ಬೆಂಗಳೂರು: ತಡವಾದರೂ ಮಾತು ಕೊಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಹಂಚಿಕೆ ಮಾಡುತ್ತಾರೆ ಎಂದು ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ಭರವಸೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಅಧಿಕಾರ ಹಂಚಿಕೆ ಒಪ್ಪಂದವನ್ನು ಪರೋಕ್ಷವಾಗಿ ಉಲ್ಲೇಖಿಸಿ ತಮ್ಮ ಹಿಂದಿನ ಹೇಳಿಕೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್ ವಿಳಂಬವಾದರೂ ಸಿದ್ದರಾಮಯ್ಯ ತಮ್ಮ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದರು.
ಶಿವಕುಮಾರ್ ಅವರ ನವದೆಹಲಿ ಭೇಟಿಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಸಂಸದರು, "ದೆಹಲಿಯಲ್ಲಿದ್ದಾಗಲೆಲ್ಲಾ, ಅವಕಾಶ ಸಿಕ್ಕರೆ ನಾವು ನಮ್ಮ ಪಕ್ಷದ ಹೈಕಮಾಂಡ್ ಅನ್ನು ಭೇಟಿ ಮಾಡುತ್ತೇವೆ. ಪಕ್ಷ ಅಥವಾ ಕ್ಷೇತ್ರ ಅಥವಾ ಇತರ ವಿಷಯಗಳಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸುತ್ತೇವೆ. ಆದರೆ ಕೆಲವರು ವೈಯಕ್ತಿಕ ಲಾಭಕ್ಕಾಗಿ ಹೈಕಮಾಂಡ್ ಅನ್ನು ಭೇಟಿಯಾದರೆ, ಶಿವಕುಮಾರ್ ಅಂತಹ ವ್ಯಕ್ತಿಯಲ್ಲ ಎಂದರು. ನಾಯಕತ್ವದ ವಿಷಯದಲ್ಲಿ ಶಿವಕುಮಾರ್ ಅವರ ತಾಳ್ಮೆ ಅವರ ರಾಜಕೀಯ ದೌರ್ಬಲ್ಯವಾಗಿದೆಯೇ ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಅವರು, ಕಾಲ ಎಲ್ಲದಕ್ಕೂ ಉತ್ತರಿಸುತ್ತದೆ ಎಂದರು.
ಕಳೆದ ವಾರ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಮತ್ತು ಎಂಎಲ್‌ಸಿ ಯತೀಂದ್ರ, ತಮ್ಮ ತಂದೆ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ಹೇಳಿದ್ದರಿಂದ ಮತ್ತೆ ಆಂತರಿಕ ಉದ್ವಿಗ್ನತೆ ಭುಗಿಲೆದ್ದಿತು. 2025ರ ನವೆಂಬರ್ 20ರಂದು ಕಾಂಗ್ರೆಸ್ ಸರ್ಕಾರ ತನ್ನ ಐದು ವರ್ಷಗಳ ಅವಧಿಯ ಅರ್ಧವನ್ನು ಪೂರ್ಣಗೊಳಿಸಿದ ನಂತರ ಮುಖ್ಯಮಂತ್ರಿ ಬದಲಾವಣೆಯ ಸಾಧ್ಯತೆಯ ಬಗ್ಗೆ ಊಹಾಪೋಹಗಳ ನಡುವೆ ಆಡಳಿತ ಪಕ್ಷದೊಳಗಿನ ನಾಯಕತ್ವದ ಜಟಾಪಟಿ ತೀವ್ರಗೊಂಡಿದೆ. 2023ರಲ್ಲಿ ಸರ್ಕಾರ ರಚನೆಯ ಸಮಯದಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ನಡೆದಿದೆ ಎನ್ನಲಾದ 'ಅಧಿಕಾರ ಹಂಚಿಕೆ; ಒಪ್ಪಂದದಿಂದ ಈ ಊಹಾಪೋಹಗಳು ಸೃಷ್ಟಿಯಾಗುತ್ತಿದೆ.
ಯತೀಂದ್ರ ಅವರ ಹೇಳಿಕೆಯ ಬಗ್ಗೆ ವ್ಯಂಗ್ಯವಾಡಿದ ಸುರೇಶ್, ನಾನು ಅವರಷ್ಟು ಪ್ರಭಾವಿ ಅಥವಾ ಜ್ಞಾನವಿಲ್ಲ. ಅವರು ಏನು ಹೇಳುತ್ತಾರೋ ಅದು ಅಂತಿಮ ಎಂದರು. ಇನ್ನು ನಾಯಕತ್ವದ ವಿಷಯದ ಕುರಿತು ಪದೇ ಪದೇ ಯತೀಂದ್ರ ಹೇಳಿಕೆಗಳನ್ನು ಕೊಡುತ್ತಿದ್ದರೂ ಹೈಕಮಾಂಡ್ ಯಾಕೆ ಅವರಿಗೆ ನೋಟಿಸ್ ನೀಡಿಲ್ಲ ಎಂಬ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆಯನ್ನು ಸುರೇಶ್ ಬೆಂಬಲಿಸಿದ್ದು ಪಕ್ಷದ ನೀತಿ ಎಲ್ಲರಿಗೂ ಒಂದೇ ಆಗಿರಬೇಕು ಎಂದು ಸುರೇಶ್ ಹೇಳಿದರು. ಶಿವಕುಮಾರ್ ಮುಖ್ಯಮಂತ್ರಿಯಾಗುವ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡಿದ್ದ ಹುಸೇನ್ ಗೆ ಪಕ್ಷದಿಂದ ಈ ಹಿಂದೆ ನೋಟಿಸ್ ನೀಡಲಾಗಿತ್ತು.
ಡಿಕೆ ಸುರೇಶ್ ಹೇಳಿಕೆಗೆ ಸಿದ್ದರಾಮಯ್ಯ ಸಿಡಿಮಿಡಿ
ತಡವಾದರೂ ಮಾತು ಕೊಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಹಂಚಿಕೆ ಮಾಡುತ್ತಾರೆ ಎಂಬ ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ಹೇಳಿಕೆಗೆ ಸಿದ್ದರಾಮಯ್ಯ ಸಿಡಿಮಿಡಿಕೊಂಡಿದ್ದಾರೆ. ಯಾರು ಏನೇ ಹೇಳಲಿ. ನಾನು ಮಾತ್ರ ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ ಎಂದರು.