ಬೆಂಗಳೂರು: ಚುನಾವಣಾ ಆಯೋಗವು ಮತಗಳ್ಳತನಕ್ಕೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಯನ್ನು ಒದಗಿಸಿದೆ ಎಂದು ಹೇಳುವ ಮೂಲಕ ಸುಳ್ಳು ಹೇಳಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಶುಕ್ರವಾರ ತಿರುಗೇಟು ನೀಡಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತಗಳ್ಳರನ್ನು ರಕ್ಷಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಸಿಐಡಿ 18 ಪತ್ರಗಳನ್ನು ಬರೆದಿದ್ದು, ಇತ್ತೀಚಿನ ಪತ್ರ ಫೆಬ್ರವರಿ 1, 2025 ರಂದು ಬರೆದಿದೆ. ಮುಖ್ಯ ಚುನಾವಣಾ ಅಧಿಕಾರಿ(ಸಿಇಒ) ತನಿಖೆಯ ಉದ್ದೇಶಕ್ಕಾಗಿ ಸಂಬಂಧಿತ ಮಾಹಿತಿಯನ್ನು ಒದಗಿಸುವಂತೆ ಸಂಬಂಧಪಟ್ಟವರಿಗೆ ನಿರ್ದೇಶಿಸುವಂತೆ ಕೇಳಿಕೊಂಡಿದೆ ಎಂದು ಹೇಳಿದರು.
"ತನಿಖೆಯ ಸಮಯದಲ್ಲಿ, ಐಪಿ(ಇಂಟರ್ನೆಟ್ ಪ್ರೋಟೋಕಾಲ್) ಲಾಗ್‌ಗಳನ್ನು ಒದಗಿಸಲಾಗಿದೆ. ಗಮ್ಯಸ್ಥಾನವನ್ನು ಪರಿಶೀಲಿಸಿದಾಗ, ಐಪಿ ಮತ್ತು ಗಮ್ಯಸ್ಥಾನ ಪೋರ್ಟ್ ಕಾಣೆಯಾಗಿದೆ. ಆದ್ದರಿಂದ, ಸಂಬಂಧಪಟ್ಟವರಿಗೆ ಅದನ್ನು ಒದಗಿಸಲು ಮತ್ತು ಕೆಳಗೆ ತಿಳಿಸಲಾದ ಪ್ರಶ್ನೆಗಳಿಗೆ ಸಂಬಂಧಿಸಿದ ಮಾಹಿತಿ ದಾಖಲೆಯನ್ನು ಒದಗಿಸಲು ನಿರ್ದೇಶಿಸಲು ವಿನಂತಿಸಲಾಗಿದೆ" ಎಂದು ಸಿಐಡಿ ಪತ್ರವನ್ನು ಖರ್ಗೆ ಓದಿದರು.
ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಓಟಿಪಿ ಮೂಲ, ಬಳಕೆ ಮಾಡಲಾಗಿರುವ ಐಪಿ ವಿಳಾಸ ಮತ್ತು ಸಲಕರಣೆಗಳ ವಿಳಾಸ ಸೇರಿದಂತೆ 5 ಪ್ರಮುಖ ಅಂಶಗಳ ಮಾಹಿತಿಯನ್ನು ಕೇಳಿದ್ದಾರೆ. ಇದ್ಯಾವುದನ್ನು ಒದಗಿಸದೆ ಆಯೋಗ ತಪ್ಪು ಮಾಡಿದರವರನ್ನು ರಕ್ಷಿಸುವ ಯತ್ನ ನಡೆಸುತ್ತಿದೆ ಎಂದು ದೂರಿದರು.
"ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್(NVSP), ಮತದಾರರ ಸಹಾಯವಾಣಿ ಅಪ್ಲಿಕೇಶನ್(VHA) ಪ್ಲಾಟ್‌ಫಾರ್ಮ್‌ಗಳು OTP/ಮಲ್ಟಿಫ್ಯಾಕ್ಟರ್ ದೃಢೀಕರಣ ಸೌಲಭ್ಯವನ್ನು ಅಳವಡಿಸಿಕೊಂಡಿವೆಯೇ? ಅರ್ಜಿಗಳನ್ನು ಅಪ್‌ಲೋಡ್ ಮಾಡಲು OTP ದೃಢೀಕರಣ ಸೌಲಭ್ಯ ಇದೆಯೇ? ಇದ್ದರೆ, ವಿವರ ನೀಡಿ" ಎಂದು ಕೇಳಿದೆ.
"OTP ಯಂತಹ ದೃಢೀಕರಣ ಅಸ್ತಿತ್ವದಲ್ಲಿದ್ದರೆ, OTPಯನ್ನು ಲಾಗಿನ್‌ಗಾಗಿ ಬಳಸಿದ ಮೊಬೈಲ್ ಸಂಖ್ಯೆಗೆ ಅಥವಾ ಅರ್ಜಿದಾರರು ಫಾರ್ಮ್‌ನಲ್ಲಿ ಒದಗಿಸಿದ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆಯೇ ಅಥವಾ ಎರಡಕ್ಕೂ ಕಳುಹಿಸಲಾಗುತ್ತದೆಯೇ? ಲಾಗ್‌ಗಳನ್ನು ರಚಿಸಿ ಕಾನೂನು ಜಾರಿ ಸಂಸ್ಥೆ(LEA) ಮುಂದೆ ಹಾಜರುಪಡಿಸಲು ರಚಿಸಿದ ಕಾನೂನುಬದ್ಧ ನಿಯಂತ್ರಣ ಬಳಕೆದಾರರನ್ನು ಹೊಂದಿರುವ ವ್ಯಕ್ತಿಯಿಂದ ಭಾರತೀಯ ಸಾಕ್ಷ್ಯ ಕಾಯ್ದೆಯ 65B ಅಡಿಯಲ್ಲಿ ಪ್ರಮಾಣಪತ್ರವನ್ನು ಒದಗಿಸಿ. ಇದಲ್ಲದೆ, ದ್ವಿತೀಯ ರೂಪದಲ್ಲಿ ಎಲೆಕ್ಟ್ರಾನಿಕ್ ಸಾಧನದ ಸ್ವೀಕಾರಾರ್ಹತೆಗೆ 65B ಪ್ರಮಾಣಪತ್ರವು ಕಡ್ಡಾಯವಾಗಿದೆ ಎಂದು ಗೌರವಾನ್ವಿತ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ..." ಎಂದರು.
"ಮತದಾರರು/ಸಾರ್ವಜನಿಕ ದೃಷ್ಟಿಕೋನದಿಂದ NVSP, VHA ಮತ್ತು ಗರುಡ ಅಪ್ಲಿಕೇಶನ್‌ಗಳ ಹಂತ-ಹಂತದ ಬಳಕೆಗೆ ಸಂಬಂಧಿಸಿದಂತೆ ಪ್ರಸ್ತುತಿಯನ್ನು ವ್ಯವಸ್ಥೆ ಮಾಡಲು ಸಂಬಂಧಪಟ್ಟವರಿಗೆ ನಿರ್ದೇಶಿಸಿ" ಎಂದು ಸಿಐಡಿ ಕೇಳಿಕೊಂಡಿದೆ.
ಆದರೆ 2023, ಫೆ. 21ರಂದೇ ಪೊಲೀಸರ ತನಿಖೆಗೆ ಎಲ್ಲಾ ರೀತಿಯ ದಾಖಲೆಗಳ್ನು ಒದಗಿಸಿರುವುದಾಗಿ ಆಯೋಗ ನಿನ್ನೆ ಹೇಳಿಕೆ ನೀಡಿದೆ. ಇದು ಸಂಪೂರ್ಣ ಸುಳ್ಳು. ಮಾಹಿತಿ ನೀಡಿದ್ದೇ ಆಗಿದ್ದರೆ ಇತ್ತೀಚೆಗೆ 2025ರ ಫೆ.4 ರಂದು ರಾಜ್ಯ ಚುನಾವಣಾ ಮುಖ್ಯಾಧಿಕಾರಿಗಳ ಕಚೇರಿಯ ಜಂಟಿ ಆಯುಕ್ತರು, ಕೇಂದ್ರ ಮುಖ್ಯಚುನಾವಣಾ ಆಯುಕ್ತರಿಗೆ ಪತ್ರ ಬರೆದು, ಅಳಂದ ಕ್ಷೇತ್ರದ ಪ್ರಕರಣದಲ್ಲಿ ತನಿಖಾಧಿಕಾರಿ ಕೇಳಿರುವ ಮಾಹಿತಿ ಒದಗಿಸುವಂತೆ ಏಕೆ ಮನವಿ ಮಾಡಿದ್ದಾರೆ. ಅದರ ಜೊತೆಗೆ ಈವರೆಗೂ ನಡೆದಿರುವ ಎಲ್ಲಾ ಪತ್ರವ್ಯವಹಾರಗಳ ಮಾಹಿತಿಯನ್ನು ಉಲ್ಲೇಖಿಸಿದ್ದಾರೆ ಎಂದು ಸಚಿವರು ತಿಳಿಸಿದ್ದು, ಈ ಪತ್ರವನ್ನು ಬಿಡುಗಡೆ ಮಾಡಿದ್ದಾರೆ.
ರಾಹುಲ್‌ಗಾಂಧಿ ಆನ್‌ಲೈನ್‌ನಲ್ಲಿ ಹೆಸರುಗಳು ಡಿಲಿಟ್ ಆಗಿವೆ ಎಂದು ಎಲ್ಲಿಯೂ ಹೇಳಲಿಲ್ಲ. ಆಯೋಗ ಈ ರೀತಿ ದಾರಿ ತಪ್ಪಿಸುವುದನ್ನು ಏಕೆ ಮಾಡುತ್ತಿದೆ ಎಂದು ಅರ್ಥವಾಗುತ್ತಿಲ್ಲ. ಆಯೋಗವನ್ನು ಪ್ರಶ್ನೆ ಮಾಡಿದರೆ ಬಿಜೆಪಿಯ ಕೇಂದ್ರ ಸಚಿವರು, ಸಂಸದರು ಏಕೆ ಉತ್ತರ ನೀಡುತ್ತಿದ್ದಾರೆ. ಇವರೆಲ್ಲಾ ಚುನಾವಣಾ ಆಯೋಗದ ವಕ್ತಾರಿಕೆಯ ಹೊರ ಗುತ್ತಿಗೆ ಕೆಲಸ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
"ನೀವು ಯಾರಿಗೆ ಸುಳ್ಳು ಹೇಳುತ್ತಿದ್ದೀರಿ? ನೀವು ಎಲ್ಲಾ ಮಾಹಿತಿಯನ್ನು ಒದಗಿಸಿದ್ದರೆ, ನೀವು ಈ ಪತ್ರವನ್ನು ಏಕೆ ಬರೆದಿದ್ದೀರಿ" ಎಂದು ಖರ್ಗೆ ಪ್ರಶ್ನಿಸಿದರು.
ಅಕ್ರಮ ನಡೆದಾಗ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳಿದ್ದವು. ಆಯೋಗ ಮತ್ತು ಜಿಲ್ಲಾಡಳಿತದಲ್ಲಿ ಬಿಜೆಪಿ ಸರ್ಕಾರ ನಿಯೋಜಿಸಿದ್ದ ಅಧಿಕಾರಿಗಳೇ ಕೆಲಸಮಾಡುತ್ತಿದ್ದರು. ಅವರದೇ ಅಧಿಕಾರಿ ಪ್ರಾಥಮಿಕ ವಿಚಾರ ನಡೆಸಿ, ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಾಗಿದೆ. ಈ ಕನಿಷ್ಠ ಜ್ಞಾನವೂ ಇಲ್ಲದ್ದಂತೆ ಬಿಜೆಪಿಯವರು ರಾಹುಲ್‌ಗಾಂಧಿಯವರ ಸಾಮಾನ್ಯ ಪ್ರಜ್ಞೆಯನ್ನು ಪ್ರಶ್ನಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
2023ರ ವಿಧಾನಸಭೆ ಚುನಾವಣೆಗೂ ಮುನ್ನ ತಮ ಪಕ್ಷದ ಕಾರ್ಯಕರ್ತ ವಿಜಯ್ ಕುಮಾರ್ ಕರೆ ಮಾಡಿ, ನನ್ನ ಹೆಸರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂದು ಬಿಎಲ್‌ಓ ಹೇಳಿರುವುದಾಗಿ ತಿಳಿಸಿದರು. ಆತಂಕಗೊಂಡ ನಾವು ಪರಿಶೀಲಿಸಿದಾಗ 6018 ಹೆಸರುಗಳ ಡಿಲೀಟ್‌ಗೆ ಅರ್ಜಿ ಬಂದಿರುವುದು ಪತ್ತೆಯಾಯಿತು ಎಂದು ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ತಿಳಿಸಿದರು.
ಈ ಬಗ್ಗೆ ಕಲಬುರಗಿ ಜಿಲ್ಲಾಧಿಕಾರಿ, ಅಳಂದ ತಹಶೀಲ್ದಾರ್, ರಾಜ್ಯ ಮುಖ್ಯಚುನಾವಣಾಧಿಕಾರಿ, ಕೇಂದ್ರ ಮುಖ್ಯ ಚುನಾವಣಾಧಿಕಾರಿಗಳಿಗೆ ಹಂತಹಂತವಾಗಿ ದೂರು ನೀಡಲಾಯಿತು. ಆಗ ಹೆಸರು ಡಿಲಿಟ್ ಮಾಡುವ ಪ್ರಕ್ರಿಯೆ ನಿಲ್ಲಿಸಿದ್ದರು. ಇಲ್ಲದೇ ಹೋದರೆ ಹೆಸರುಗಳು ಡಿಲಿಟ್ ಆಗಿ ನಾನು ಸೋಲುತ್ತಿದ್ದೆ ಎಂದು ಹೇಳಿದರು.
ನಿವೃತ ಶಿಕ್ಷಕ ಸೂರ್ಯಕಾಂತ್ ಗೋವಿಂದ್ ಮತ್ತು ಗೋದಬಾಯಿ ಎಂಬ ಅನಕ್ಷರಸ್ತ ಮಹಿಳೆ ಹೆರಿನಲ್ಲಿ ತಲಾ 12 ಜನರ ಹೆಸರು ಡಿಲಿಟ್ ಮಾಡಲು ಫಾರಂ ನಂ-7 ಸಲ್ಲಿಕೆಯಾಗಿವೆ. ಇದು ಅರ್ಜಿ ಸಲ್ಲಿಸಿದವರಿಗೂ ಗೊತ್ತಿಲ್ಲ, ಹೆಸರು ಡಿಲಿಟ್ ಆಗಬೇಕಾದವರಿಗೂ ಮಾಹಿತಿ ಇಲ್ಲ ಎಂದು ವಿವರಿಸಿದರು.