ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು ಗುರುವಾರ ತಾವೂ ಸಹ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷೆ ಎಂಬ ಸುಳಿವು ನೀಡಿದ್ದಾರೆ.
ಎಲ್ಲರಂತೆ ನನಗೂ ಮಹತ್ವಾಕಾಂಕ್ಷೆಗಳಿವೆ ಮತ್ತು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದರೆ ಈ ವರ್ಷ "ರಾಜಕೀಯ ಬಡ್ತಿ" ಸಿಗುವ ನಿರೀಕ್ಷೆಯಲ್ಲಿದ್ದೇನೆ ಎಂದು ಪರಮೇಶ್ವರ ಅವರು ಹೇಳಿದ್ದಾರೆ.
ಈ ಹಿಂದೆ ಎರಡು ಅವಧಿಗೆ ರಾಜ್ಯ ಕಾಂಗ್ರೆಸ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಹಿರಿಯ ನಾಯಕ, ಮುಖ್ಯಮಂತ್ರಿ ಹುದ್ದೆಯ ಬದಲಾವಣೆಯ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವಾಗ ತಾವು ಕೂಡ ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿರುವುದಾಗಿ ಹೇಳಿದ್ದರು.
"ರಾಜಕೀಯ ಬಡ್ತಿ 26(2026) ರಲ್ಲಿ ಆಗಬೇಕು. ಅದು ನಮ್ಮ ಹೈಕಮಾಂಡ್‌ಗೆ ಬಿಟ್ಟದ್ದು. ಹೈಕಮಾಂಡ್ ನಿರ್ಧಾರ ಮಾಡಿದರೆ ಅದು ಆಗುತ್ತದೆ" ಎಂದು ಪರಮೇಶ್ವರ ಅವರು ಇಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಸಿಎಂ ಹುದ್ದೆಯ ಬಗ್ಗೆ ನೀವು ಆಶಾವಾದಿಯೇ ಎಂದು ಕೇಳಿದಾಗ, "ನಾನು ಇಲ್ಲಿಯವರೆಗೆ ಆಶಾವಾದಿಯಾಗಿ ಬದುಕಿದ್ದೇನೆ, ಆದ್ದರಿಂದ ಅದು ನನಗೆ ಹೊಸದೇನಲ್ಲ. ಜೀವನದಲ್ಲಿ ಏನಾದರೂ ಆಗಬೇಕೆಂಬ ಮಹತ್ವಾಕಾಂಕ್ಷೆ ನಿಮಗೆ ಇಲ್ಲವೇ? ಮನುಷ್ಯನಿಗೆ ಮಹತ್ವಾಕಾಂಕ್ಷೆ ಇರಬೇಕು, ಇಲ್ಲದಿದ್ದರೆ ಅವನು ಮನುಷ್ಯನಲ್ಲ." "ನನಗೂ ಎಲ್ಲರಂತೆ ಮಹತ್ವಾಕಾಂಕ್ಷೆ ಇದೆ. ನಾನು ರಾಜಕೀಯಕ್ಕೆ ಸೇರಿದಾಗ, ಸ್ವಾಭಾವಿಕವಾಗಿಯೇ ನನಗೆ ಶಾಸಕ ಮತ್ತು ಸಚಿವನಾಗುವ ಮಹತ್ವಾಕಾಂಕ್ಷೆ ಇತ್ತು. ಪ್ರತಿ ಹೆಜ್ಜೆಯಿಂದ ಇನ್ನೂ ಒಂದು ಹೆಜ್ಜೆ ಮುಂದೆ ಹೋಗುವ ಬಯಕೆ ಇರುತ್ತದೆ. ಆದರೆ ಅದೆಲ್ಲವೂ ನಮ್ಮ ಹೈಕಮಾಂಡ್‌ಗೆ ಬಿಟ್ಟದ್ದು" ಎಂದು ಅವರು ಹೇಳಿದರು.
ಪರಿಸ್ಥಿತಿ ನಿಮಗೆ ಅನುಕೂಲಕರವಾಗಿದೆಯೇ ಎಂದು ಕೇಳಿದಾಗ, "ನೀವು(ಮಾಧ್ಯಮ) ಪರಿಸ್ಥಿತಿ ಯಾರಿಗೆ ಅನುಕೂಲಕರವಾಗಿದೆ ಮತ್ತು ಯಾರಿಗೆ ಅಲ್ಲ ಎಂಬುದನ್ನು ಪ್ರತಿದಿನ ಗಮನಿಸುತ್ತಿದ್ದೀರಿ" ಎಂದು ಪರಮೇಶ್ವರ ಹೇಳಿದರು.