ಬೆಂಗಳೂರು: ಧರ್ಮಸಿಂಗ್ ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ನಾನು ಮತ್ತು ಪರಮೇಶ್ವರ್ ಸಚಿವ ಸ್ಥಾನದಿಂದ ವಂಚಿತರಾಗಿದ್ದೆವು. ಸಿದ್ದರಾಮಯ್ಯನವರ ಕಾಲದಲ್ಲೂ ಕೂಡ ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾದರೂ ಮೂರು ವರ್ಷ ನಂತರ ಪರಮೇಶ್ವರ್ ಅವರಿಗೆ ಸಚಿವ ಸ್ಥಾನ ಸಿಕ್ಕಿತು. ಅವರು ಅಧ್ಯಕ್ಷರಾಗಿದ್ದಾಗಲೂ ಪಕ್ಷ 124 ಸೀಟು ಗಳಿಸಿತ್ತು. ನನ್ನನ್ನೂ ಕೂಡ ಕೆಲವು ದಿನ ಹೊರಗಡೆ ಇಟ್ಟಿದ್ದರು, ನಾವು ಬಹಳ ತಾಳ್ಮೆಯಿಂದ ಇದ್ದೆವು, ನಮ್ಮಿಬ್ಬರ ತಾಳ್ಮೆ ನನ್ನನ್ನು ಪಕ್ಷ ಮುಖ್ಯಮಂತ್ರಿ ಮಾಡಿದೆ, ಪರಮೇಶ್ವರ್ ಅವರನ್ನು ಉಪ ಮುಖ್ಯಮಂತ್ರಿ ಮಾಡಿದೆ ಎಂದು ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಶಾಸಕರಿಗೆ ಸಿಎಂ ಡಿ.ಕೆ.ಶಿವಕುಮಾರ್ ಕಿವಿಮಾತು ಹೇಳಿದರು.
ನೂತನ ಸಚಿವರ ಪ್ರಮಾಣ ವಚನ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ತಾನೆ ಕ್ಯಾಬಿನೆಟ್, ನೂತನ ಸಚಿವರ ಜೊತೆ ಮಾತನಾಡಿ ಮಾರ್ಗದರ್ಶನ ನೀಡಿದ್ದೇನೆ. ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ. ನಮ್ಮದು ದೊಡ್ಡ ಪಕ್ಷ. ಎಲ್ಲರೂ ಆರ್ಹತೆಯಿದ್ದವರೇ. ಧರ್ಮಸಿಂಗ್ ಕಾಲದಲ್ಲಿ ನನ್ನ, ಪರಮೇಶ್ವರ್‌ರನ್ನ ದೂರ ಇಟ್ಟಿದ್ದರು. ತಾಳ್ಮೆ ಇರಬೇಕು ನಾಯಕರಿಗೆ ಎಂದರು.
ಇರೋದು 33 ಸ್ಥಾನ. ಮಹಿಳಾ ಸ್ಥಾನವನ್ನು ಫಿಲ್ ಮಾಡ್ತೇವೆ, ಹೆಣ್ಣುಮಕ್ಕಳಿಲ್ಲದೆ ನಮ್ಮ ಪಕ್ಷಕ್ಕೆ ಶಕ್ತಿ ಇಲ್ಲ, ಏನೇನು ಸವಾಲು, ಸಮಸ್ಯೆಗಳು ಬರಬಹುದು ಎಂದು ನೂತನ ಸಚಿವರಿಗೆ ಹೇಳಿದ್ದೇನೆ ಎಂದರು.
ನೂತನ ಸಚಿವರ ಪ್ರಮಾಣ ವಚನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರು ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು, ಅವ್ರು ಒಟ್ಟಿಗೆ ಸೇರಿ ಪಟ್ಟಿ ರೆಡಿ ಮಾಡಿದ್ವಿ. ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಇವತ್ತು. ಅಸಮಾಧಾನ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ನೂತನ ಸಚಿವರಲ್ಲಿ ಕೆಲವರ ಹೆಸರು ಕೈಬಿಟ್ಟ ವಿಚಾರದ ಬಗ್ಗೆ ಮಾತನಾಡಿ, ಹೈಕಮಾಂಡ್‌ನಿಂದ ಏನು ಬಂದಿದೆ ಅಷ್ಟೆ. ಗಾಯಿತ್ರಿ ಶಾಂತನಗೌಡರನ್ನ ಪಟ್ಟಿಯಿಂದ ಕೈಬಿಟ್ಟ ವಿಚಾರ ಟೆಕ್ನಿಕಲ್ ಸಮಸ್ಯೆ. ಮಂಕಾಳು ವೈದ್ಯ ಅವರು ನನ್ ಜೊತೆಯಲ್ಲಿಯೇ ಇದ್ದಾರೆ. ಹೆಣ್ಮಕ್ಕಳಿಗೆ ಸಚಿವ ಸ್ಥಾನ ಕೊಡುತ್ತೇವೆ ಎಂದರು.
ನಾಗೇಂದ್ರಗೆ ಸಚಿವ ಸ್ಥಾನ ಕೊಟ್ಟಿರುವುದಕ್ಕೆ ಬಿಜೆಪಿ ಆಕ್ಷೇಪದ ಬಗ್ಗೆ ಪ್ರತಿಕ್ರಿಯಿಸಿ, ನನ್ನ ಮೇಲೆಯೂ ಭ್ರಷ್ಟಾಚಾರ ಪ್ರಕರಣಗಳಿವೆ. ನನ್ ಮೇಲೆ ಕೇಸ್ ಹಾಕ್ತಾರಾ ಎಂದು ಪ್ರಶ್ನಿಸಿದರು.
15ಕ್ಕೂ ಹೆಚ್ಚು ಶಾಸಕರಿಗೆ ಅಸಮಾಧಾನ
ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು ಶಾಸಕರ ಆಕ್ರೋಶ ಭುಗಿಲೆದ್ದಿದೆ. ಈಗಾಗಲೇ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಬೇಳೂರು ಗೋಪಾಲಕೃಷ್ಣ ಸಹ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಮಾಜಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಹ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಹಲವು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬಾಕಿ ಇದ್ದ 20 ಸಚಿವ ಸ್ಥಾನಗಳ ಮೇಲೆ ದುಪ್ಪಟ್ಟು ಶಾಸಕರು ಕಣ್ಣಿಟ್ಟಿದ್ದರು. ಆದರೆ ಈಗ ನಿರೀಕ್ಷೆಯಂತೆ ಸಚಿವಾಕಾಂಕ್ಷಿಗಳು ಅಸಮಾಧಾನ ಹೊರ ಹಾಕಿದ್ದಾರೆ.
ನಮ್ಮ ಪಕ್ಷದ ಎಲ್ಲಾ 138 ಶಾಸಕರು ಹಾಗೂ ಎಲ್ಲಾ ವಿಧಾನ ಪರಿಷತ್ ಸದಸ್ಯರು ಅರ್ಹರು, ಆದರೆ ಪಕ್ಷ ತೀರ್ಮಾನ ಕೈಗೊಂಡಿದೆ, ನಾವೆಲ್ಲರೂ ಅದನ್ನು ಗೌರವಿಸುತ್ತೇವೆ ಎಂದರು.