ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಾಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಡಿಯಲ್ಲಿರುವ ಐದು ನಿಗಮಗಳಿಗೆ ನಡೆಯುವ ಚುನಾವಣೆಯನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ.
ಸಂಸದ ರಾಹುಲ್ ಗಾಂಧಿ ಅವರು ಲೋಕಸಭೆ ಚುನಾವಣೆಯಲ್ಲಿ, ವಿಶೇಷವಾಗಿ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿದ್ದು ಬೆಂಗಳೂರಿನಿಂದ 'ಮತ ಚೋರಿ' ಅಭಿಯಾನವನ್ನು ಪ್ರಾರಂಭಿಸುತ್ತಿರುವುದರಿಂದ, ಚುನಾವಣೆಯಲ್ಲಿ ತಮ್ಮ ಸಾಮರ್ಥ್ಯವನ್ನು ಪರೀಕ್ಷಿಸಲು ಶಿವಕುಮಾರ್ ಇದನ್ನು ಒಂದು ಅವಕಾಶವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ತೋರುತ್ತದೆ.
2023 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಭರ್ಜರಿ ಗೆಲುವಿಗೆ ತಂತ್ರಜ್ಞರಾಗಿ ಕೆಲಸ ಮಾಡಿದ್ದ ಎಐಸಿಸಿ ಸದಸ್ಯ ಸುನಿಲ್ ಕನುಗೋಳು ಬೆಂಗಳೂರಿನಲ್ಲಿ ಸಚಿವರಿಗೆ ಸಂಯೋಜಕರಾಗಿರುತ್ತಾರೆ. ವಿಧಾನಸಭಾ ಚುನಾವಣೆಗಾಗಿ ಕೇರಳದಲ್ಲಿ ಕರ್ತವ್ಯದಲ್ಲಿರುವ ಕನುಗೋಳು ಅವರ ತಂಡವು ಶೀಘ್ರದಲ್ಲೇ ಗ್ರೇಟರ್ ಬೆಂಗಳೂರು ಚುನವಾಣೆಗೆ ತಂತ್ರ ರಚಿಸಲು ಮುಂದಾಗಲಿದೆ ಎಂದು ಮೂಲಗಳು ತಿಳಿಸಿವೆ.
ಕ್ಷೇತ್ರಗಳ ಮೇಲೆ ಹಿಡಿತ ಹೊಂದಿರುವ ಎಂಎಲ್‌ಸಿಗಳನ್ನು 10 ವಿಧಾನಸಭಾ ಕ್ಷೇತ್ರಗಳಿಗೆ ನೇಮಿಸಲಾಗಿದೆ, ಡಿ ಶ್ರೀನಿವಾಸ್ (ಕೆಆರ್ ಪುರಂ), ರಾಮೋಜಿಗೌಡ (ಬೊಮ್ಮನಹಳ್ಳಿ), ಗೋವಿಂದರಾಜ್ (ದಾಸರಹಳ್ಳಿ), ನಜೀರ್ ಅಹ್ಮದ್ (ಚಿಕ್‌ಪೇಟೆ), ಎಂಆರ್ ಸೀತಾರಾಮ್ (ಯಲಹಂಕ), ಸುಧಾಮ್ ದಾಸ್ (ಸಿವಿ ರಾಮನ್ ನಗರ), ರಮೇಶ್ ಬಾಬು (ಮಲ್ಲೇಶ್ವರಂ), ಯುಬಿ ವೆಂಕಟೇಶ್ (ಬಸವನಗುಡಿ), ಸಲೀಮ್ ಅಹ್ಮದ್ (ಮಹಾಲಕ್ಷ್ಮಿ ಲೇಔಟ್) ಮತ್ತು ನಾಗರಾಜ್ ಯಾದವ್ (ಮಹಾದೇವಪುರ) ಮತ್ತು ಮಾಜಿ ಉಪ ಮೇಯರ್ ಎಲ್ ಶ್ರೀನಿವಾಸ್ (ಪದ್ಮನಾಭ ನಗರ) ಸಚಿವರುಗಳೊಂದಿಗೆ ಸಮನ್ವಯ ಸಾಧಿಸುತ್ತಾರೆ.
ಕರ್ನಾಟಕದ ಉಸ್ತುವಾರಿ ಹೊಂದಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಚರ್ಚೆಯ ನಂತರ, ಶಿವಕುಮಾರ್ ಸಂಘಟನಾ ಕಾರ್ಯಕ್ಕೆ ಸಜ್ಜಾಗಿದ್ದಾರೆ. ಅವರು ತಮ್ಮ ಆಪ್ತ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿಸಿ ಚಂದ್ರಶೇಖರ್ ಮತ್ತು ರಾಜ್ಯಸಭೆ ಸದಸ್ಯರನ್ನು ಸಂಚಾಲಕರನ್ನಾಗಿ ಹೊಂದಿರುವ ಸಮಿತಿಯನ್ನು ರಚಿಸಿದ್ದಾರೆ, ಇದು ಐದು ನಿಗಮಗಳಿಗೆ ಮುಂಬರುವ ಚುನಾವಣೆಗಳಿಗೆ ಸಿದ್ಧತೆಗಳು ಮತ್ತು ಸಂಘಟನಾ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಡಿಕೆಶಿ ಇನ್ನೊಬ್ಬ ಆಪ್ತ, ಮಾಜಿ ಐವೈಸಿ ಮುಖ್ಯಸ್ಥ ಬಿವಿ ಶ್ರೀನಿವಾಸ್ ಸಹ-ಸಂಚಾಲಕರಾಗಿದ್ದಾರೆ.
ಬೆಂಗಳೂರಿನಲ್ಲಿರುವ ಪಕ್ಷದ ನಾಯಕರು, ಶಾಸಕರು ಸೇರಿದಂತೆ, 2024 ರ ಲೋಕಸಭಾ ಚುನಾವಣೆ ಮತ್ತು 2023 ರ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳು, ಎಐಸಿಸಿ ಕಾರ್ಯದರ್ಶಿಗಳು ಸೇರಿದಂತೆ ಎಲ್ಲಾ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಮತ್ತು ಪಕ್ಷದ ಪದಾಧಿಕಾರಿಗಳನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ. ಸುನೀಲ್ ಕನುಗೋಳು ಕೂಡ ಸಮಿತಿಯ ಭಾಗವಾಗಿದ್ದಾರೆ.
ಶಿವಕುಮಾರ್ ಅವರು ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024 ರ ನೇತೃತ್ವ ವಹಿಸಿದ್ದರು, ಬಿಬಿಎಂಪಿಯನ್ನು ಐದು ನಿಗಮಗಳಾಗಿ ವಿಂಗಡಿಸಿದರು. ಕಾಯ್ದೆಯ ಸೆಕ್ಷನ್ 35 ರ ಅಡಿಯಲ್ಲಿ, ಇವಿಎಂಗಳ ಬದಲಿಗೆ ಮತಪತ್ರಗಳನ್ನು ಬಳಸಿಕೊಂಡು ಚುನಾವಣೆಗೆ ಹೋಗಲು ಅವಕಾಶವಿದೆ. ನವೆಂಬರ್ 1 ರೊಳಗೆ ವಾರ್ಡ್‌ಗಳ ಡಿಲಿಮಿಟೇಶನ್ ಪೂರ್ಣಗೊಳಿಸಲು ಮತ್ತು ನವೆಂಬರ್ 30 ರೊಳಗೆ ಮೀಸಲಾತಿ ನಿಗದಿಪಡಿಸಲು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ನೀಡಿದೆ, ಅಂದರೆ ಜಿಬಿಎ ಚುನಾವಣೆ ಸನ್ನಿಹಿತವಾಗಿದೆ ಎಂದು ಮೂಲಗಳು ತಿಳಿಸಿವೆ.