ಬೆಂಗಳೂರು: 'ಜಾತಿ ಗಣತಿ' ಎಂದು ಕರೆಯಲ್ಪಡುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ರಾಜ್ಯಾದ್ಯಂತ ಸೋಮವಾರಿಂದ ಆರಂಭವಾಗಿದ್ದು, ಇದನ್ನು ಮುಂದೂಡುವಂತೆ ಒಕ್ಕಲಿಗ ಮುಖಂಡರ ನಿಯೋಗ ಮಂಗಳವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಖರ್ಗೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಒಕ್ಕಲಿಗ ಮೀಸಲಾತಿ ಸಮಿತಿಯ ಮುಖ್ಯ ಸಂಚಾಲಕ ನಾಗರಾಜ್ ಯಲಚವಾಡಿ ಅವರು, ಸುಮಾರು 800 ಜಾತಿಗಳಿದ್ದವು. ಈಗ, ಹಿಂದುಳಿದ ವರ್ಗಗಳ ಆಯೋಗವು 1,561 ಜಾತಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಯಾವುದೇ ವಿಚಾರಣೆ ಅಥವಾ ಶಾಸ್ತ್ರೀಯ ಅಧ್ಯಯನಗಳಿಲ್ಲದೆ ಜಾತಿಗಳನ್ನು ಸೇರಿಸಲಾಗಿದೆ. ಇದಲ್ಲದೆ, ಸರ್ಕಾರವು ಸಮೀಕ್ಷಾ ಅಪ್ಲಿಕೇಶನ್‌ನಲ್ಲಿ ಸರಿಯಾದ ತರಬೇತಿಯನ್ನು ನೀಡಿಲ್ಲ ಎಂದು ಹೇಳಿದರು.
ಈ ಎಲ್ಲ ಕಾರಣಗಳಿಂದಾಗಿ ನಾವು ಸಮೀಕ್ಷೆಯನ್ನು ಮುಂದೂಡುವಂತೆ ಮನವಿ ಮಾಡಿದ್ದೇವೆ ಎಂದು ನಾಗರಾಜ್ ಯಲಚವಾಡಿ ತಿಳಿಸಿದರು.
ಈಗಾಗಲೇ ಸರ್ಕಾರ ಹೇಳಿರುವಂತೆ ಸಮೀಕ್ಷೆಯನ್ನು ಕೇವಲ 15 ದಿನಗಳಲ್ಲಿ ಪೂರ್ಣಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಸಮೀಕ್ಷೆಯನ್ನು 45 ದಿನಗಳ ಕಾಲ ಮುಂದೂಡುವಂತೆ ರಾಜ್ಯ ಸರ್ಕಾರ ಸೂಚಿಸಬೇಕು ಎಂದು ಮನವಿ ಮಾಡಿದ್ದೇವೆ. ನಮ್ಮ ಮನವಿಯನ್ನು ಪರಿಶೀಲಿಸುವುದಾಗಿ ಖರ್ಗೆ ಭರವಸೆ ನೀಡಿದ್ದಾರೆ ಎಂದು ಯಲಚವಾಡಿ ಹೇಳಿದ್ದಾರೆ.
ನವರಾತ್ರಿ ಪ್ರಾರಂಭವಾಗುತ್ತಿರುವ ಈ ಸಮಯದಲ್ಲಿ ಸಮೀಕ್ಷೆ ನಡೆಸಿದರೆ ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗದು. ಆದ್ದರಿಂದ 45 ದಿನಗಳ ನಂತರ, 60 ದಿನಗಳ ಕಾಲ ಸಮೀಕ್ಷೆ ನಡೆಸಬೇಕು ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀ ಶನಿವಾರ ಆಗ್ರಹಿಸಿದ್ದರು. ಆದಿಚುಂಚನಗಿರಿ ಶ್ರೀಗಳ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಶನಿವಾರ ಒಕ್ಕಲಿಗ ಸಮುದಾಯದ ಬೃಹತ್ ಸಭೆ ನಡೆಸಲಾಗಿತ್ತು. ಅದರಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಸೇರಿ ಸಮುದಾಯದ ಅನೇಕ ಗಣ್ಯರು ಭಾಗವಹಿಸಿದ್ದರು.