ಮೈಸೂರು: ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆಯ ಕುರಿತು ನಡೆಯುತ್ತಿರುವ ಊಹಾಪೋಹಗಳ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿರುವ ಗೃಹ ಸಚಿವ ಡಾ ಜಿ ಪರಮೇಶ್ವರ್, 2028ರವರೆಗೆ ಪೂರ್ಣ ಐದು ವರ್ಷದ ಅವಧಿಯನ್ನು ಪೂರೈಸಲಿದ್ದಾರೆ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ರಲ್ಲಿ ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸಿದೆ. ಪ್ರತಿ ಬಾರಿ ಹೈಕಮಾಂಡ್‌ನಿಂದ ಪ್ರತ್ಯೇಕ ಸ್ಪಷ್ಟೀಕರಣ ಅಗತ್ಯವಿಲ್ಲ. 2013ರಲ್ಲಿ ಐದು ವರ್ಷದ ಅವಧಿಯನ್ನು ಸ್ಪಷ್ಟವಾಗಿ ಘೋಷಿಸದಿದ್ದರೂ ಅವರು ಪೂರ್ಣಗೊಳಿಸಿದ್ದರು. ಈ ಬಾರಿ ಅವರ ಅವಧಿ 2028ರವರೆಗೆ ಇದೆ ಅದನ್ನು ಅವರು ಪೂರ್ಣಗೊಳಿಸಬೇಕು ಎಂದು ಹೇಳಿದರು.
‘ನಾಯಕತ್ವ ಸಂಕಷ್ಟವೇ ಇಲ್ಲ’
ನಾಯಕತ್ವದಲ್ಲಿ ಭಿನ್ನಾಭಿಪ್ರಾಯ ಅಥವಾ ‘ಪವರ್ ಶೇರಿಂಗ್’ ಸೂತ್ರದ ಬಗ್ಗೆ ಹರಿದಾಡುತ್ತಿರುವ ವದಂತಿಗಳನ್ನು ತಳ್ಳಿಹಾಕಿದ ಗೃಹ ಸಚಿವರು, ಹೈಕಮಾಂಡ್ ಯಾವುದೇ ಗೊಂದಲ ಸೃಷ್ಟಿಸಿಲ್ಲ ಎಂದು ಹೇಳಿದರು.
ಹೈಕಮಾಂಡ್ ಯಾವಾಗಾದರೂ ಬದಲಾವಣೆಯ ಬಗ್ಗೆ ಅಥವಾ ಅವಧಿ ಬಗ್ಗೆ ಮಾತನಾಡಿದೆಯೇ ಇತರರು ನೀಡುವ ಹೇಳಿಕೆಗಳು ಕೇವಲ ವೈಯಕ್ತಿಕ ಅಭಿಪ್ರಾಯಗಳು. ಡಿ ಕೆ ಶಿವಕುಮಾರ್ ನಮ್ಮ ನಾಯಕರು, ಕೆಪಿಸಿಸಿ ಅಧ್ಯಕ್ಷರು ಮತ್ತು ಉಪ ಮುಖ್ಯಮಂತ್ರಿಗಳು; ಅವರಿಗೆ ಯಾವುದೇ ಸಮಸ್ಯೆಯಿಲ್ಲ. ಮುಖ್ಯಮಂತ್ರಿ ಸ್ವತಃ ವಿಧಾನಸಭೆಯಲ್ಲಿ ಹೇಳಿದಂತೆ, ನಮ್ಮ ಎಲ್ಲಾ ಶಾಸಕರು ಮುಖ್ಯಮಂತ್ರಿಯಾಗುವ ಸಾಮರ್ಥ್ಯ ಹೊಂದಿದ್ದಾರೆ. ಆದ್ದರಿಂದ ವೈಯಕ್ತಿಕ ಅರ್ಹತೆ ಬಗ್ಗೆ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
‘ಉಪಚುನಾವಣೆ ಫಲಿತಾಂಶವು ಮಾನದಂಡವಲ್ಲ’
ಮುಂದಿನ ಉಪ ಚುನಾವಣೆಯ ಫಲಿತಾಂಶಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ ಅವರು, ಅದು ಕರ್ನಾಟಕದ ರಾಜಕೀಯ ದಿಕ್ಕು ತೋರಿಸುವ ಕಾಂಪಸ್ ಆಗುವುದಿಲ್ಲ, ಸರ್ಕಾರದ ಕಾರ್ಯಕ್ಷಮತೆಯ ಸ್ಕೋರ್‌ಕಾರ್ಡ್ ಆಗುವುದಿಲ್ಲ ಎಂದು ಹೇಳಿದರು. “
ಫಲಿತಾಂಶಗಳಿಂದ ಸರ್ಕಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ನಾವು ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದೇವೆ. ಗ್ಯಾರಂಟಿ ಯೋಜನೆಗಳ ಜೊತೆಗೆ ಆಡಳಿತದ ಕಾರ್ಯಕ್ಷಮತೆಯನ್ನು ಗಮನಿಸಿ ಜನರು ಮತ ಹಾಕುತ್ತಾರೆ. ಬಿಜೆಪಿ ಮಾಡುತ್ತಿರುವ ಆರೋಪಗಳು ಆಧಾರರಹಿತವಾಗಿವೆ, ಜನರು ನಮ್ಮೊಂದಿಗಿದ್ದಾರೆ ಎಂದು ಹೇಳಿದರು.
ಅಕ್ರಮ ಗ್ಯಾಸ್ ಮಾರಾಟ
ಎಲ್ ಪಿಜಿ ಸಿಲಿಂಡರ್‌ಗಳ ಕಳ್ಳಬಜಾರ್ ಕುರಿತು ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಪೊಲೀಸರ ಕಾನೂನುಬದ್ಧ ಮಿತಿಗಳನ್ನು ವಿವರಿಸಿದರು. ಈ ವಿಷಯದಲ್ಲಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಲು ಅಥವಾ ಸ್ವತಂತ್ರವಾಗಿ ದಾಳಿ ನಡೆಸಲು ಸಾಧ್ಯವಿಲ್ಲ. ಇದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಆ ಇಲಾಖೆ ನಿರ್ದಿಷ್ಟ ಮಾಹಿತಿ ನೀಡಿದ ಬಳಿಕ ಮತ್ತು ನಮ್ಮ ಗಮನಕ್ಕೆ ತಂದಾಗ ಮಾತ್ರ ನಾವು ಕ್ರಮ ಕೈಗೊಳ್ಳುತ್ತೇವೆ ಹಾಗೂ ದಾಳಿ ನಡೆಸುತ್ತೇವೆ. ಅವರ ಸಮನ್ವಯವಿಲ್ಲದೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವುದು ಕಾನೂನುಬದ್ಧವಾಗಿ ಸಾಧ್ಯವಿಲ್ಲ ಎಂದು ಹೇಳಿದರು.