ಬೆಂಗಳೂರು: ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ, ಬೇವಾವಾಬ್ದಾರಿತನ, ಅಸಾಮರ್ಥ್ಯಕ್ಕೆ ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು ಎಂದು ರಾಜ್ಯ ಬಿಜೆಪಿ ಶನಿವಾರ ಕಿಡಿಕಾರಿದೆ.
ರಸ್ತೆ ಗುಂಡಿಗೆ ನಗರದಲ್ಲಿ ಮಹಿಳೆಯೊಬ್ಬರು ಬಲಿಯಾಗಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೃತ್ಯುಕೂಪಗಳಾಗಿರುವ ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಮತ್ತೊಂದು ಜೀವ ಬಲಿಯಾಗಿದೆ. ರಸ್ತೆಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದು ಲಾರಿ ಚಕ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಇಂದು ಬೆಳಿಗ್ಗೆ ಮಾದನಾಯಕನಹಳ್ಳಿ ಹುಸ್ಕೂರು ಎಪಿಎಂಸಿ ಬಳಿ ನಡೆದಿದೆ. ನಿಮ್ಮ ಸರ್ಕಾರದ ನಿರ್ಲಕ್ಷ್ಯ, ಬೇವಾವಾಬ್ದಾರಿತನ, ಅಸಾಮರ್ಥ್ಯಕ್ಕೆ ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು ಸ್ವಾಮಿ? ಎಂದು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ಸಿಟಿ ರೌಂಡ್ಸ್ ಹೆಸರಿನಲ್ಲಿ ಟಿ-ಶರ್ಟು, ಕೂಲಿಂಗ್ ಗ್ಲಾಸು ಹಾಕಿಕೊಂಡು ಲಾಲ್ ಬಾಗ್, ಕಬ್ಬನ್ ಪಾರ್ಕುಗಳಲ್ಲಿ ಪೋಟೋ ಶೂಟ್, ರೀಲ್ಸ್ ಮಾಡಿಬಿಟ್ಟರೆ ಬೆಂಗಳೂರಿನ ರಸ್ತೆಗುಂಡಿ ಸಮಸ್ಯೆ ಸರಿಹೋಗುತ್ತಾ ಡಿ.ಕೆ.ಶಿವಕುಮಾರ್ ಅವರೇ?ಬ್ರ್ಯಾಂಡ್ ಬೆಂಗಳೂರು ಮಾಡುತ್ತೇನೆ ಎಂದು ಬೆಂಗಳೂರನ್ನು ಹಾಳು ಮಾಡಿಬಿಟ್ಟರಲ್ಲ ಸ್ವಾಮಿ. ನಾಚಿಕೆಯಾಗಬೇಕು ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಎಂದು ಕಿಡಿಕಾರಿದ್ದಾರೆ.