ಬೆಳಗಾವಿ: ನವೆಂಬರ್ ನಂತರ ತಮ್ಮ ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಳ್ಳುತ್ತಿದ್ದಂತೆ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ.
ಬೆಳಗಾವಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಹೈಕಮಾಂಡ್ ನಾಲ್ಕು ತಿಂಗಳ ಹಿಂದೆಯೇ ಸಂಪುಟ ವಿಸ್ತರಣೆ ಮಾಡುವಂತೆ ಸೂಚಿಸಿತ್ತು. ಆದರೆ ತಮ್ಮ ಸರ್ಕಾರ ಎರಡೂವರೆ ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಪುನಾರಚನೆ ಮಾಡುವುದಾಗಿ ತಿಳಿಸಿದ್ದಾಗಿ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ಮೈಲಿಗಲ್ಲು ತಲುಪಿದ ನಂತರ, ನಾನು ಈ ಸಂಬಂಧ ಹೈಕಮಾಂಡ್ ಜೊತೆ ಚರ್ಚೆ ನಡೆಸುತ್ತೇನೆ ಮತ್ತು ಅವರ ಮಾರ್ಗದರ್ಶನದಂತೆ ಮುಂದುವರಿಯುತ್ತೇನೆ" ಎಂದು ಸಿದ್ದರಾಮಯ್ಯ ಹೇಳಿದರು.
ನವೆಂಬರ್ 16 ರಂದು ನವದೆಹಲಿಗೆ ಭೇಟಿ ನೀಡಲಿರುವ ಅವರು, ಪಕ್ಷದ ಮಾಜಿ ನಾಯಕ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್ ಬರೆದ ಪುಸ್ತಕ ಬಿಡುಗಡೆಗಾಗಿ ತೆರಳುತ್ತಿರುವುದಾಗಿ ಸ್ಪಷ್ಟ ಪಡಿಸಿದರು. ಈ ವೇಳೆ ನಾನು ಪಕ್ಷದ ಹೈಕಮಾಂಡ್ ಸಹ ಭೇಟಿ ಮಾಡುತ್ತೇನೆ. ರಾಜ್ಯದ ಆಡಳಿತ ಮತ್ತು ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಅವರಿಗೆ ವಿವರಿಸುವುದು ನಮ್ಮ ಕರ್ತವ್ಯ" ಎಂದು ಅವರು ಹೇಳಿದರು. ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನ ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಇನ್ನೂ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುತ್ತಿರುವ ಹೊತ್ತಿನಲ್ಲೇ ಸಂಪುಟ ಪುನಾರಚನೆಯ ಬಿಸಿಬಿಸಿ ಚರ್ಚೆ ಶುರುವಾಗಿದ್ದು ಕೈ ಪಾಳಯದಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಹೇಳಿಕೆ-ಪ್ರತಿ ಹೇಳಿಕೆಗಳಿಗೆ ವೇದಿಕೆ ದೊರೆತಂತಾಗಿದ್ದು ಬಿಹಾರ ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣ ಮತ್ತೊಂದು ಮಗ್ಗಲಿಗೆ ಹೊರಳುವುದಂತೂ ನಿಶ್ಚಿತ ಎಂದೇ ಹೇಳಲಾಗುತ್ತಿದೆ.
ಸಂಪುಟ ಪುನಾರಚನೆ ಆಗಿಯೇ ಆಗುತ್ತದೆ ಎನ್ನುವ ದೃಢನಂಬಿಕೆಯಲ್ಲಿ ಒಂದು ಬಣವಿದ್ದರೆ, ನಾಯಕತ್ವ ಬದಲಾವಣೆ ಆಗುವ ನಿರೀಕ್ಷೆಯಲ್ಲಿ ಮತ್ತೊಂದು ಬಣವಿದೆ. ಎರಡರ ನಡುವ ತಟಸ್ಥರಾಗಿರುವ ಮತ್ತೊಂದಿಷ್ಟು ಮಂದಿ, ನಾಯಕ ಯಾರಾದರೇನು? ಪಟ್ಟ ಗಟ್ಟಿಯಾದರೆ ಸಾಕು ಎನ್ನುವವರೂ ಇದ್ದಾರೆ. ಏತನ್ಮಧ್ಯೆ, ಮಂತ್ರಿಗಿರಿಯ ಮೇಲೆ ತೂಗುಗತ್ತಿ ನೇತಾಡುವ ಆತಂಕವೂ ಕೆಲವರನ್ನು ಆವರಿಸಿದೆ.
ಸಚಿವ ಸ್ಥಾನ ಕಳೆದುಕೊಂಡಿರುವ ಕೆ.ಎನ್.ರಾಜಣ್ಣ, ಮೇಲ್ಮನೆ ಸದಸ್ಯರಾಗಿರುವ ತಮ್ಮ ಪುತ್ರ ರಾಜೇಂದ್ರರಿಗೆ ಮಂತ್ರಿ ಪದವಿ ಕೊಡಿಸುವ ಅಪೇಕ್ಷೆಯಲ್ಲಿ ಇದ್ದಾರೆ ಎನ್ನಲಾಗಿದೆ. ಪದವಿ ತ್ಯಾಗ ಮಾಡುವುದಾಗಿ ಹೇಳಿರುವ ಕೆ.ಎಚ್. ಮುನಿಯಪ್ಪ, ಪುತ್ರಿ ರೂಪಕಲಾರನ್ನು ಮಂತ್ರಿ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಡಿಸೆಂಬರ್ ವೇಳೆಗೆ ಶುಕ್ರದೆಸೆ ಬರಲಿದೆ ಎನ್ನುವ ಮೂಲಕ ಲಕ್ಷ್ಮಣ ಸವದಿ ಕೂಡ ಹಕ್ಕು ಪ್ರತಿಪಾದಿಸಿದ್ದಾರೆ. ನಾನು ಮೊದಲಿನಿಂದಲೂ ಆಕಾಂಕ್ಷಿ ಎಂದಿರುವ ಅಪ್ಪಾಜಿ ನಾಡಗೌಡ, ನನ್ನ ಪ್ರಾಮಾಣಿಕತೆ ಗೌರವಿಸುವುದಿದ್ದರೆ ನಾನು ಮಂತ್ರಿಮಂಡಲದಲ್ಲಿ ಇರುತ್ತೇನೆ ಎನ್ನುವ ಒತ್ತಡ ಹೇರಿದ್ದಾರೆ.