ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, ಸಚಿವರ ವಿರುದ್ಧದ ವಿವಿಧ ಆರೋಪಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯ ಘಟಕ, "ರಾಜ್ಯದ ಜನರಿಗೆ ಕಾಂಗ್ರೆಸ್ ನೀಡಿರುವ ನೂತನ ಸಚಿವರ 'ಘನಂದಾರಿ ಸಾಧನೆ'ಗಳ ಪಟ್ಟಿ" ಎಂದು ವ್ಯಂಗ್ಯವಾಡಿದೆ. ಇದೇ ವೇಳೆ ಸಚಿವರ ವಿರುದ್ಧದ ಆರೋಪಗಳನ್ನು ಉಲ್ಲೇಖಿಸಿ ಟೀಕೆ ಮಾಡಿದೆ.
ಬಿ. ನಾಗೇಂದ್ರ- 187 ಕೋಟಿ ರೂ. ವಾಲ್ಮೀಕಿ ನಿಗಮ ಹಣ ವರ್ಗಾವಣೆ ಪ್ರಕರಣದ ಸಿಬಿಐ ಆರೋಪಪಟ್ಟಿಯಲ್ಲಿರುವ ಆರೋಪಿ.
ಮಧು ಬಂಗಾರಪ್ಪ - ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯದಿಂದ ದೋಷಿ ಎಂಬ ತೀರ್ಪು ಪಡೆದಿರುವ, ಶಿಕ್ಷಣ ಇಲಾಖೆಯನ್ನು ಹಾಳು ಮಾಡಿದ ಅನಕ್ಷರಸ್ಥ.
ವಿಜಯಾನಂದ ಕಾಶಪ್ಪನವರ್ - ಪತ್ರಕರ್ತನಿಗೆ ಬೆದರಿಕೆ ಹಾಕಿ ವಿರೋಧಿಗಳ ಮೇಲೆ ನಕಲಿ ಕೇಸ್ ಹಾಕಿ ಗೂಂಡಾಗಿರಿ ಮಾಡುತ್ತಿರುವ ಗೂಂಡಾ ರಾಜಕಾರಣಿ.
ಸಂತೋಷ್ ಲಾಡ್ - ಹೆಲ್ತ್ ಕಿಟ್ ಹೆಸರಿನಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ ಕೋಟಿ ಕೋಟಿ ಅಕ್ರಮ ನಡೆಸಿ ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ಕಳಂಕಿತ.
ಕೆ.ಎಂ. ಶಿವಲಿಂಗೇಗೌಡ - ಸದನದಲ್ಲಿ ಅಸಂಸದೀಯ ಪದಗಳನ್ನು ಬಳಸಿ ಕಲಾಪದ ಗೌರವವನ್ನೇ ಹಾರಜು ಹಾಕುವ ಎಲುಬಿಲ್ಲದ ನಾಲಿಗೆ ಎಂದು ಟೀಕಿಸಿದೆ.
ಇದರ ಜೊತೆಗೆ, "ಇದು ಸಚಿವ ಸಂಪುಟವಲ್ಲ; ಆರೋಪ, ಅಹಂಕಾರ, ಅವ್ಯವಸ್ಥೆ ಮತ್ತು ಅಯೋಗ್ಯತೆಗೆ ಕಾಂಗ್ರೆಸ್ ನೀಡಿದ ಬಹುಮಾನ. ಅರ್ಹತೆಗಿಲ್ಲ ಆದ್ಯತೆ, ನೈತಿಕತೆಗೆ ಬೆಲೆ ಇಲ್ಲ, ಅನರ್ಹರಿಗೆ ಅಧಿಕಾರ ನೀಡುವುದೇ ಡಿ.ಕೆ. ಶಿವಕುಮಾರ್ ಸರ್ಕಾರದ ಮಾದರಿ ಎಂದು ಕಿಡಿಕಾರಿದೆ.
ಪ್ರಮಾಣವಚನಕ್ಕೆ ಸಿದ್ದು ಗೈರು: ಬಿಜೆಪಿ ವ್ಯಂಗ್ಯ
ಮತ್ತೊಂದು ಪೋಸ್ಟ್‌ನಲ್ಲಿ ಬಿಜೆಪಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದು, ಸಚಿವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಅವರು ಗೈರಾಗಿದ್ದ ವಿಚಾರವನ್ನು ಉಲ್ಲೇಖಿಸಿ ವ್ಯಂಗ್ಯವಾಡಿದೆ.
ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮಕ್ಕೆ ನೀವು ಗೈರಾಗಿದ್ದು ಹುಟ್ಟುಹಬ್ಬದ ಕಾರಣದಿಂದಲೋ ಅಥವಾ ನಿಮ್ಮ ಪಟ್ಟಿಗೆ ಕ್ಯಾರೇ ಎನ್ನದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲಿನ ಅಸಮಾಧಾನದಿಂದಲೋ? ಎಂದು ಪ್ರಶ್ನಿಸಿದೆ.