ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಎಂಎಲ್ಸಿ ಡಾ ಯತೀಂದ್ರ ಸಿದ್ದರಾಮಯ್ಯ ನಿನ್ನೆ ಬೆಳಗಾವಿಯಲ್ಲಿ ನೀಡಿರುವ ಹೇಳಿಕೆ ಭಾರೀ ಸಂಚಲನ ಉಂಟುಮಾಡಿದೆ. ಈ ಬಗ್ಗೆ ಸುದ್ದಿಗಾರರು ಸಚಿವ ಸತೀಶ್ ಜಾರಕಿಹೊಳಿಯವರನ್ನು ಪ್ರಶ್ನಿಸಿದಾಗ ರಾಜ್ಯದಲ್ಲಿ ಸಿಎಂ ಉತ್ತರಾಧಿಕಾರಿ ಬಗ್ಗೆ ಪಕ್ಷ ನಿರ್ಧಾರ ಮಾಡಬೇಕೆಂದು ಹೇಳಿದರು.
ಯತೀಂದ್ರ ಹೇಳಿರುವುದು ತಮ್ಮ ವೈಯಕ್ತಿಕ ಅಭಿಪ್ರಾಯ. ಅಂತಿಮವಾಗಿ ಪಕ್ಷ, ಶಾಸಕರು ತೀರ್ಮಾನ ಮಾಡುವುದು. ರಾಜ್ಯದಲ್ಲಿ ಸಿಎಂ ಉತ್ತರಾಧಿಕಾರಿ ಯಾರಾಗಬೇಕೆಂಬ ಬಗ್ಗೆ ಬಹಳ ದಿನಗಳಿವೆ, ಕಾದುನೋಡೋಣ ಎಂದರು.
ಸದ್ಯಕ್ಕೆ ಏನೂ ಹೇಳಕ್ಕಾಗಲ್ಲ, ಪಕ್ಷ ಯಾರು ನಾಯಕರು ಎಂಬುದನ್ನು ತೀರ್ಮಾನ ಮಾಡಬೇಕು,ಎಲ್ಲರೂ ಜತೆಗೂಡಿ ಒಗ್ಗಟ್ಟಿನಿಂದ ಹೋಗುವ ಪ್ರಯತ್ನ ಮಾಡುತ್ತೇವೆ. ಈ ಎಲ್ಲಾ ಗೊಂದಲಗಳು 2028ಕ್ಕೆ ಕ್ಲಿಯರ್ ಆಗುತ್ತೆ. ಈಗಲೇ ಏನೂ ಹೇಳಲು ಸಾಧ್ಯವಿಲ್ಲ, ಪಕ್ಷ ತೀರ್ಮಾನ ಮಾಡುತ್ತದೆ, ಸಿಎಂ ಸ್ಥಾನದ ಕ್ಲೈಮ್ ಇದ್ದೇ ಇದೆ ಎಂದರು.
ಯತೀಂದ್ರ ಅವರ ಹೇಳಿಕೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಯತೀಂದ್ರ ಅವರು ಏನು ಹೇಳಿದರು ಎಂದು ನೀವು ಅವರನ್ನೇ ಕೇಳಬೇಕು, ನನಗೆ ಯಾರು ಏನು ಹೇಳಿದರು ಎಂಬುದು ಮುಖ್ಯವಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಈಗಾಗಲೇ ಪಕ್ಷದ ಹೈಕಮಾಂಡ್‌ಗೆ ವಿಧೇಯರಾಗಿ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದೇವೆ ಎಂದು ಹೇಳಿದರು.
ನಿಮ್ಮ ಕೆಲಸಗಳು, ಸೇವೆಗಳನ್ನು ಪಕ್ಷದ ಹೈಕಮಾಂಡ್ ಗುರುತಿಸುತ್ತಿಲ್ಲವೇ ಎಂದು ಕೇಳಿದಾಗ ತುಸು ಕೋಪದಿಂದ ಖಾರವಾಗಿ ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್, ನಿಮಗೇನು ಸಮಸ್ಯೆ, ನಿಮಗೆ ಮೀಡಿಯಾದವರಿಗೆ ಸಮಸ್ಯೆ ಅನಿಸುತ್ತದೆ, ನಾನು ಪಕ್ಷದ ಅಧ್ಯಕ್ಷನಾಗಿದ್ದೇನೆ, ಡಿಸಿಎಂ ಆಗಿದ್ದೇನೆ. ದೊಡ್ಡ ದೊಡ್ಡ ಖಾತೆಯ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಈ ರಾಜ್ಯದಲ್ಲಿ ಇತಿಹಾಸ ನಿರ್ಮಿಸುತ್ತಿದ್ದೇನೆ. ಪ್ರತಿಯೊಂದು ಇಲಾಖೆಯಲ್ಲಿ ಹೊಸ ಕೆಲಸ ಮಾಡುತ್ತಿದ್ದೇನೆ. ಐತಿಹಾಸಿಕ ತೀರ್ಮಾನ ತೆಗೆದುಕೊಳ್ಳುತ್ತಿದ್ದೇನೆ ಎಂದರು.
ಕಾಂಗ್ರೆಸ್ ಪಕ್ಷ ಏನು ಮಾಡಬೇಕೋ, ಅನು ಕೊಡಬೇಕೋ ನನಗೆ ಕೊಟ್ಟಿದೆ, ಮಾಡಿದೆ, ನಿಮಗೇನು ಸಮಸ್ಯೆ ಎಂದು ಕೇಳಿದರು.