ಬೆಂಗಳೂರು: ನಾಯಕತ್ವ ಬದಲಾವಣೆ ಬಗ್ಗೆ ಡಾ. ಯತೀಂದ್ರ ಅವರು ನೀಡಿರುವುದು ಅವರ ವೈಯಕ್ತಿಕ ಅಭಿಪ್ರಾಯ, ಏನು ನಡೆದಿದೆ ಎಂಬುದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಹೈಕಮಾಂಡ್‌ಗೆ ಮಾತ್ರ ಗೊತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಭಾನುವಾರ ಹೇಳಿದ್ದಾರೆ.
ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಎಂಬುದು ತೀರ್ಮಾನ ಆಗಿದೆ’ ಎಂಬ ಡಾ. ಯತೀಂದ್ರ ಅವರ ಹೇಳಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್ ಅವರು, ‘ಅದು ಅವರ ವೈಯಕ್ತಿಕ ಅಭಿಪ್ರಾಯ’ ಎಂದು ಸ್ಪಷ್ಟಪಡಿಸಿದರು.
‘ನಾವು ಹೈಕಮಾಂಡನ್ನು ಅವಲಂಬಿಸಿದ್ದೇವೆ, ಅಧಿಕಾರ ಹಂಚಿಕೆ ಕುರಿತು ಒಪ್ಪಂದವಾಗಿದೆ ಎಂದು ಯಾರು ಹೇಳಿದ್ದಾರೆ? ಹೈಕಮಾಂಡ್ ಇದನ್ನು ಹೇಳಿದೆಯೇ? ಡಿ.ಕೆ. ಶಿವಕುಮಾರ್ ಅವರು ಹೇಳಿರಬಹುದು, ಅದು ಅವರ ಅಭಿಪ್ರಾಯ. ಅವರಿಗೆ ಗೊತ್ತಿರುವ ವಿಚಾರ ನಮಗೆ ಗೊತ್ತಿಲ್ಲ ಎಂದು ಹೇಳಿದರು.
ಹೈಕಮಾಂಡ್ ನಿರ್ಧಾರ ಕೈಗೊಳ್ಳುವವರೆಗೆ ಈ ವಿಷಯದಲ್ಲಿ ಹಲವರು ಹೇಳಿಕೆ ನೀಡಬಹುದು, ಆದರೆ ಅದು ಅವರ ಅಭಿಪ್ರಾಯಗಳಷ್ಟೇ. ಅಂತಿಮ ತೀರ್ಮಾನ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.
ಮೆಟ್ರೊ ಟಿಕೆಟ್ ದರ ಕುರಿತು ಮಾತನಾಡಿ, ‘ಮೆಟ್ರೊ ದರದ ವಿಚಾರದಲ್ಲಿ ಪದೇ ಪದೇ ಗೊಂದಲ ಉಂಟಾಗುತ್ತಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ತೆಗೆದುಕೊಳ್ಳುವ ನಿರ್ಧಾರ. ಈಗ ದರ ಏರಿಕೆಗೆ ಕೇಂದ್ರ ಸರ್ಕಾರ ತಡೆ ನೀಡಿದೆ. ಮುಂದೇನು ಮಾಡಬೇಕು ಎಂಬುದನ್ನು ಎರಡೂ ಸರ್ಕಾರಗಳು ಚರ್ಚಿಸಿ ತೀರ್ಮಾನಿಸಲಿವೆ. ದರ ನಿಗದಿ ಸಮಿತಿಗೆ ಸ್ವಾಯತ್ತತೆ ನೀಡಲಾಗಿದೆ’ ಎಂದರು.
ತಪ್ಪು ಮಾಹಿತಿ, ದ್ವೇಷ ಸಂದೇಶಗಳ ನಿಯಂತ್ರಣ ಹಾಗೂ ನಿಗಾವ್ಯವಸ್ಥೆಗೆ 67 ಕೋಟಿ ರೂ.ವೆಚ್ಚದಲ್ಲಿ ಎಐ (ಕೃತಕ ಬುದ್ಧಿಮತ್ತೆ) ತಂತ್ರಾಂಶ ಖರೀದಿ ವಿಚಾರವಾಗಿ ಮಾತನಾಡಿ, ‘ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ಹೆಚ್ಚಾಗಿದೆ. ತಪ್ಪು ಹಾಗೂ ದ್ವೇಷದ ಸಂದೇಶಗಳಿಂದ ಸಾವುಗಳಾಗುತ್ತಿವೆ. ಭಯೋತ್ಪಾದಕ ಚಟುವಟಿಕೆಗಳಿಗೂ ಪ್ರಚೋದನೆ ಆಗುತ್ತಿದೆ. ಇವೆಲ್ಲವನ್ನು ನಿಯಂತ್ರಿಸುವ ಅಗತ್ಯವಿದೆ.
ನಾವು ಏನೂ ಮಾಡುತ್ತಿಲ್ಲ ಎಂದು ಜನ ಆರೋಪಿಸಬಾರದೆಂಬ ಕಾರಣಕ್ಕೆ ಅಗತ್ಯ ಸಾಫ್ಟ್‌ವೇರ್‌ಗಳಿಗೆ ಹಣ ಖರ್ಚು ಮಾಡಬೇಕಾಗುತ್ತದೆ. ಕೆಲ ರಾಜ್ಯಗಳಲ್ಲಿ ರೂ.200 ರಿಂದ ರೂ.300 ಕೋಟಿ ವೆಚ್ಚ ಮಾಡಲಾಗಿದೆ. ಮೊಹಾಂತಿಯವರು ಇದಕ್ಕಾಗಿ ₹1,000 ಕೋಟಿಯ ಪ್ರಸ್ತಾವ ಸಲ್ಲಿಸಿದ್ದಾರೆ’ ಎಂದರು.
ಗೃಹ ಇಲಾಖೆಗೆ ಸಂಬಂಧಿಸಿದ ಬಜೆಟ್ ಬೇಡಿಕೆಗಳ ಕುರಿತು ಮಾತನಾಡಿ, ಪೊಲೀಸ್ ನೇಮಕಾತಿತ ಟ್ರಾಫಿಕ್ ವಿಭಾಗಕ್ಕೆ ಹೊಸ ವಾಹನಗಳು, ಪೊಲೀಸ್ ವಸತಿ ಯೋಜನೆ, ಸೈಬರ್ ಅಪರಾಧ ಮತ್ತು ಮಾದಕ ವಸ್ತು ನಿಯಂತ್ರಣ ಯೋಜನೆಗಳಿಗೆ ಹೆಚ್ಚುವರಿ ಅನುದಾನವನ್ನು ಕೋರಲಾಗಿದೆ. 15 ವರ್ಷ ಹಳೆಯ ವಾಹನಗಳನ್ನು ಬಳಸದಂತೆ ಕೇಂದ್ರ ಸರ್ಕಾರ ಸೂಚನೆ ನೀಡಿರುವುದರಿಂದ ಹೊಸ ವಾಹನಗಳ ಖರೀದಿಗೆ ಅನುಮತಿ ಕೋರಲಾಗಿದೆ ಎಂದು ವಿವರಿಸಿದರು.