ಕೊಪ್ಪಳ: ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಬೇರೆಯವರು ಸಿಎಂ ಆದರೆ ಸರ್ಕಾರ ನಡೆಸುವುದು ಕಷ್ಟವಿದೆ'' ಎಂದು ಹಿರಿಯ ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ್ ಶುಕ್ರವಾರ ಹೇಳಿಕೆ ನೀಡಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ರಾಮದುರ್ಗ ಶಾಸಕ ಪಟ್ಟಣ್ ' ಈಗಿರುವ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಲಿ ಎನ್ನುವುದು ನನ್ನ ಹಾಗೂ ಇತರ ಶಾಸಕರ ಆಶಯವೂ ಆಗಿದೆ' ಸಿದ್ದರಾಮಯ್ಯ ಸಿಎಂ ಸ್ಥಾನ ತ್ಯಾಗ ಮಾಡುವುದಿಲ್ಲ, ತ್ಯಾಗದ ಪ್ರಶ್ನೆ ಬರುವುದಿಲ್ಲ.
ಬೇರೆ ಯಾರೇ ಸಿಎಂ ಆದರೂ ಸರ್ಕಾರ ನಡೆಸೋದು ಈಗಿನ ಪರಿಸ್ಥಿತಿಯಲ್ಲಿ ಕಷ್ಟ ಇದೆ. ಹೀಗಾಗಿ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಲಿ ಅನ್ನೋದು ನಮ್ಮ ಅಸೆ'' ಎಂದರು.
ಸಿಎಂ ಬದಲಾವಣೆ ಆಗಲ್ಲ ಎಂದು ಎಲ್ಲ ನಾಯಕರು ಹೇಳಿದ್ದಾರೆ. ಸಿಎಂ ಕೂಡಾ ಹೈಕಮಾಂಡ್ ಹೇಳಿದ್ರೆ ನಾನು ರಾಜೀನಾಮೆ ಕೊಡುವೆ ಎಂದಿದ್ದಾರೆ. ಈ ಬಗ್ಗೆ ಹೈಕಮಾಂಡ್ ಹೇಳುತ್ತಿಲ್ಲ, ಅವರು ಬಿಡುತ್ತಿಲ್ಲ. ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಚೆನ್ನಾಗಿದ್ದಾರೆ. ಅವರ ಮಧ್ಯೆ ಜಗಳ ಆಗುತ್ತಿದೆ ಎಂದು ಸೃಷ್ಟಿ ಮಾಡುತ್ತಿದಾರೆ ಎಂದರು.
''ಡಿ.ಕೆ.ಶಿವಕುಮಾರ್ ಸಿಎಂ ಆಗಲಿ'' ಎಂದಿರುವ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು , ''ಇಕ್ಬಾಲ್ ಹುಸೇನ್ ಅವರು ಮೊದಲ ಬಾರಿ ಶಾಸಕರಾಗಿದ್ದಾರೆ.ಅವರಿಗೆ ಸ್ವಲ್ಪ ಮೆಚ್ಯೂರಿಟಿ ಕಡಿಮೆ ಇರುವ ಹಾಗೆ ಕಾಣುತ್ತಿದೆ. ಅವರು ಡಿ.ಕೆ. ಶಿವಕುಮಾರ್ ಬಹಳ ಆತ್ಮೀಯರು ಹೀಗಾಗಿ ಹೇಳುತ್ತಿದ್ದಾರೆ. ಡಿಕೆ ಶಿವಕುಮಾರ್ ನನಗೂ ಆತ್ಮೀಯರು, ನಾವೆಲ್ಲ ಹಳೇ ಸ್ನೇಹಿತರು'' ಎಂದರು.
''ಡಿ.ಕೆ.ಶಿವಕುಮಾರ್ ಅವರು ಸಿಎಂ ಆದರೆ ನಮಗೆ ಸಂತೋಷವೇ, ಆದರೆ ರಾಹುಲ್ ಗಾಂಧಿ ಹಾಗೂ ಎಲ್ಲ ಶಾಸಕರ ಭಾವನೆ ಸಿದ್ದರಾಮಯ್ಯ ಸಿಎಂ ಇರಲಿ ಎನ್ನುವ ಭಾವನೆ ಇದೆ. ಸಿದ್ದರಾಮಯ್ಯ ಎರಡೂವರೆ ವರ್ಷ ಒಳ್ಳೆಯ ಆಡಳಿತ ಕೊಟ್ಟಿದ್ದಾರೆ. ಹೀಗಾಗಿ ಅವರೇ ಇರಲಿ ಎನ್ನುವುದು ನಮ್ಮ ಭಾವನೆ ಇದೆ. 2028ಕ್ಕೆ ಡಿ.ಕೆ.ಶಿವಕುಮಾರ್ ಕ್ಲೇಮ್ ಮಾಡಲಿ, 2028 ಕ್ಕೂ ಸಿಎಂ ಆಗಲು ಬಹಳ ಜನ ಇದಾರೆ, ಯಾರ ಅದೃಷ್ಟ ಇರುತ್ತದೋ ಅವರಾಗಲಿ'' ಎಂದರು.