ತುಮಕೂರು: ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜಿಸಲು ಅನುಮತಿ ಪಡೆದುಕೊಳ್ಳುವುದು ಸರ್ಕಾರದ ಅನುಮತಿ ಕಡ್ಡಾಯಕ್ಕೆ ಕಾಂಗ್ರೆಸ್ ಶಾಸಕರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎನ್. ರಾಜಣ್ಣ, ಈದ್ಗಾ ಮೈದಾನ, ರಸ್ತೆಯಲ್ಲಿ ನಮಾಜ್ ಮಾಡಲು ಮುಸ್ಲಿಮರು ಅನುಮತಿ ಪಡೆದುಕೊಳ್ಳುತ್ತಾರೆಯೇ? ಇದನ್ನು ತಡೆಯಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.
ನಮಾಜ್ ಮಾಡಲು ಅನುಮತಿ ಕೇಳಿಕೊಂಡು ಮುಸ್ಲಿಮರು ಬರುತ್ತಾರೆಯೇ? ಅನುಮತಿ ಪಡೆಯದೇ ರಸ್ತೆಯಲ್ಲಿ ನಮಾಜ್ ಮಾಡಿದರೆ ಅದನ್ನು ತಡೆಯುವ ಶಕ್ತಿ ಇದೆಯೇ? ಜಾರಿ ಮಾಡಲು ಸಾಧ್ಯವಾಗುವ ಕಾನೂನನ್ನು ಜಾರಿಗೆ ತರಬೇಕೇ ಹೊರತು, ಜಾರಿ ಮಾಡಲಾಗದ ಕಾನೂನುಗಳನ್ನು ಜಾರಿಗೆ ತಂದರೆ, ಅದು ಪುಸ್ತಕದಲ್ಲಿ ಮಾತ್ರವೇ ಇರುತ್ತದೆ. ಈ ನಿಯಮ ಯಾವ ಪ್ರಮಾಣದಲ್ಲಿ ಜಾರಿಗೆ ಬರುತ್ತದೆ ಕಾದು ನೋಡೋಣ ಎಂದರು.
ಇದಕ್ಕೂ ಮುನ್ನಾ ಜಾಗೃತ ಕರ್ನಾಟಕ ಆಯೋಜಿಸಿದ್ದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ-ಈಡೇರುವುದೇ ಸರ್ವ ಸಮುದಾಯಗಳ ನಿರೀಕ್ಷೆ' ವಿಚಾರಗೋಷ್ಠಿಯಲ್ಲಿ ಮಾತನಾಡಿದ ಕೆ.ಎನ್. ರಾಜಣ್ಣ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಮೀಸಲು ಕ್ಷೇತ್ರವೇ ಯಾಕೆ ಬೇಕು? ಅವರು ಸಾಮಾನ್ಯ ಕ್ಷೇತ್ರದಲ್ಲಿ ಯಾಕೆ ನಿಲ್ಲಬಾರದು? ಅವರು ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದರೆ ಮೀಸಲು ಕ್ಷೇತ್ರದಿಂದ ಮತ್ತೊಬ್ಬರಿಗೆ ಅವಕಾಶ ದೊರೆಯುತ್ತದೆ ಅಲ್ಲವೇ ಎಂದು ಹೇಳಿದರು.
ಮೀಸಲು ಕ್ಷೇತ್ರ ಬಿಟ್ಟುಕೊಡುವ ಮನ:ಸ್ಥಿತಿ ನಮ್ಮಲ್ಲಿ ಬರಬೇಕು. ಎಲ್ಲವನ್ನು ನಾವೇ ಬಳಸಿಕೊಂಡು ಕೂತರೆ ಬೇರೆಯವರು ಎಲ್ಲಿಗೆ ಹೋಗುತ್ತಾರೆ. ನಮ್ಮಲ್ಲಿ ಧೈರ್ಯದ ಕೊರತೆಯಿದ್ದು, ಅದು ಹೋಗಬೇಕು ಎಂದು ಪರಮೇಶ್ವರ್ ಅವರಿಗೆ ಸಲಹೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್. ಕಾಂತರಾಜು, ಜಯಪ್ರಕಾಶ್ ಹೆಗ್ಡೆ ನೇತೃತ್ವದ ವರದಿ ಜಾರಿ ಮಾಡುವ ಮನಸ್ಥಿತಿ ಹೊಂದಿದ್ದರು. ಆದರೆ, ವರದಿ ಜಾರಿಗೊಳಿಸದಂತೆ ಕಾಂಗ್ರೆಸ್ ನಾಯಕರೇ ಅವರ ಮೇಲೆ ಒತ್ತಡ ಹಾಕಿದರು. ಹೀಗಾಗಿ ಮತ್ತೊಂದು ಸಮೀಕ್ಷೆ ನಡೆಸುವ ನಿರ್ಣಯ ಕೈಗೊಳ್ಳಬೇಕಾಯಿತು ಎಂದು ತಿಳಿಸಿದರು.