ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಪ್ರಮುಖ ಬೆಳವಣಿಗೆಯೊಂದರಲ್ಲಿ, ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಈ ವಿಚಾರವಾಗಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು 25 ಜನರ ತಂಡ ಕಟ್ಟಿಕೊಂಡು ಹೋಗಿ, ಗೂಂಡಾಗಿರಿ ಮಾಡಿ ಹೊರಟ್ಟಿ ಅವರಿಂದ ಬಲವಂತವಾಗಿ ರಾಜೀನಾಮೆ ಕೊಡಿಸಿದ್ದಾರೆ. ಕರ್ನಾಟಕಕ್ಕೆ ಇದು ದೊಡ್ಡ ಕಳಂಕ. ಈ ರೀತಿ ಘಟನೆ ರಾಜ್ಯ ರಾಜಕೀಯದಲ್ಲಿ ಹಿಂದೆ ಯಾವತ್ತೂ ನಡೆದಿಲ್ಲ. ಇದರ ವಿರುದ್ಧ ಹೋರಾಟ ನಡೆಸುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಆರ್ ಅಶೋಕ್ ಅವರು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಮೊದಲು ಮುಂಗಾರು ಅಧಿವೇಶನ ಆರಂಭವಾದ ಬಳಿಕ ಅಂದರೆ ಆಗಸ್ಟ್ 14 ರಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಬಸವರಾಜ ಹೊರಟ್ಟಿ ತೀರ್ಮಾನಿಸಿದ್ದರು. ಆದರೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರ ಸುದೀರ್ಘ ಮನವೊಲಿಕೆಯ ಬಳಿಕ ಹೊರಟ್ಟಿ ಅವರು ಇಂದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ ಅವರನ್ನು ಕಾಂಗ್ರೆಸ್ ಪಕ್ಷ ಮತ್ತು ಸಿಎಂ ಡಿಕೆ ಶಿವಕುಮಾರ್ ಅವರು ನಡೆಸಿಕೊಂಡ ರೀತಿ ರಾಜ್ಯದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಖಂಡನೀಯ ಮತ್ತು ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ಅಶೋಕ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಭಾಪತಿ ಅವರ ಮೇಲೆ ಒತ್ತಡ ಹೇರಿ, ಬಲವಂತವಾಗಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿಸಿರುವುದು ಕೇವಲ ಒಬ್ಬ ವ್ಯಕ್ತಿಯ ಮೇಲಿನ ದೌರ್ಜನ್ಯವಲ್ಲ, ಅದು ವಿಧಾನ ಪರಿಷತ್ತಿನ ಘನತೆ, ಸಂವಿಧಾನಿಕ ಹುದ್ದೆಯ ಗೌರವ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ನಡೆದ ನೇರ ದಾಳಿಯಾಗಿದೆ. ಸಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಗೆ ಗೌರವ ನೀಡಬೇಕಾದ ಸರ್ಕಾರವೇ ಇಂತಹ ವರ್ತನೆ ಪ್ರದರ್ಶಿಸಿರುವುದು ಅಕ್ಷಮ್ಯ ಎಂದಿದ್ದಾರೆ.
ಅಧಿಕಾರದ ಅಹಂಕಾರದಲ್ಲಿ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವದ ಸಂಪ್ರದಾಯಗಳನ್ನು ಒಂದೊಂದಾಗಿ ತುಳಿಯುತ್ತಿದೆ. ಯಾವುದೇ ಭಿನ್ನಾಭಿಪ್ರಾಯವನ್ನು ಚರ್ಚೆ, ಸಂವಾದ, ಮನವೊಲಿಕೆ ಮೂಲಕ ಬಗೆಹರಿಸುವ ಬದಲು ಬೆದರಿಕೆ ಮತ್ತು ಒತ್ತಡ ಮೂಲಕ ಪರಿಹರಿಸಲು ಹೊರಟಿರುವುದು ಕಾಂಗ್ರೆಸ್‌ನ ನಿಜವಾದ ರಾಜಕೀಯ ಸಂಸ್ಕೃತಿಯನ್ನು ಬಯಲಿಗೆಳೆದಿದೆ.
ಈ ಹಿನ್ನೆಲೆಯಲ್ಲಿ ಇಂದು ಬಿಜೆಪಿ ನಿಯೋಗದೊಂದಿಗೆ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ, ನಡೆದ ಘಟನೆಯ ಕುರಿತು ಸಮಾಲೋಚನೆ ನಡೆಸಿ ಅವರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಲಾಯಿತು. ಸಭಾಪತಿ ಹುದ್ದೆಯ ಘನತೆ, ಸಂವಿಧಾನಬದ್ಧ ಸಂಸ್ಥೆಗಳ ಸ್ವಾಯತ್ತತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಯಾವುದೇ ಕಾರಣಕ್ಕೂ ಕುಗ್ಗಲು ಬಿಡುವುದಿಲ್ಲ ಎಂಬ ನಮ್ಮ ಬದ್ಧತೆಯನ್ನು ಪುನರುಚ್ಚರಿಸಲಾಯಿತು.
ಸದಾ ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದು ಸಂವಿಧಾನ ರಕ್ಷಣೆಯ ಬಗ್ಗೆ ಭಾಷಣ ಮಾಡುವ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರು, ಸಂವಿಧಾನಬದ್ಧ ಹುದ್ದೆಗಳ ಘನತೆಯನ್ನು ಕಾಪಾಡುವ ಕನಿಷ್ಠ ಸೌಜನ್ಯವನ್ನೂ ಪ್ರದರ್ಶಿಸಿಲ್ಲ.
ವಿಧಾನ ಪರಿಷತ್ ಸಭಾಪತಿಯಂತಹ ಉನ್ನತ ಸಂವಿಧಾನಿಕ ಹುದ್ದೆಗೆ ಗೌರವ ತೋರದ ಕಾಂಗ್ರೆಸ್‌ಗೆ ಸಂವಿಧಾನದ ಬಗ್ಗೆ ದೇಶಕ್ಕೆ ಉಪದೇಶ ಮಾಡುವ ಯಾವುದೇ ನೈತಿಕ ಹಕ್ಕಿಲ್ಲ. ಮಾತಿನಲ್ಲಿ ಸಂವಿಧಾನ, ಕೃತಿಯಲ್ಲಿ ಗೂಂಡಾಗಿರಿ ಎಂಬ ಕಾಂಗ್ರೆಸ್‌ನ ದ್ವಂದ್ವ ನಿಲುವು ಮತ್ತೊಮ್ಮೆ ರಾಜ್ಯದ ಜನತೆಯ ಮುಂದೆ ಬಯಲಾಗಿದೆ.
ಈ ಘಟನೆಯನ್ನು ಭಾರತೀಯ ಜನತಾ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಪ್ರಜಾಪ್ರಭುತ್ವದ ಮೌಲ್ಯಗಳು, ಸಂವಿಧಾನಬದ್ಧ ಸಂಸ್ಥೆಗಳ ಸ್ವಾಯತ್ತತೆ ಹಾಗೂ ಸಭಾಪತಿ ಹುದ್ದೆಯ ಘನತೆಯನ್ನು ರಕ್ಷಿಸುವ ನಮ್ಮ ಹೋರಾಟ ಮುಂದುವರಿಯಲಿದೆ. ಅಧಿಕಾರದ ಅಹಂಕಾರದಿಂದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸುತ್ತಿರುವ ಕಾಂಗ್ರೆಸ್‌ಗೆ ರಾಜ್ಯದ ಜನತೆ ಪ್ರಜಾಪ್ರಭುತ್ವದ ಮಾರ್ಗದಲ್ಲಿಯೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.