ಡಿ.ಕೆ ಸುರೇಶ್ 
ರಾಜಕೀಯ

'ದಕ್ಷಿಣ ಕನ್ನಡದಲ್ಲಿ ರಕ್ತದಾಹ ನಿಲ್ಲಿಸಿ, ಧರ್ಮಸ್ಥಳದ ಪಾವಿತ್ರ್ಯತೆ ಉಳಿಸಿ; ನಮ್ಮ ಬಳಿ ಜನಬೆಂಬಲವೂ ಇಲ್ಲ, ರಾಜಣ್ಣ ಅವರಷ್ಟೂ ತಿಳುವಳಿಕೆಯೂ ಇಲ್ಲ'

ಕೇವಲ ಸ್ವಾಮಿ ಮಂಜುನಾಥನ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಆಗ ಸುಖಾಸುಮ್ಮನೆ ಆರೋಪಗಳನ್ನು ಮಾಡಿ, ಈಗ ಕೊಳಕು ರಾಜಕಾರಣದಿಂದ ಆಚೆ ಬರಲು ಧರ್ಮಸ್ಥಳದ ಯಾತ್ರೆ ಮಾಡಲಾಗಿದೆ.

ಬೆಂಗಳೂರು: ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರುವಂತಹ ಬಿಜೆಪಿ- ಜೆಡಿಎಸ್ ಪಕ್ಷಗಳ ರಾಜಕೀಯ ಒಳಒಪ್ಪಂದವನ್ನು ಕಾಂಗ್ರೆಸ್ ಸರ್ಕಾರ ನಿಷ್ಪಕ್ಷಪಾತ ಎಸ್ಐಟಿ ತನಿಖೆ ಮೂಲಕ ವಿಫಲಗೊಳಿಸಿದೆ. ಇದೆಲ್ಲವೂ ಪ್ರತಿಪಕ್ಷಗಳ ರಾಜಕೀಯ ನಾಟಕ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಮ್ಮ ರಕ್ತದಾಹ ನಿಲ್ಲಿಸಿ, ಕ್ಷೇತ್ರದ ಪಾವಿತ್ರ್ಯತೆ ಉಳಿಸಿ” ಎಂದು ಬಮುಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ಅವರು ಹರಿಹಾಯ್ದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಧರ್ಮಸ್ಥಳಕ್ಕೆ ಬಿಜೆಪಿಯವರು ಭೇಟಿ ಜೊತೆಗೆ ಸೌಜನ್ಯ ಅವರ ಮನೆಗೂ ಭೇಟಿ ನೀಡಿದ ಬಗ್ಗೆ ಕೇಳಿದಾಗ, ಯಾತ್ರೆಯಲ್ಲಿ ಅಲ್ಲಿನ ಜನಪ್ರತಿನಿಧಿಗಳೂ ಸಹ ಶ್ರೀಕ್ಷೇತ್ರವನ್ನು ಒಪ್ಪಿ ಮಾತನಾಡಿಲ್ಲ. ಕೇವಲ ಸ್ವಾಮಿ ಮಂಜುನಾಥನ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಆಗ ಸುಖಾಸುಮ್ಮನೆ ಆರೋಪಗಳನ್ನು ಮಾಡಿ, ಈಗ ಕೊಳಕು ರಾಜಕಾರಣದಿಂದ ಆಚೆ ಬರಲು ಧರ್ಮಸ್ಥಳದ ಯಾತ್ರೆ ಮಾಡಲಾಗಿದೆ. ಇದು ಕ್ಷೇತ್ರದ ಮೇಲೆ ಇರುವ ಗೌರವದಿಂದ ಮಾಡಿರುವ ಯಾತ್ರೆಯಲ್ಲ ಎಂದರು.

ಬಿಜೆಪಿ- ಜೆಡಿಎಸ್ ಅವರು ಏತಕ್ಕೆ ಯಾತ್ರೆ ಮಾಡಿದ್ದಾರೆ. ಯಾರಿಗೆ ಸಾಂತ್ವನ ಹೇಳಲು ಯಾತ್ರೆಗೆ ಹೋಗಿದ್ದಾರೆ ಎಂದು ಪ್ರಶ್ನೆಸಿದ ಸುರೇಶ್ ಅವರು, ಬಿಜೆಪಿಯವರ ರಾಜಕೀಯ ಬೇಳೆ ಅಲ್ಲಿ ಬೇಯುವುದಿಲ್ಲ. ಏಕೆಂದರೆ ದಕ್ಷಿಣ ಕನ್ನಡ ಜಿಲ್ಲೆಯ ಜನ ಬಿಜೆಪಿಗರ ರಾಜಕೀಯ ಒಳ ಒಪ್ಪಂದಗಳನ್ನು ಅರಿತಿದ್ದಾರೆ ಎಂದರು.

ಈ ಹಿಂದೆಯೂ ಸೌಜನ್ಯ ಅವರ ಮನೆಗೆ ತೆರಳಿ ಸಾಂತ್ವನವೆಂಬ ನಾಟಕವಾಡಿ ಯಾವ ರೀತಿಯ ಹೇಳಿಕೆಗಳನ್ನು ಕೊಟ್ಟಿದ್ದಾರೆ ಎನ್ನುವುದು ದಾಖಲೆಗಳಲ್ಲಿದೆ. ಈಗಲೂ ಸಹ ಇದೇ ರೀತಿಯ ವ್ಯವಸ್ಥೆ ರೂಪಿಸಿ ಜನರನ್ನು ಮರುಳು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಧರ್ಮಸ್ಥಳ ಕ್ಷೇತ್ರ ರಾಜಕೀಯ ವಸ್ತುವಲ್ಲ. ಶ್ರೀ ಕ್ಷೇತ್ರದ ರಕ್ಷಣೆಯ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿರುವವರಿಗೆ ನಾಚಿಕೆಯಾಗಬೇಕು. ಸೌಜನ್ಯ ಪ್ರಕರಣ ಸೇರಿದಂತೆ ಅನೇಕ ಆರೋಪಗಳು ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಮುಂಚಿತವಾಗಿಯೂ ನಡೆದಿತ್ತು. ಈ ಆರೋಪಗಳು ಬಂದಂತಹ ಸಂದರ್ಭದಲ್ಲಿ ಬಿಜೆಪಿ- ಜೆಡಿಎಸ್ ನಾಯಕರು ಯಾವುದೇ ರೀತಿಯ ಹೇಳಿಕೆ ನೀಡಿದ ಉದಾಹರಣೆಗಳು ಎಲ್ಲಿಯೂ ಇಲ್ಲ ಎಂದರು.

ನಿಷ್ಪಕ್ಷವಾಗಿ ಎಸ್ ಐಟಿ ತನಿಖೆ ನಡೆದ ನಂತರ ಏಕಾಏಕಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಧರ್ಮಸ್ಥಳ ವಿಚಾರದಲ್ಲಿ ರಾಜಕೀಯ ಮಾಡುವ ಅವಶ್ಯಕತೆಯಿಲ್ಲ, ಈ ಕ್ಷೇತ್ರದ ಪರವಾಗಿ ನಾವಿದ್ದೇವೆ ಎಂದು ಅವರು ಹೇಳಿದ ನಂತರ, ಬಿಜೆಪಿ ಹಾಗೂ ಜೆಡಿಎಸ್ ನವರು ಈ ತರಾತುರಿಯಲ್ಲಿ ಯಾತ್ರೆ ಮಾಡಿದ್ದಾರೆ ಎಂದು ಜರಿದರು.

ಇದು ಆರ್ ಎಸ್ ಎಸ್ ನ ಎರಡು ಬಣಗಳ ಕಿತ್ತಾಟವೇ ಎಂದು ಕೇಳಿದಾಗ, ಈ ವಿಚಾರ ಎಲ್ಲರಿಗೂ ತಿಳಿದಿದೆ. ಈ ವಿಚಾರ ಏಕೆ ಉಲ್ಬಣವಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದು ದಕ್ಷಿಣ ಕನ್ನಡ ಜಿಲ್ಲೆಗೆ ಹೋದರೆ ತಿಳಿಯುತ್ತದೆ. ಆರ್ ಎಸ್ ಎಸ್ ಹಾಗೂ ಬಿಜೆಪಿಯ ಎರಡು ಬಣಗಳ ವಿಚಾರ ಇರಬಹುದು. ಇವರ ನಾಟಕ ಇಲ್ಲಿಗೆ ನಿಲ್ಲಬೇಕು ಎಂದರು.

ಸೌಜನ್ಯ ಕುಟುಂಬದವರು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದರೆ ಖರ್ಚು ವೆಚ್ಚ ನೀಡುವುದಾಗಿ ವಿಜಯೇಂದ್ರ ಅವರು ಹೇಳಿರುವ ಬಗ್ಗೆ ಕೇಳಿದಾಗ, “ಇದರ ಬಗ್ಗೆ ಅವರನ್ನೇ ಕೇಳಬೇಕು. ಏತಕ್ಕಾಗಿ ಈ ಪ್ರಕರಣದ ಖರ್ಚು ವೆಚ್ಚ ಭರಿಸುತ್ತೀರಿ? ಇಂತಹ ಹೇಳಿಕೆಯನ್ನು ಈ ಹಿಂದೆಯೂ ನೀಡಲಾಗಿತ್ತು. ಇವರಿಗೆ ರಾಜಕೀಯ ನೆನಪುಗಳು ಕಡಿಮೆ ಇರಬೇಕು” ಎಂದರು. ಇದು ಮತಬ್ಯಾಂಕ್ ರಾಜಕಾರಣವೇ ಎಂದು ಕೇಳಿದಾಗ, “ಮತ ಬ್ಯಾಂಕ್ ರಾಜಕಾರಣ ಚುನಾವಣಾ ಸಮಯದಲ್ಲಿ ನಡೆಯುತ್ತದೆ, ಈಗ ನಡೆಯುತ್ತಿರುವುದು ಕೆಸರೆರಚಾಟ” ಎಂದರು.

ಮುನಿರತ್ನ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಬಿ ರಿಪೋರ್ಟ್ ನೀಡಿರುವ ಬಗ್ಗೆ ಕೇಳಿದಾಗ, “ಇದು ಬಿಜೆಪಿಯವರ ವಿಚಾರ, ಅವರನ್ನೇ ಕೇಳಬೇಕು. ಇದು ನಮಗೆ ಸಂಬಂಧಿಸಿದ ವಿಚಾರವಲ್ಲ. ದೂರು ನೀಡಿದವರು ಬಿಜೆಪಿ ಕಾರ್ಯಕರ್ತೆ. ಅವರದ್ದೇ ಪಕ್ಷದ ಕಾರ್ಯಕರ್ತೆ ಅತ್ಯಾಚಾರವಾಗಿದೆ ಎಂದು ದೂರು ನೀಡಿದ್ದರು. ಆ ಹೆಣ್ಣು ಮಗಳು ಎಲ್ಲಿಂದ ಸಾಕ್ಷಿ ಒದಗಿಸಲು ಆಗುತ್ತದೆ. ಅವರ ಶಾಸಕರಷ್ಟು ಬುದ್ದಿವಂತರಲ್ಲವಲ್ಲ ಅವರು” ಎಂದು ವ್ಯಂಗ್ಯವಾಡಿದರು.

ಜಾತಿ ನಿಂದನೆ ಆರೋಪದಲ್ಲಿ, ಇನ್ನೊಂದು ಅತ್ಯಾಚಾರ ಪ್ರಕರಣದಲ್ಲಿ ಸತ್ಯ ಸಾಬೀತಾಗಿದೆಯಲ್ಲ. ಇದರ ಬಗ್ಗೆ ಮಾಧ್ಯಮಗಳು ಮಾತನಾಡಬೇಕು. ಬಿಜೆಪಿ ಕಾರ್ಯಕರ್ತೆಗೆ ಆಗಿರುವ ಅನ್ಯಾಯದ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ನಾಯಕರು ಇದರ ಬಗ್ಗೆ ಉತ್ತರ ನೀಡಬೇಕು. ಹೀರೋ ತರ ಜನರ ಮುಂದೆ ಬಂದು ಭಾಷಣ ಮಾಡುತ್ತಿದ್ದಾರೆ. ಯಾವ ಮುಖ ಹೊತ್ತುಕೊಂಡು ಭಾಷಣ ಮಾಡುತ್ತಿದ್ದಾರೋ ಗೊತ್ತಿಲ್ಲ” ಎಂದು ಹೇಳಿದರು.

ಶಿವಕುಮಾರ್ ಅವರು ಬಿಜೆಪಿಗೆ ಹೋಗಬಹುದು ಎನ್ನುವ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಹೇಳಿಕೆ ಬಗ್ಗೆ ಕೇಳಿದಾಗ, “ರಾಜೇಂದ್ರ ಅವರು ಹಾಗೂ ರಾಜಣ್ಣ ಅವರು ಇಬ್ಬರೂ ಹಿರಿಯ ನಾಯಕರು. ಅವರಿಗೆ ಏನೇನು ಮಾಹಿತಿ ಇದೆಯೋ ನನಗೆ ಗೊತ್ತಿಲ್ಲ. ಇದರ ಬಗ್ಗೆ ಮುಖ್ಯಮಂತ್ರಿಯವರು, ಎಐಸಿಸಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಯವರು ಉತ್ತರ ನೀಡುತ್ತಾರೆ” ಎಂದರು.

ಸೆಪ್ಟೆಂಬರ್ ಕ್ರಾಂತಿ ಎಂದರೆ ಬಿಜೆಪಿಗೆ ಹೋಗುವುದು ಎನ್ನುವ ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮ ಬಳಿ ಜನಬೆಂಬಲವೂ ಇಲ್ಲ. ಅವರಷ್ಟು ತಿಳುವಳಿಕೆಯೂ ಇಲ್ಲ. ನಮಗೆ ಇರುವುದು ಕಾಂಗ್ರೆಸ್ ಪಕ್ಷವೊಂದೇ, ಆ ಪಕ್ಷದ ಕೆಳಗೆ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಧ್ವಜದ ಕೆಳಗೆ, ಕಾಂಗ್ರೆಸ್ಸಿಗರ ಜೊತೆಗೆ ಕೆಲಸ ಮಾಡಿ ಅಭ್ಯಾಸವಿದೆ. ಉಳಿದದ್ದು ಅವರಿಗೆ ಬಿಟ್ಟಿದ್ದು” ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕನಕಪುರದಲ್ಲಿ ಮೆಡಿಕಲ್ ಕಾಲೇಜ್; ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಸಂಪುಟ ಅಸ್ತು

ADR report: ದೇಶದಲ್ಲಿ ಶೇ. 47 ರಷ್ಟು ಸಚಿವರ ಮೇಲೆ ಕ್ರಿಮಿನಲ್ ಆರೋಪ, ಬಿಲಿಯನೇರ್ ಪೈಕಿ ಕರ್ನಾಟಕಕ್ಕೆ ಮೊದಲ ಸ್ಥಾನ, ಡಿಕೆಶಿ ಎಷ್ಟನೇ ಶ್ರೀಮಂತ?

ಉಕ್ರೇನ್‌ನಲ್ಲಿ ಶಾಂತಿ ನೆಲೆಸಲು ಭಾರತದ ಮೇಲಿನ 'ಸುಂಕಾಸ್ತ್ರ' ನಿರ್ಣಾಯಕ: US ಸುಪ್ರೀಂ ಕೋರ್ಟ್‌ಗೆ ಡೊನಾಲ್ಡ್ ಟ್ರಂಪ್ ಮಾಹಿತಿ

NIRF ರ‍್ಯಾಂಕಿಂಗ್‌: ಸತತ 7ನೇ ವರ್ಷವೂ ಐಐಟಿ ಮದ್ರಾಸ್ ಗೆ ಅಗ್ರಸ್ಥಾನ; IISc ಬೆಂಗಳೂರಿಗೆ 2ನೇ ಸ್ಥಾನ

SCO Summit 2025: ಬೀಜಿಂಗ್‌, ಮಾಸ್ಕೋ ಮತ್ತು ವಾಷಿಂಗ್ಟನ್‌ ನಡುವೆ ಭಾರತದ ಜಾಗರೂಕ ನಡಿಗೆ (ಜಾಗತಿಕ ಜಗಲಿ)

SCROLL FOR NEXT