ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಸಿಎಂ ಹುದ್ದೆ ಅಧಿಕಾರ ಹಂಚಿಕೆ ಮತ್ತು ಸಚಿವ ಸಂಪುಟ ಪುನಾರಚನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಣದವರು ತಮ್ಮದೇ ಆದ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಈ ಮಧ್ಯೆ, ನವೆಂಬರ್ 14 ರಂದು ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರವೇ ರಾಜ್ಯ ಕಾಂಗ್ರೆಸ್ ನ ಸ್ಪಷ್ಟ ರಾಜಕೀಯ ಚಿತ್ರಣ ಸಿಗುವ ಸಾಧ್ಯತೆಯಿದೆ.
ಬಿಹಾರದಲ್ಲಿ ಮತದಾನ ಮುಗಿಯುವ ನವೆಂಬರ್ 11 ರಂದು ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನ್ನು ಡಿ ಕೆ ಶಿವಕುಮಾರ್ ಭೇಟಿ ಮಾಡಬಹುದು. ನವೆಂಬರ್ 15 ರಂದು ಸಿದ್ದರಾಮಯ್ಯ ರಾಷ್ಟ್ರ ರಾಜಧಾನಿಗೆ ಭೇಟಿ ನೀಡುವ ಸಾಧ್ಯತೆಯಿದೆ.
ಲೋಕಸಭೆಯಲ್ಲಿ ವಿರೋಧ ಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ ಅವರೊಂದಿಗೆ ಡಿ ಕೆ ಶಿವಕುಮಾರ್ ಚರ್ಚೆ ನಡೆಸುವ ಸಾಧ್ಯತೆಯಿದೆ. ದೆಹಲಿಗೆ ಕಳೆದ ಬಾರಿ ಭೇಟಿ ನೀಡಿದ್ದ ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡದೆ ಬಂದಿದ್ದರು. ಆದರೆ ಅಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವಾಗ ತಾವು ಸಿಎಂ ಆಗಿ ಮುಂದುವರಿಯುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದರು.
ನ.26 ಅಥವಾ 28ರಂದು ನಿರ್ಧಾರ?
ಸಂಪುಟದಿಂದ ಕೈಬಿಡಬಹುದೆಂದು ಭಾವಿಸುವ ಕೆಲವು ಸಚಿವರು ಮತ್ತು ಸಚಿವರಾಗುವ ಆಕಾಂಕ್ಷಿಗಳಾದ ಇನ್ನೂ ಕೆಲವರು ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡುವ ಸಿದ್ಧತೆಯಲ್ಲಿದ್ದಾರೆ.
ಶಿವಕುಮಾರ್ ಅವರ ಬೆಂಬಲಿಗರು, ಪಕ್ಷದ ಹೈಕಮಾಂಡ್ ಸಂಪುಟ ಪುನಾರಚನೆಗೆ ಅನುಮತಿ ನೀಡುವುದಿಲ್ಲ. 2023 ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಮಾಡಿಕೊಂಡ ಒಪ್ಪಂದದ ಪ್ರಕಾರ ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆ ಎಂಬ ನಂಬಿಕೆಯಲ್ಲಿದ್ದಾರೆ. ನವೆಂಬರ್ 26 ಅಥವಾ 28 ರಂದು ಹೈಕಮಾಂಡ್ ನಿರ್ಣಾಯಕ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂಬ ವದಂತಿ ಇದೆ.
ಪಕ್ಷದ ಹೈಕಮಾಂಡ್ ಒಪ್ಪಿದರೆ ಐದು ವರ್ಷಗಳ ಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂದು ಮಂಗಳೂರಿನಲ್ಲಿ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಯನ್ನು ಅವರು ರಾಜೀನಾಮೆ ನೀಡುತ್ತಾರೆ ಎಂದು ಭಾವಿಸುವ ಕೆಲವು ಶಾಸಕರು ಬೇರೆ ರೀತಿಯಲ್ಲಿ ಅರ್ಥೈಸಿದ್ದಾರೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲು ಅವಕಾಶ ನೀಡಿದರೆ, ಹೈಕಮಾಂಡ್ ಆಯ್ಕೆ ಮಾಡುವ ನಾಯಕನಿಗೆ ಅಧಿಕಾರ ಹಸ್ತಾಂತರಿಸುವ ಬಗ್ಗೆ ಸಿದ್ದರಾಮಯ್ಯ ಪರಿಗಣಿಸಬಹುದು ಎಂದು ಮೂಲಗಳು ತಿಳಿಸಿವೆ. ಆದರೆ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ವಿಷಯಕ್ಕೆ ಬಂದಾಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.