ ಆರಂಭಿಸಲು ಬರುತ್ತಿದ್ದಾರೆ. ಬೆಂಗಳೂರನ್ನು ಯಾರೂ ಬಿಟ್ಟು ಹೋಗುವುದಿಲ್ಲ. ನಾವು ದೊಡ್ಡ ದೊಡ್ಡ ವಿನಾಯಿತಿ ನೀಡುತ್ತೇವೆ ಎಂದು ಜಾಹೀರಾತು ಹಾಕಿ ನಾವು ಯಾರನ್ನೂ ಕರೆಯುವ ಅಗತ್ಯವಿಲ್ಲ. ಬೆಂಗಳೂರಿನಲ್ಲಿರುವ ಎಲ್ಲಾ ಸೌಲಭ್ಯಗಳು ಹೂಡಿಕೆದಾರರನ್ನು ಆಕರ್ಷಿಸುತ್ತಿದೆ” ಎಂದರು.
ಕಾಂಗ್ರೆಸ್ ಶಾಸಕರಿಗೆ ಅನುದಾನ ನೀಡಿದ್ದು, ನಮಗೆ ನೀಡಿಲ್ಲ ಎಂದು ಜೆಡಿಎಸ್ ಶಾಸಕರು ನ್ಯಾಯಾಲಯದಲ್ಲಿ ಅರ್ಜಿ ಹಾಕಿರುವ ಬಗ್ಗೆ ಕೇಳಿದಾಗ, “ಈ ಬಗ್ಗೆ ಮುಖ್ಯಮಂತ್ರಿಗಳು ಉತ್ತರ ನೀಡಲಿದ್ದಾರೆ. ಯಾರಿಗೆ ಎಷ್ಟು ಅನುದಾನ ನೀಡಬೇಕು ಎಂದು ಸಿಎಂ ತೀರ್ಮಾನ ಮಾಡಿದ್ದಾರೆ. ಈ ವಿಚಾರದಲ್ಲಿ ನಮಗೆ ಪಾಠ ಹೇಳಿಕೊಟ್ಟವರು ಬಿಜೆಪಿಯವರಲ್ಲವೇ? ನಾವು ಅವರಷ್ಟು ಕ್ರೂರಿಗಳಲ್ಲ. ನಾವು ಹೃದಯ ಶ್ರೀಮಂತಿಕೆ ಪ್ರದರ್ಶಿಸಿದ್ದೇವೆ” ಎಂದರು.
ನೀವು ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತಿದಂತೆ ಅವರು ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಅವರು ಅರ್ಜಿ ಹಾಕಿ ಕೇಳಲಿ. ಅದರಲ್ಲಿ ತಪ್ಪೇನಿಲ್ಲ. ನಾವು ಕೇಂದ್ರ ಸರ್ಕಾರದ ಬಳಿ ನಮ್ಮ ಹಕ್ಕು ಕೇಳುತ್ತಿದ್ದೇವೆ. ಬೆಂಗಳೂರಿಗೆ ಅನುದಾನ ನೀಡುತ್ತಿಲ್ಲ ಎಂದು ಬಿಜೆಪಿ ಶಾಸಕರು ಹಾಗೂ ಸಂಸದರು ಕೇಂದ್ರ ಸರ್ಕಾರದ ಮೇಲೆ ಇದೇ ರೀತಿ ನ್ಯಾಯಾಲಯದಲ್ಲಿ ಅರ್ಜಿ ಹಾಕಲಿ. ಅವರು ಅರ್ಜಿಯನ್ನೇ ಕೊಟ್ಟಿಲ್ಲ, ಇನ್ನು ಕೋರ್ಟ್ ಮೆಟ್ಟಿಲೇರುತ್ತಾರಾ” ಎಂದು ತಿಳಿಸಿದರು.