ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಕುರ್ಚಿ ಕಿತ್ತಾಟ ಜೋರಾಗುತ್ತಿದೆ. ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ನೀಡಿರುವ ಹೇಳಿಕೆ ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಪರಮಾಪ್ತ, ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಬದಲಾವಣೆ ವಿಚಾರದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಉತ್ತರಾಧಿಕಾರಿ ಯಾರು ಎಂಬುದು ಹೈ ಕಮಾಂಡ್ ತೀರ್ಮಾನಿಸಲಿದೆ ಎಂದಿದ್ದಾರೆ. ಯತೀಂದ್ರ ಈ ತರ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಬಾರದು. ಈ ರೀತಿಯ ಬಾಲಿಶ ಹೇಳಿಕೆ ನೀಡಿದರೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ ಅಂತ ಯತೀಂದ್ರ ವಿರುದ್ಧ ಶಿವಗಂಗಾ ಬಸವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ
2028ಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಈ ನಿಟ್ಟಿನಲ್ಲಿ ಗಮನ ಹರಿಸಬೇಕು. ಇಂತವರ ಬಗ್ಗೆ ಹೈ ಕಮಾಂಡ್ ಗಮನ ಹರಿಸಬೇಕು. ಒಂದು ವೇಳೆ ಈ ರೀತಿಯಾಗಿ ನಾನು ಹೇಳಿಕೆ ಕೊಟ್ರೆ ನೋಟಿಸ್ ಕೊಡ್ತಾರೆ. ಆದ್ರೆ ಮುಖ್ಯಮಂತ್ರಿಗಳ ಮಕ್ಕಳಾದ್ರೆ ಸುಮ್ಮನೆ ಇರೋದು ಸರಿಯಲ್ಲ.
ಈ ಬಗ್ಗೆ ಹೈಕಮಾಂಡ್ ಕ್ರಮ ಕೈಗೊಳ್ಳಲಿ ಎಂದು ಶಿವಗಂಗಾ ಬಸವರಾಜ್ ಆಗ್ರಹಿಸಿದ್ದಾರೆ. ಸತೀಶ್ ಜಾರಕಿಹೊಳಿ ಸಾಹೇಬರು 2032ಕ್ಕೆ ಸಿಎಂ ಕ್ಲೈಮ್ ಮಾಡುತ್ತೇನೆ ಅಂತ ಹೇಳಿದ್ದಾರೆ. ಆ ವೇಳೆ ನಾವು ಅವರಿಗೆ ಬೆಂಬಲ ನೀಡುತ್ತೇನೆ ಅಂತ ಶಿವಗಂಗಾ ಬಸವರಾಜು ತಿಳಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಇರುವ ಪಕ್ಷ, ಮೈಸೂರು ಅರಮನೆಯಲ್ಲ. ಮೈಸೂರು ರಾಜಮನೆತನದಲ್ಲಿ ವಂಶಪಾರಂಪರ್ಯ ಇರುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಆ ರೀತಿ ವ್ಯವಸ್ಥೆ ಇಲ್ಲ, ಹೈಕಮಾಂಡ್ ತೀರ್ಮಾನ ಮಾಡ್ತದೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾಗಿರಬೇಕು ಎಂದರು.
ಎಲ್ಲರೂ ನವೆಂಬರ್ ಕ್ರಾಂತಿ ಅಂಥಾ ಹೇಳ್ತಾರೆ, ನಾನು ಡಿಸೆಂಬರ್ ಎಂದಿದ್ದೇನೆ. ಡಿಸೆಂಬರ್ ನಂತರ ಆಗೇ ಆಗ್ತದೆ ಅದರ ಬಗ್ಗೆ ಮಾತನಾಡೋದು ಬೇಡ ಎಂದು ಡಿಸೆಂಬರ್ ವೇಳೆ ಡಿಕೆಶಿ ಸಿಎಂ ಆಗ್ತಾರೆ ಎಂದು ಪರೋಕ್ಷ ಹೇಳಿಕೆಯನ್ನು ಶಿವಗಂಗಾ ಬಸವರಾಜ ನೀಡಿದರು.