ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ, ಸಮಾನತೆಯ ಬಗ್ಗೆ ಮುಸ್ಲಿಮರನ್ನು ಪ್ರಶ್ನಿಸುವ ಧೈರ್ಯ ಇದೆಯಾ? ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಭಾನುವಾರ ಪ್ರಶ್ನಿಸಿದ್ದಾರೆ.
ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ ಜನ ಏಕೆ ಬೇರೆ ಧರ್ಮಕ್ಕೆ ಮತಾಂತರ ಆಗ್ತಿದ್ರು? ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಪ್ರಶ್ನೆಗಳನ್ನು ವಿಪಕ್ಷ ನಾಯಕ ಆರ್. ಅಶೋಕ್ ಮುಂದಿಟ್ಟಿದ್ದಾರೆ.
ಇಸ್ಲಾಂ ಧರ್ಮದಲ್ಲಿ ಸಮಾನತೆ ಇದ್ದಿದ್ದರೆ, ಇಸ್ಲಾಂ ಶಾಂತಿ ಪ್ರಿಯ ಮತವಾಗಿದ್ದರೆ, ಮುಸ್ಲಿಮರಲ್ಲಿ ಭ್ರಾತೃತ್ವದ ಭಾವನೆ ಇದ್ದಿದ್ದರೆ ಪಹಲ್ಗಾಮ್ ನಲ್ಲಿ ಉಗ್ರವಾದಿಗಳು ಪ್ರವಾಸಿಗರ ಹೆಸರು ಕೇಳಿ, ಹೆಣ್ಣು ಮಕ್ಕಳ ಹಣೆಯಲ್ಲಿ ಕುಂಕುಮ ನೋಡಿ, ಕಲ್ಮಾ ಪಠಣೆ ಮಾಡಲು ಹೇಳಿ, ಹಿಂದುಗಳನ್ನು ಮಾತ್ರ ಯಾಕೆ ಕೊಲ್ಲುತ್ತಿದ್ದರು, ಮಹಿಳೆಯರಿಗೆ ಯಾಕೆ ಮಸೀದಿಗೆ ಪ್ರವೇಶವಿಲ್ಲ, ತ್ರಿವಳಿ ತಲಾಖ್ ನಿಷೇಧ ಮಾಡಲು ವಿರೋಧವೇಕೆ, ಖುರಾನ್ ನಲ್ಲಿ ಹಿಂದೂಗಳು ಸೇರಿದಂತೆ ಮುಸ್ಲಿಮೇತರರನ್ನು ಕಾಫಿರರು ಅಂತ ಯಾಕೆ ಕರೆಯುತ್ತಾರೆ ಎಂದು ಕೇಳುವ ಧೈರ್ಯ ಸಿದ್ದರಾಮಯ್ಯಗೆ ಇದೆಯಾ ಎಂದು ಕೇಳಿದ್ದಾರೆ.
ಹೌದು ಹಿಂದೂ ಸಮಾಜದಲ್ಲಿ ಜಾತಿ ಪದ್ಧತಿ ಎಂಬ ಪಿಡುಗು ಇರುವುದು ವಾಸ್ತವ. ಹಿಂದೂ ಸಮಾಜದಲ್ಲಿ ಇರುವ ಲೋಪದೋಷಗಳನ್ನು ತಿದ್ದಲು, ಕಾಲಕ್ಕೆ ತಕ್ಕಂತೆ ಬದಲಾಗಲು ಅನೇಕ ಯುಗ ಪುರುಷರು ಜನ್ಮ ತಾಳಿದ್ದಾರೆ. ತನ್ನನ್ನು ತಾನು ತಿದ್ದುಕೊಳ್ಳುವ, ಪರಿವರ್ತನೆ ಆಗುವ ಶಕ್ತಿ ಹಿಂದೂ ಸಮಾಜಕ್ಕೆ ಇದೆ ಎಂದು ಹೇಳಿದ್ದಾರೆ.
ಬಸವಣ್ಣನವರಿಂದ ಹಿಡಿದು ಸ್ವಾಮಿ ವಿವೇಕಾನಂದರವರೆಗೆ, ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ಹಿಡಿದು ಇಲ್ಲಿಯವರೆಗೆ ಅನೇಕರು ಹಿಂದೂ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ, ಮಾಡುತ್ತಲೂ ಇದ್ದಾರೆ. ಆದರೆ ಇಸ್ಲಾಂ ಮತದಲ್ಲಿ ಬೇರೂರಿರುವ ಮೂಲಭೂತವಾದವನ್ನು, ಜಿಹಾದಿ ಮಾನಸಿಕತೆಯನ್ನು ಪ್ರಶ್ನಿಸುವ, ತಿದ್ದುವ ಯಾವ ಪರಿವರ್ತಕನೂ ಹುಟ್ಟಿಲ್ಲ, ಹುಟ್ಟಿದರೂ ಅಂತಹ ಪರಿವರ್ತನೆಯನ್ನು ಮುಸ್ಲಿಮರು ಒಪ್ಪುವುದೂ ಇಲ್ಲ. ಅದಕ್ಕೆ ಮುಸ್ಲಿಮರಿಗೆ ಔರಂಗಜೇಬ್, ಟಿಪ್ಪು ಸುಲ್ತಾನನಂತಹ ಮತಾಂಧರೇ ಸದಾ ಮಾದರಿಯಾಗುತ್ತಾರೆಯೇ ಹೊರತು ಸಂತ ಶಿಶುನಾಳ ಶರೀಫರು, ಡಾ.ಅಬ್ದುಲ್ ಕಲಾಂ ಅಂತಹವರು ಮಾದರಿ ಆಗುವುದೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸನಾತನ ಹಿಂದೂ ಧರ್ಮವನ್ನ, ಹಿಂದೂಗಳನ್ನು ಅವಹೇಳನ ಮಾಡುವ ನಿಮ್ಮ ಎಡಪಂಥೀಯ ಕನ್ನಡಕವನ್ನು ಒಮ್ಮೆ ಪಕ್ಕಕ್ಕಿಟ್ಟು ವಸ್ತುನಿಷ್ಠವಾಗಿ ಯೋಚನೆ ಮಾಡಿ. ನಿಮ್ಮ ಅಕ್ಕಪಕ್ಕದಲ್ಲಿರುವ ಎಡಪಂಥೀಯ ಬುದ್ಧಿಜೀವಿಗಳ ತಾಳಕ್ಕೆ ಕುಣಿಯದೆ, ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿ ಮಾತನಾಡುವುದನ್ನು ಕಲಿಯಿರಿ ಎಂದು ಸಲಹೆ ನೀಡಿದ್ದಾರೆ.