

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಿದ್ದು, ಕದನ ವಿರಾಮ "ಅಂತ್ಯಗೊಂಡಿದೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ ಅಮೆರಿಕ ಸೇನೆ ಗುರುವಾರ ಇರಾನ್‌ನ ಆಗ್ನೇಯ ಭಾಗದ ಪ್ರಮುಖ ಚಬಹಾರ್ ಬಂದರು ಮೇಲೆ ವೈಮಾನಿಕ ದಾಳಿ ನಡೆಸಿದೆ.
ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಸತತ ಎರಡನೇ ದಿನ ಅಮೆರಿಕದ ಸೇನಾ ನೆಲೆಗಳಿರುವ ಕುವೈತ್ ಮತ್ತು ಬಹ್ರೇನ್ ಕಡೆ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಇರಾನ್ ಸರ್ಕಾರಿ ಮಾಧ್ಯಮಗಳ ಪ್ರಕಾರ, ಚಬಹಾರ್ ನಗರದಲ್ಲಿ ಹಲವು ಸ್ಫೋಟಗಳು ಸಂಭವಿಸಿದ್ದು, ನಗರದ ಕೆಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂದು ತಿಳಿದುಬಂದಿದೆ.
ಸ್ಫೋಟದ ಬಳಿಕ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಏಪ್ರಿಲ್‌ನಲ್ಲಿ ಅಮೆರಿಕ-ಇರಾನ್ ಕದನ ವಿರಾಮ ಘೋಷಣೆಯಾದ ಬಳಿಕ ಚಬಹಾರ್ ಬಂದರಿನ ಮೇಲೆ ನಡೆದ ಮೊದಲ ದಾಳಿ ಇದಾಗಿದೆ.
ಅಮೆರಿಕದ ಸೇನಾ ಅಧಿಕಾರಿಗಳ ಪ್ರಕಾರ, ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳಿಗೆ ಇರಾನ್ ಬೆದರಿಕೆ ಒಡ್ಡುವ ಸಾಮರ್ಥ್ಯವನ್ನು ಕುಗ್ಗಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಅಮೆರಿಕದ ಮಧ್ಯಪ್ರಾಚ್ಯ ಕಮಾಂಡ್ (CENTCOM) ಮಾಹಿತಿ ಪ್ರಕಾರ, ಈ ಸುತ್ತಿನ ದಾಳಿಯಲ್ಲಿ ಸುಮಾರು 90 ಇರಾನಿನ ಗುರಿಗಳನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿದುಬಂದಿದೆ.
"ಹಾರ್ಮುಜ್ ಜಲಸಂಧಿಯಲ್ಲಿ ನೌಕಾಯಾನ ಸ್ವಾತಂತ್ರ್ಯಕ್ಕೆ ಇರಾನ್ ಬೆದರಿಕೆ ಒಡ್ಡುವ ಸಾಮರ್ಥ್ಯವನ್ನು ಮತ್ತಷ್ಟು ದುರ್ಬಲಗೊಳಿಸಲು ಹೆಚ್ಚುವರಿ ದಾಳಿಗಳನ್ನು ಆರಂಭಿಸಿದ್ದೇವೆ. ವಾಣಿಜ್ಯ ಹಡಗುಗಳು ಮತ್ತು ನಾಗರಿಕ ಸಿಬ್ಬಂದಿ ಮೇಲೆ ನಡೆದ ಇತ್ತೀಚಿನ ದಾಳಿಗಳಿಗೆ ಇರಾನ್ ಅನ್ನು ಹೊಣೆಗಾರರನ್ನಾಗಿ ಮಾಡುತ್ತಿದ್ದೇವೆ" ಎಂದು CENTCOM ಎಕ್ಸ್‌ನಲ್ಲಿ ತಿಳಿಸಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಚಬಹಾರ್ ಬಂದರಿನ ಸಮುದ್ರ ಸಂಚಾರ ನಿಯಂತ್ರಣ ಗೋಪುರ ಹಾಗೂ ಸಮೀಪದ ಸೇನಾ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದ್ದು, ನಾಗರಿಕ ಬಂದರು ಸೌಲಭ್ಯಗಳು ಹಾಗೂ ಪ್ರಮುಖ ಇಂಧನ ಮೂಲಸೌಕರ್ಯಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಅಮೆರಿಕ ಹೇಳಿದೆ.
ಮಂಗಳವಾರ ಹಾರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಮೂರು ಸರಕು ಹಡಗುಗಳ ಮೇಲೆ ನಡೆದ ದಾಳಿಗೆ ಇರಾನ್ ಹೊಣೆ ಎಂದು ಅಮೆರಿಕ ಆರೋಪಿಸಿತ್ತು. ಈ ಘಟನೆಗೆ ಪ್ರತೀಕಾರವಾಗಿ ದಾಳಿ ನಡೆಸಿರುವುದಾಗಿ ಅಮೆರಿಕ ಹೇಳಿದೆ.
ವಾಣಿಜ್ಯ ಹಡಗುಗಳನ್ನು ಗುರಿಯಾಗಿಸುವುದನ್ನು ಮುಂದುವರಿಸಿದರೆ "ಪರಿಣಾಮ ಇನ್ನೂ ಭೀಕರವಾಗಲಿದೆ" ಎಂದು ಟ್ರಂಪ್ ಈಗಾಗಲೇ ಎಚ್ಚರಿಕೆ ನೀಡಿದ್ದರು.
ಇದಕ್ಕೆ ಪ್ರತಿಯಾಗಿ ಇರಾನ್ ಸತತ ಎರಡನೇ ದಿನವೂ ಕುವೈತ್ ಹಾಗೂ ಬಹ್ರೇನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಈ ಬೆಳವಣಿಗೆಗಳು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಯುದ್ಧ ಅಂತ್ಯಗೊಳಿಸುವ ಪ್ರಯತ್ನಗಳಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.
ಏರ್ ಫೋರ್ಸ್ ಒನ್ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, "ನಾವು ಅವರಿಗೆ ಭಾರೀ ಹೊಡೆತ ನೀಡಿದ್ದೇವೆ. ಅವರು ಒಂದು ಬಾರಿ ದಾಳಿ ಮಾಡಿದರೆ, ನಾವು 20 ಪಟ್ಟು ಪ್ರತಿದಾಳಿ ಮಾಡುತ್ತೇವೆ" ಎಂದು ಹೇಳಿದ್ದಾರೆ.
ಇರಾನ್‌ನೊಂದಿಗೆ ಪೂರ್ಣ ಪ್ರಮಾಣದ ಯುದ್ಧದತ್ತ ಅಮೆರಿಕ ಸಾಗುತ್ತಿದೆಯೇ ಎಂಬ ಪ್ರಶ್ನೆಗೆ, "ಗೊತ್ತಿಲ್ಲ. ಆದರೆ ಯುದ್ಧವಾದರೆ ನಾವು ಅದನ್ನು ಅತ್ಯಂತ ವೇಗವಾಗಿ ಗೆಲ್ಲುತ್ತೇವೆ" ಎಂದು ತಿಳಿಸಿದ್ದಾರೆ.
ಇದಲ್ಲದೆ, "ಸೇನಾ ದೃಷ್ಟಿಯಿಂದ ನಾವು ಈಗಾಗಲೇ ಗೆದ್ದಿದ್ದೇವೆ. ಇರಾನ್ ಬಳಿ ಈಗ ಬಹಳ ಕಡಿಮೆ ಶಕ್ತಿ ಉಳಿದಿದೆ. ಅವರು ಒಪ್ಪಂದ ಮಾಡಿಕೊಳ್ಳಲು ತೀವ್ರ ಆಸಕ್ತಿ ತೋರಿಸುತ್ತಿದ್ದಾರೆ. ಆದರೆ, ಅವರು ಒಪ್ಪಂದವನ್ನು ಪಾಲಿಸುತ್ತಾರೆಯೇ ಎಂಬ ಅನುಮಾನ ಇದೆ" ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಇರಾನ್ ಸಂಸತ್ತಿನ ಸ್ಪೀಕರ್ ಹಾಗೂ ಮುಖ್ಯ ಮಾತುಕತೆಗಾರ ಮೊಹಮ್ಮದ್ ಬಾಘರ್ ಖಾಲಿಬಾಫ್, "ಬೆದರಿಕೆ ಹಾಗೂ ಮಾತು ತಪ್ಪುವುದಕ್ಕೆ ಈಗ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಅಮೆರಿಕ ಇನ್ನೂ ಕಲಿತಿಲ್ಲ" ಎಂದು ತಿರುಗೇಟು ನೀಡಿದ್ದಾರೆ.