ಬೆಂಗಳೂರು: ವಿಬಿ-ಜಿ ರಾಮ್ ಜಿ ಕಾಯ್ದೆ ಗ್ರಾಮೀಣ ಜನರ ಉದ್ಯೋಗ ಹಕ್ಕುಗಳನ್ನು ಕಸಿದುಕೊಳ್ಳುವುದಿಲ್ಲ. ಬದಲಿಗೆ ಕಾಂಗ್ರೆಸ್ ಮಧ್ಯವರ್ತಿಗಳ ಕೈ ಸುಡುವಂತೆ ಮಾಡಲಿದೆ ಎಂದು ಕಾಯ್ದೆಯನ್ನು ಕೇಂದ್ರ ಸರ್ಕಾರ ಗುರುವಾರ ಸಮರ್ಥಿಸಿಕೊಂಡಿದೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ಯಾವುದೇ ಕೇಂದ್ರ ಅಥವಾ ಕೇಂದ್ರ ಪ್ರಾಯೋಜಿತ ಯೋಜನೆ ಜಾರಿಗೆ ಕಾನೂನಿನ ಅಗತ್ಯವಿಲ್ಲ. ಹೀಗಾಗಿ ಕಾಯ್ದೆ ಗ್ರಾಮೀಣ ಜನರ ಉದ್ಯೋಗ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ ಎಂಬ ಕಾಂಗ್ರೆಸ್ ಹೇಳಿಕೆ ಶುದ್ಧ ಸುಳ್ಳು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅವಧಿಯಲ್ಲಿ ಮನ್ರೇಗಾ ಯೋಜನೆಯಲ್ಲಿ 211 ಲಕ್ಷ ಕೋಟಿ ಮೊತ್ತದ ಭ್ರಷ್ಟಾಚಾರ ಆಗಿದೆ. ಇಂತಹ ಅಕ್ರಮ, ವ್ಯಾಪಕ ಭ್ರಷ್ಟಾಚಾರ ತಡೆಯಲೆಂದೇ ಕೇಂದ್ರ ಸರ್ಕಾರ 'ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿ ತಂದಿದೆ. ಹೀಗಾಗಿ ಕಾಂಗ್ರೆಸ್‌ಗೆ ಇದೇ ದೊಡ್ಡ ಸಮಸ್ಯೆಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ವಿಬಿಜೆ ರಾಮ್ ಜಿ ಕಾಯ್ದೆಯಲ್ಲಿ ಎಐ ತಂತ್ರಜ್ಞಾನ-ಜಿಪಿಎಸ್ ಟ್ರ್ಯಾಕಿಂಗ್ ಅಳವಡಿಸಿದ್ದು, ಕೆಲಸದ ಗುಣಮಟ್ಟವನ್ನೂ ಪರೀಕ್ಷಿಸಲಾಗುತ್ತಿದೆ. ಮನರೇಗಾದಲ್ಲಿ ಹಣ ಹೊಡೆಯುತ್ತಿದ್ದ ಕಾಂಗ್ರೆಸ್‌ನ ಮಧ್ಯವರ್ತಿಗಳಿಗೆ ಇದುವೇ ತಲೆನೋವಾಗಿ ಪರಿಣಮಿಸಿದೆ. ಹಾಗಾಗಿ ವಿರೋಧಿಸುತ್ತಿದ್ದಾರೆ' ಎಂದು ಚಾಟಿ ಬೀಸಿದರು.
'ಮನ್ರೇಗಾದಲ್ಲಿ ಕಾಂಗ್ರೆಸ್ ಅವಧಿಯಲ್ಲಿ 11 ಲಕ್ಷ ಕೋಟಿ ರು. ಮೊತ್ತದ ಭ್ರಷ್ಟಾಚಾರ ಆರೋಪವನ್ನು ಕಾಂಗ್ರೆಸ್ ವಿರೋಧಿಸಿಲ್ಲ. 2013ರಲ್ಲಿ ಸಿಎಜಿ ಪ್ರಕಾರ ದೇಶದಲ್ಲಿ 4.33 ಲಕ್ಷ ನಕಲಿ ಜಾಬ್ ಕಾರ್ಡ್‌ಗಳಿದ್ದವು. ಮೊದಲು ಜೆಸಿಬಿಯಿಂದ ಕೆಲಸ ಮಾಡಿಸುತ್ತಿದ್ದರು. ಈಗ ಈ ಎಲ್ಲ ಅಕ್ರಮ, ಲೋಪಗಳಿಗೂ ತೆರೆ ಎಳೆಯಲೆಂದೇ ರಾಮ್ ಜಿ ಕಾಯ್ದೆ ತಂದಿದ್ದೇವೆ' ಎಂದು ತಿಳಿಸಿದರು.
'ಕಾಯ್ದೆಯಲ್ಲಿ ಕೂಲಿಕಾರರಿಗೆ 60 ದಿನಗಳ ಬಿಡುವು ಕೊಟ್ಟಿದ್ದಕ್ಕೆ ಕಾಂಗ್ರೆಸ್ಸಿಗರು ಕೃಷಿ ಮೇಲೆ ದುಷ್ಪರಿಣಾಮ ಎನ್ನುತ್ತಿದ್ದಾರೆ. ಹಾಗಾದರೆ ಇವರ ಕಾಲದಲ್ಲೇನು 365 ದಿನ ಕೆಲಸ ಕೊಡುತ್ತಿದ್ದರಾ? ಕಾಂಗ್ರೆಸ್ ಕಾಲದಲ್ಲಿ ಮನ್ರೇಗಾದಲ್ಲಿ ಡಿಜಿಟಲ್ ಪೇಮೆಂಟ್ ಅನ್ನೇ ಮಾಡುತ್ತಿರಲಿಲ್ಲ' ಎಂದರು.
ಮನರೇಗಾದಲ್ಲಿ ರಾಜ್ಯಕ್ಕೆ ಕಳೆದ 10 ವರ್ಷಗಳಲ್ಲಿ 8.53 ಲಕ್ಷ ಕೋಟಿ ರು. ಕೊಟ್ಟಿದ್ದೇವೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲದಲ್ಲೇ ರಾಜ್ಯದಲ್ಲಿ ಮನರೇಗಾದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಆಗಿದೆ. 80 ವರ್ಷದ ವ್ಯಕ್ತಿಯನ್ನೂ ಕೂಲಿಯನ್ನಾಗಿ ಮಾಡಿ ಹಣ ಪಡೆಯಲಾಗಿದೆ. ಇದೀಗ ರಾಹುಲ್‌ಗಾಂಧಿಯಂತಹ ಅಪ್ರಬುದ್ಧ ರಾಜಕಾರಣಿಯನ್ನು ಖುಷಿಪಡಿಸಲು ಹೋರಾಟ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
'ಜಿ ರಾಮ್ ಜಿಯಲ್ಲಿ ಕೇಂದ್ರ ಸರ್ಕಾರ ತಾಂತ್ರಿಕತೆ ಅನುಷ್ಠಾನ ಮಾಡುತ್ತಿರುವುದರಿಂದ ಗರಿ ಗರಿ ಅಂಗಿ ಹಾಕಿಕೊಂಡು ಓಡಾಡುತ್ತಿದ್ದ ಕಾಂಗ್ರೆಸ್ ಮಧ್ಯವರ್ತಿಗಳಿಗೆ ಇನ್ನು ಮುಂದೆ ದುಡ್ಡು ಸಿಗುವುದಿಲ್ಲ. 'ಕಾಯ್ದೆಯಲ್ಲಿ ಇನ್ನು 14 ದಿನದಲ್ಲೇ ಕೂಲಿ ಹಣ ಪಾವತಿಸಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ. ಮೇಲುಸ್ತುವಾರಿಯನ್ನು ಪಂಚಾಯತ್ ಕೊಡಲಾಗಿದೆ. ಪ್ರತಿ ವಾರ ಕೆಲಸದ ವಿವರ ಬಹಿರಂಗಪಡಿಸಬೇಕು. ಯಾರೇ ತಪ್ಪು ಮಾಡಿದರೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇದರಲ್ಲಿ ಅಷ್ಟೊಂದು ವ್ಯವಸ್ಥಿತವಾಗಿ ಪಾರದರ್ಶಕತೆ ತರಲಾಗಿದೆ ಎಂದು ಸಮರ್ಥಿಸಿಕೊಂಡರು.
ಇದೇ ವೇಳೆ 'ಯುಪಿಎ ಅವಧಿಯಲ್ಲಿ ನರೇಗಾದಲ್ಲಿ ಜೆಸಿಬಿಯಿಂದ ಕೆಲಸ ಮಾಡಿಸಲಿಲ್ಲವೆಂದು ಕಾಂಗ್ರೆಸ್ಸಿನ ಒಬ್ಬರಾದರೂ ಹೇಳಲಿ ನೋಡೋಣ ಎಂದು ಸವಾಲು ಹಾಕಿದ ಸಚಿವರು, ಇವರ ಅವಧಿಯಲ್ಲಿ ನರೇಗಾ ಸಿಬ್ಬಂದಿಗೆ ವೇತನವೇ ಸಿಗುತ್ತಿರಲಿಲ್ಲ. ಇನ್ನು ಯುಪಿಎ ಕಾಲದಲ್ಲಿ ರಕ್ಷಣಾ ವ್ಯವಸ್ಥೆಗೂ ಏನೂ ಮಾಡಲಿಲ್ಲ. ಆಗಿನ ರಕ್ಷಣಾ ಸಚಿವ ಆ್ಯಂಟನಿ ಅವರು ಹೈಕಮಾಂಡ್ ಗೆ ಹೆದರಿ ಯಾವುದಕ್ಕೂ ಸಹಿ ಮಾಡುತ್ತಲೇ ಇರಲಿಲ್ಲ' ಎಂದು ಕುಟುಕಿದರು.