ದಾವಣಗೆರೆ: ನಮ್ಮದು ಗಾಂಧಿ ಹಿಂದುತ್ವ, ಬಿಜೆಪಿಯವರದ್ದು ಗೋಡ್ಸೆ ಹಿಂದುತ್ವ. ನಾವು ಗಾಂಧಿ ಹಿಂದುತ್ವದ ಮೇಲೆ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಿದರೆ, ಬಿಜೆಪಿಯವರು ಗೋಡ್ಸೆ ಹಿಂದುತ್ವದ ಮೇಲೆ ಸಮಾಜದಲ್ಲಿ ಒಡಕು ಮೂಡಿಸುವ ಕಾರ್ಯ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ದಾವಣಗೆರೆಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಹಿಂದುತ್ವದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬರುವ ಕೆಲಸ ಮಾಡುತ್ತಾರೆ. ಅಧಿಕಾರಕ್ಕೆ ಬಂದ ಮೇಲೆ ಏನೂ ಕೆಲಸ ಮಾಡಲ್ಲ, ಬರೀ ಲೂಟಿ ಹೊಡೆಯುತ್ತಾರೆ.
ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಏನೂ ಅಭಿವೃದ್ಧಿ ಕೆಲಸ ಮಾಡಿಲ್ಲ. 2008ರಲ್ಲಿ ಅವರು ಪ್ರಣಾಳಿಕೆಯಲ್ಲಿ 600 ಭರವಸೆ ಕೊಟ್ಟಿದ್ದರು. ಅದರಲ್ಲಿ ಅವರು ಕೇವಲ 50-60 ಮಾತ್ರ ಭರವಸೆ ಈಡೇರಿಸಿದ್ದಾರೆ. ಆದರೆ, ನಾವು 2013-18ವರೆಗಿನ ಅವಧಿಯಲ್ಲಿ 165 ಭರವಸೆ ನೀಡಿದ್ದು ಅದರಲ್ಲಿ 158 ಭರವಸೆ ಈಡೇರಿಸಿದ್ದೇವೆ ಎಂದರು.
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಕಾಂಗ್ರೆಸ್. ಬಿಜೆಪಿಯವರು ದೇಶಕ್ಕಾಗಿ ಯಾವಾಗಲೂ ಜೈಲಿಗೆ ಹೋಗಿಲ್ಲ. ಭ್ರಷ್ಟಾಚಾರ ಮಾಡುವುದರಲ್ಲಿ ಅವರು ನಂಬರ್ ಒನ್. ಅವರು ಯಾವತ್ತೂ ರಾಜ್ಯದಲ್ಲಿ ಜನರ ಸಂಪೂರ್ಣ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದೇ ಇಲ್ಲ. ಹಿಂಬಾಗಿಲಿನಿಂದ, ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದರು.
ನಾನು ಹಿಂದೂ ಅಲ್ವಾ? ವೇದಿಕೆಯಲ್ಲಿರುವವರು ಮುಖಂಡರು ಹಿಂದುಗಳು ಅಲ್ವಾ? ನನ್ನ ಹೆಸರೇ ಸಿದ್ದರಾಮಯ್ಯ. ಇದರಲ್ಲಿ ಎರಡು ದೇವರ ಹೆಸರಿದೆ. ಒಂದು ಈಶ್ವರ ಇನ್ನೊಂದು ರಾಮ. ಆದರೂ ನಾವು ಹಿಂದುಗಳು ಅಲ್ವಾ? ಸಿದ್ದರಾಮಯ್ಯ ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಬಿಜೆಪಿಯ ತಿರಸ್ಕೃತ ಸರಕು (ರಿಜೆಕ್ಟೆಡ್ ಗೂಡ್ಸ್) ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ ಆಗಿದ್ದ ಸದಾನಂದಗೌಡ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ.
ಬಿಜೆಪಿಯಿಂದ ತಿರಸ್ಕೃತ ಆಗಿರುವ ಅವರು ಕಾಂಗ್ರೆಸ್ ಆಡಳಿತವನ್ನು ಟೀಕೆ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸರ್ಕಾರದ ಆರ್ಥಿಕ ನೆರವು ನೇರವಾಗಿ ಪಾವತಿ ಆಗುತ್ತದೆ. ಭ್ರಷ್ಟಾಚಾರ ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.