ಬೆಂಗಳುೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು. ಕರ್ನಾಟಕದ ಬಹು ದೊಡ್ಡ ವರ್ಗಗಳ ಜನರನ್ನು ಎದುರು ಹಾಕಿಕೊಳ್ಳುವ ಮೂಲಕ ನಮ್ಮ ಪಕ್ಷಕ್ಕೆ ಸಹಾಯ ಮಾಡುತ್ತಿರುವುದಕ್ಕಾಗಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯಾ ಹೇಳಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ತುರಾತುರಿಯಲ್ಲಿ ಜಾತಿ ಜನಗಣತಿ ನಡೆಸಲು ಆದೇಶಿಸುವ ಮೂಲಕ ಸಿದ್ದರಾಮಯ್ಯನವರು ತಮ್ಮ ಪಕ್ಷದ ಸದಸ್ಯರು, ತಮ್ಮ ಸಂಪುಟ ಸಹೋದ್ಯೋಗಿಗಳೂ ಸೇರಿದಂತೆ ಎಲ್ಲರಿಗೂ ಅಸಮಾಧಾನ ಉಂಟು ಮಾಡಿದ್ದಾರೆ.
ಪ್ರಸಕ್ತ, ಒಕ್ಕಲಿಗರು, ಲಿಂಗಾಯತರು, ದಲಿತರು, ಹಿಂದುಳಿದ ವರ್ಗಗಳು, ಬ್ರಾಹ್ಮಣರು, ಅಲ್ಪಸಂಖ್ಯಾತರು, ಬುಡಕಟ್ಟು ಜನಾಂಗದವರು ಮತ್ತು ಅಲೆಮಾರಿ ಜನಾಂಗಗಳೂ ಕೂಡ ಕಾಂಗ್ರೆಸ್ ಸರ್ಕಾರದ ಬಗ್ಗೆ ಅಸಮಾಧಾನಗೊಂಡಿದ್ದಾರೆ. ತಮ್ಮ ಸ್ವಂತ ಕುರುಬ ಸಮುದಾಯವಾದರೂ ತಮ್ಮೊಂದಿಗಿದೆಯೇ ಅಥವಾ ಅವರೂ ಸಹ ಅಸಮಾಧಾನಗೊಂಡಿದ್ದಾರೆಯೇ ಎಂದು ಮುಖ್ಯಮಂತ್ರಿಗಳು ಕೇಳಿಕೊಳ್ಳಬೇಕಾಗಿದೆ.
ನಿಜವಾಗಿ ಈ ಜಾತಿ ಸಮೀಕ್ಷೆಯಿಂದ ಯಾರಿಗೆ ಸಂತೋಷವಾಗಿದೆ ಎಂದು ಕೇಳುವಂತಾಗಿದ್ದು, ಬಹುಶಃ ರಾಹುಲ್ ಗಾಂಧಿಯವರಿಗೆ ಮಾತ್ರ ಸಂತೋಷವಾಗಿರಬಹುದು ಎಂದಿದ್ದಾರೆ. ಕರ್ನಾಟಕದ ಪ್ರತಿಯೊಂದು ಸಮುದಾಯ ಜಾತಿ ಸಮೀಕ್ಷೆಯ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿವೆ. ಪ್ರತಿಯೊಂದು ಸಮುದಾಯವೂ ಕೂಡ ಸಮೀಕ್ಷೆಯ ಅಂತಿಮ ಫಲಿತಾಂಶದ ಬಗ್ಗೆ ಭಯಪಡುವಂತಾಗಿದೆ.
ಯಾವುದೇ ಸಮೀಕ್ಷೆ ಕೂಡ ಅವರ ಆಕಾಂಕ್ಷೆ ಅಥವಾ ನಿರೀಕ್ಷೆಗಳಿಗೆ ತಕ್ಕಂತೆ ಇರಲಾರದು ಎಂದು ತೋರುತ್ತದೆ. ಇವತ್ತಿನ ಪತ್ರಿಕೆಗಳಲ್ಲಿ ಈ ಕುರಿತಾದ ವರದಿಗಳೇ ತುಂಬಿವೆ. ಸ್ವತಃ ಸಿದ್ದರಾಮಯ್ಯನವರೇ ಕಾಂಗ್ರೆಸ್ ಪಕ್ಷವನ್ನು ಮುಗಿಸುವಂತೆ ಕಾಣುತ್ತಿದ್ದು, ಅಧಿಕಾರ ಹಸ್ತಾಂತರದ ಸಮಯ ಬಂದಾಗ ಡಿ.ಕೆ.ಶಿವಕುಮಾರ್ ಅವರಿಗೆ ವಹಿಸಿಕೊಳ್ಳಲು ನಿಜವಾಗಿಯೂ ಏನೂ ಉಳಿದಿರುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಇದು ಹೇಗೆ ಇರಲಿ, ಬಿಜೆಪಿಯಲ್ಲಿರುವ ನಮಗೆ ಇದೆಲ್ಲದರ ಬಗ್ಗೆ ಆಕ್ಷೇಪಿಸುವ ಅಗತ್ಯವಿಲ್ಲ. ಕೇಂದ್ರ ಸರ್ಕಾರ ಸಾರ್ವತ್ರಿಕ ಜನಗಣತಿಯ ಜೊತೆಗೆ ಸಮೀಕ್ಷೆಯನ್ನು ಘೋಷಿಸಿದಾಗಲೇ, ರಾಜ್ಯ ಸರ್ಕಾರ ಪ್ರತ್ಯೇಕ ಜಾತಿ ಸಮೀಕ್ಷೆಯನ್ನು ಮಾಡುವ ಅಗತ್ಯವಿಲ್ಲ ಎಂದು ನಾನು ಹಿಂದೆಯೇ ಹೇಳಿದ್ದೆ ಎಂದು ತಿಳಿಸಿದ್ದಾರೆ.
ಜಾತಿ ಸಮೀಕ್ಷೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯನವರು ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿರುವುದು ಮಾತ್ರವಲ್ಲ, ಅವರ ಎದೆಯ ಮೇಲೆ ಭಾರಿ ಭಾರಿ ಹಗರಣಗಳ ಭಾರವಿದೆ ಎನ್ನುವುದು ಅವರ ಸಾರ್ವಜನಿಕ ನಡವಳಿಕೆಯಲ್ಲಿ ಪ್ರತಿಫಲಿಸುತ್ತಿದೆ. ನಿನ್ನೆ, ದಸರಾ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮೈಸೂರಿನಲ್ಲಿ ತಮ್ಮ ಜನರ ಮೇಲೆಯೇ ರೇಗಿದ್ದು ಮಾತ್ರವಲ್ಲ, ಅವರೆಲ್ಲಾ ಇಲ್ಲಿ ಯಾಕೆ ಬಂದಿದ್ದಾರೆ ಎಂದು ಕೇಳಿದರು. ಇದು ಸ್ವಾಭಾವಿಕವಾಗಿ ಕಾರ್ಯಕ್ರಮದ ಒಟ್ಟು ಆಯೋಜನೆ ಮತ್ತು ಘನತೆಯ ಮೇಲೆ ಪರಿಣಾಮ ಬೀರಿತು. ಕರ್ನಾಟಕದಲ್ಲಿ ರಾಜಕೀಯ ಗೊಂದಲ ಈ ವಾರ ಹೊಸದೊಂದು ಮಟ್ಟ ತಲುಪಿದೆ ಎಂದು ಹೇಳಿದ್ದಾರೆ.