ಸಿದ್ದರಾಮಯ್ಯ 
ರಾಜಕೀಯ

ಸಾಮಾಜಿಕ-ಆರ್ಥಿಕ ಸಮೀಕ್ಷೆ ಯಾರ ವಿರುದ್ಧವೂ ಅಲ್ಲ; ಬಿಜೆಪಿಯದ್ದು ಮನುವಾದಿ ಮನಸ್ಥಿತಿ

ಬಿಜೆಪಿ ನಾಯಕರೇ, ನೀವು ಕೇಂದ್ರ ಸರ್ಕಾರದ ಜಾತಿ ಗಣತಿಯನ್ನೂ ವಿರೋಧಿಸುತ್ತೀರಾ? ಹಾಗೆ ವಿರೋಧಿಸುವುದಾದರೆ ಅದನ್ನು ಗಟ್ಟಿ ದನಿಯಲ್ಲಿ ಈಗಲೇ ಹೇಳಿಬಿಡಿ.

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಗಣತಿಯನ್ನು ಬಲವಾಗಿ ಸಮರ್ಥಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಹಿಷ್ಕಾರಕ್ಕೆ ಕರೆ ನೀಡಿದ ಪ್ರತಿಪಕ್ಷ ಬಿಜೆಪಿ ನಾಯಕರ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿದರು.

ನಮ್ಮ ಸರ್ಕಾರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪ್ರಾರಂಭಿಸುತ್ತಿದ್ದಂತೆಯೇ ‘‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್" ಎಂದು ಕೂಗು ಹಾಕುತ್ತಿರುವವರ ಆಂತರ್ಯದಲ್ಲಿರುವ ನಿಜ ಬಣ್ಣ ಬಯಲಾಗುತ್ತಿದೆ. ರಾಜ್ಯ ಬಿಜೆಪಿಯ ನಾಯಕರು ಒಬ್ಬೊಬ್ಬರಾಗಿ ಹೊರಗೆ ಬಂದು ನಮ್ಮ ಸಮೀಕ್ಷೆಯನ್ನು ಬಹಿಷ್ಕರಿಸುವಂತೆ ಕರೆನೀಡುವ ಮೂಲಕ ಸಾರ್ವಜನಿಕರ ಎದುರು ಬೆತ್ತಲಾಗುತ್ತಿದ್ದಾರೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸುತ್ತಿರುವ ಸಮೀಕ್ಷೆ ಯಾವುದೇ ಒಂದು ಜಾತಿ-ಧರ್ಮಗಳಿಗೆ ಸೀಮಿತವಾದುದಲ್ಲ. ಇದು ರಾಜ್ಯದ ಏಳು ಕೋಟಿ ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ. ಇದು ಯಾರ ವಿರುದ್ಧವೂ ಅಲ್ಲ, ಇದು ಎಲ್ಲರ ಪರವಾಗಿರುವ ಸಮೀಕ್ಷೆ. ಇದರ ಮುಖ್ಯ ಉದ್ದೇಶ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮಾನತೆಯನ್ನು ಸಾಧಿಸಿ ಸರ್ವರಿಗೂ ಸಮಪಾಲು, ಸಮಬಾಳು ನೀಡುವುದಾಗಿದೆ.

ಸಂಪತ್ತು, ಅವಕಾಶ ಮತ್ತು ಪ್ರಾತಿನಿಧ್ಯ ಎಲ್ಲವೂ ಯಥಾಸ್ಥಿತಿಯಲ್ಲಿಯೇ ಇರಬೇಕು. ಬಡವರು ಬಡವರಾಗಿಯೇ ಉಳಿಯಬೇಕು, ಹಿಂದುಳಿದವರು ಹಿಂದೆಯೇ ಉಳಿಯಬೇಕು. ಮಹಿಳೆಯರು ಅವಕಾಶ ವಂಚಿತರಾಗಿಯೇ ಇರಬೇಕು, ವರ್ಣ ಮತ್ತು ವರ್ಗಗಳ ನಡುವಿನ ಅಸಮಾನತೆ ಮುಂದುವರಿಯಬೇಕು ಎನ್ನುವುದು ಮನುವಾದ. ಬಿಜೆಪಿ ನಾಯಕರ ಅಂತರಂಗದಲ್ಲಿರುವುದು ಇದೇ ಮನುವಾದಿ ಮನಸ್ಥಿತಿ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ನಮ್ಮ ಸರ್ಕಾರ ನಡೆಸುವ ಸಮೀಕ್ಷೆಯಿಂದ ಕೇವಲ ದಲಿತ, ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸ್ಥಿತಿ-ಗತಿ ಮಾತ್ರವಲ್ಲ, ಮುಂದುವರಿದ ಜಾತಿಗಳೊಳಗಿನ ಬಡವರು ಮತ್ತು ಅವಕಾಶ ವಂಚಿತರ ಸ್ಥಿತಿಗತಿಯೂ ಗೊತ್ತಾಗಲಿದೆ. ಈ ವಾಸ್ತವಸ್ಥಿತಿ ಅರಿವಾಗುವುದು ಬಿಜೆಪಿಯವರಿಗೆ ಬೇಡವಾಗಿದೆ. ಸಂಪತ್ತು, ಅವಕಾಶ ಮತ್ತು ಪ್ರಾತಿನಿಧ್ಯ ಪ್ರತಿಯೊಂದು ಜಾತಿ ಮತ್ತು ಧರ್ಮದೊಳಗಿನ ಉಳ್ಳವರ ಕೈಯಲ್ಲಿಯೇ ಇರಬೇಕು ಎನ್ನುವುದೇ ಅವರ ವಿರೋಧದ ಹಿಂದಿನ ದುರುದ್ದೇಶ.

ಬಿಹಾರದಲ್ಲಿ ಇವರದ್ದೇ ಮೈತ್ರಿ ಸರ್ಕಾರ ಜಾತಿ ಆಧಾರಿತ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದೆ. ಇದೇ ರೀತಿ ತೆಲಂಗಾಣದಲ್ಲಿಯೂ ನಡೆದಿದೆ. ಅಲ್ಲಿಯೂ ಬಿಜೆಪಿ ನಾಯಕರು ಬಾಯಿ ಮುಚ್ಚಿಕೊಂಡಿದ್ದಾರೆ. ಇವೆಲ್ಲಕ್ಕಿಂತಲೂ ಮಿಗಿಲಾಗಿ ಈಗ ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಜಾತಿ ಗಣತಿ ಮಾಡಲು ಹೊರಟಿದೆ. ಕರ್ನಾಟಕದಲ್ಲಿ ಜಾತಿಗಳನ್ನು ಪರಿಗಣಿಸಿ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರೇ, ನೀವು ಕೇಂದ್ರ ಸರ್ಕಾರದ ಜಾತಿ ಗಣತಿಯನ್ನೂ ವಿರೋಧಿಸುತ್ತೀರಾ? ಹಾಗೆ ವಿರೋಧಿಸುವುದಾದರೆ ಅದನ್ನು ಗಟ್ಟಿ ದನಿಯಲ್ಲಿ ಈಗಲೇ ಹೇಳಿಬಿಡಿ. ಪ್ರಧಾನಿಯ ಎದುರು ತಲೆ ಎತ್ತಿ ಮಾತನಾಡುವ ದಮ್ಮು-ತಾಕತ್ತು ಇಲ್ಲದ ನಿಮಗೆ ಇದನ್ನು ವಿರೋಧಿಸುವ ಧೈರ್ಯ ಇದೆಯೇ? ಯಾಕೆ ತಮ್ಮ ಮೂರ್ಖತನದ ಹೇಳಿಕೆಗಳ ಮೂಲಕ ರಾಜ್ಯದ ಪ್ರಜ್ಞಾವಂತ ಜನರ ಎದುರು ನಗೆಪಾಟಲಿಗೀಡಾಗುತ್ತಿದ್ದೀರಿ?

ಬಿಜೆಪಿ ನಾಯಕರ ಈ ಆತ್ಮವಂಚಕ ನಡವಳಿಕೆಯನ್ನು ರಾಜ್ಯದ ಜನತೆ ಅರ್ಥಮಾಡಿಕೊಳ್ಳಬೇಕು. ಅವರ ರಾಜಕೀಯ ಪ್ರೇರಿತ ಠಕ್ಕುತನದ ಹೇಳಿಕೆಗಳನ್ನು ಮನೆಯ ಕಸದ ಬುಟ್ಟಿಗೆ ಎಸೆದು ಎಲ್ಲರೂ ಈಗ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡು ಸಂಪೂರ್ಣ ಸಹಕಾರ ನೀಡಬೇಕು. ಈ ಮೂಲಕ ನಾವೆಲ್ಲರೂ ಸೇರಿ ಸಮ ಸಮಾಜವನ್ನು ನಿರ್ಮಾಣ ಮಾಡುವ ಮೂಲಕ ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವನ್ನು ಮಾಡೋಣ ಎಂದು ವಿನಯಪೂರ್ವಕವಾಗಿ ಅರಿಕೆ ಮಾಡಿಕೊಳ‍್ಳುತ್ತಿದ್ದೇನೆ ಎಂದು ಸಿಎಂ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ.29'ರ ಬೆಳಗ್ಗೆ ಸಿದ್ದರಾಮಯ್ಯ ನಿವಾಸಕ್ಕೆ ಡಿಕೆಶಿ ಭೇಟಿ; ಕುತೂಹಲ ಕೆರಳಿಸಿದ CM, DCM ಬ್ರೇಕ್​ಫಾಸ್ಟ್ ಮೀಟಿಂಗ್

ಅಲ್ ಫಲಾಹ್ ಸ್ಥಾಪಕರಿಂದ ಸತ್ತವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭೂಮಿ ಸ್ವಾಧೀನ : ತನಿಖೆಯಲ್ಲಿ ಬಯಲು

ಕೇರಳ: ಕೈಕೊಟ್ಟ ಕ್ರೇನ್, ಸ್ಕೈ ಡಿನ್ನಿಂಗ್ ಗಾಗಿ 150 ಅಡಿ ಎತ್ತರ ಇದ್ದವರ ಜೀವ ಉಳಿದಿದ್ದೇ ಹೆಚ್ಚು!

CM ಪಟ್ಟಕ್ಕಾಗಿ ಫೈಟ್: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಚಿಂತನೆ

ಪುಟಿದೆದ್ದ ಭಾರತದ ಆರ್ಥಿಕ ಬೆಳವಣಿಗೆ; ಆದರೆ ದ್ವಿತೀಯಾರ್ಧದಲ್ಲಿ ನಿಧಾನಗತಿಯ ಬಗ್ಗೆ ತಜ್ಞರ ಎಚ್ಚರಿಕೆ

SCROLL FOR NEXT