ಮಂಗಳೂರು: ಮುಂದಿನ ತಿಂಗಳು ನಡೆಯುವ ಬಿಹಾರ ವಿಧಾಸಭೆ ಚುನಾವಣೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಹಣ ಸಂಗ್ರಹಿಸುತ್ತಿದೆ ಎಂಬ ವಿರೋಧ ಪಕ್ಷದ ಬಿಜೆಪಿ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
"ನಾವು ಕರ್ನಾಟಕದಿಂದ ಯಾವುದೇ ರಾಜ್ಯದ ಚುನಾವಣೆಗೆ 5 ಪೈಸೆಯನ್ನೂ ನೀಡಿಲ್ಲ, ಬಿಹಾರಕ್ಕೂ ನೀಡುತ್ತಿಲ್ಲ" ಎಂದು ಸಿಎಂ ಸಿದ್ದರಾಮಯ್ಯ ವರದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿಯ ಆರೋಪಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, "ಅವರು(ಬಿಜೆಪಿ) ಚುನಾವಣೆಗಾಗಿ ಹಣ ಕಲೆಕ್ಷನ್ ಮಾಡುತ್ತಿದ್ದರು. ಈಗ ಅವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ" ಎಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಬಿಹಾರ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಿಗಳಿಂದ ಹಣ ಸಂಗ್ರಹಿಸುತ್ತಿದೆ ಎಂದು ಬಿಜೆಪಿ ಸಂಸದರಾದ ಬಿ ವೈ ರಾಘವನೇದ್ರ ಮತ್ತು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಆರೋಪಿಸಿದ್ದಾರೆ.
ಆರ್‌ಎಸ್‌ಎಸ್ ನಿಷೇಧಿಸಿಲ್ಲ
ರಾಜ್ಯ ಸರ್ಕಾರ, ಆರ್‌ಎಸ್‌ಎಸ್ ಅನ್ನು ನಿಷೇಧ ಮಾಡಿಲ್ಲ. ಶಾಲಾ, ಕಾಲೇಜು ಆವರಣದಲ್ಲಿ ಯಾವುದೇ ಕಾರ್ಯಕ್ರಮ ಮಾಡಬೇಕಾದರೆ ಸಂಘ ಸಂಸ್ಥೆಗಳು ಅನುಮತಿ ಪಡೆಯಬೇಕೆಂದು ಹೊರಡಿಸಿರುವ ಆದೇಶದಲ್ಲಿ ಆರ್‌ಎಸ್‌ಎಸ್ ಎಂದು ಎಲ್ಲಿಯೂ ಉಲ್ಲೇಖವಾಗಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ಖಾಸಗಿ ಸಂಘ ಸಂಸ್ಥೆಗಳು, ತಮ್ಮ ಚಟುವಟಿಕೆಗಳಿಗೆ ಸಾರ್ವಜನಿಕ ಆವರಣಗಳನ್ನು ಬಳಸಿಕೊಳ್ಳಲು "ಪೂರ್ವಾನುಮತಿ" ಕಡ್ಡಾಯಗೊಳಿಸುವ ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಸಿಎಂ, ಈ ಕ್ರಮವು ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿರ್ಬಂಧಿಸುವ ಗುರಿ ಹೊಂದಿಲ್ಲ. ಇದು ಹಿಂದಿನ ಬಿಜೆಪಿ ಸರ್ಕಾರ ತೆಗೆದುಕೊಂಡ ನಿರ್ಧಾರದ ಮುಂದುವರಿದ ಭಾಗ ಎಂದರು.
2013ರಲ್ಲಿ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಂಘ ಸಂಸ್ಥೆಗಳು ಶಾಲಾ-ಕಾಲೇಜು ಆವರಣದಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದನ್ನು ನಿಷೇಧಿಸಿದ್ದರು. ಜಗದೀಶ್ ಶೆಟ್ಟರ್ ಅವರು ಮಾಡಿರುವುದು ನಾನಲ್ಲ ಎಂದಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಆದೇಶ ಹೊರಡಿಸಿದ್ದಾರೆ ಎಂದು ಹೇಳಿದರು.