ಬೆಂಗಳೂರು: ನಿಮ್ಮ ಹುಡುಗ ನಿರ್ಮಿಸಿ, ನಟಿಸಿದ 'ಹಾಸನ್ ಬ್ಲೂ' ಚಿತ್ರ ವರ್ಲ್ಡ್ ಫೇಮಸ್! ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾಲಿವುಡ್ ವರೆಗೂ ಹಾರಾಡಿಸಿದೆ. ಸುಮ್ಮನೇ ಆಕಾಶಕ್ಕೆ ಉಗುಳಿ ಮುಖಕ್ಕೆ ಸಿಂಪಡಿಸಿಕೊಳ್ಳಬೇಡಿ ಎಂದು ಜೆಡಿಎಸ್'ಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಈ ಹಿಂದೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕುರಿತು ಡಿಕೆ.ಶಿವಕುಮಾರ್ ಅವರು ವ್ಯಂಗ್ಯವಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕುಮಾರಸ್ವಾಮಿಯವರು ನಮ್ಮ ವಿಲೀನದ ಚಿಂತೆ ಪಕ್ಕಕ್ಕೆ ಇಡಿ. ನನ್ನ ಮತ್ತು ನಿಮ್ಮ ಆಡಳಿತಾನುಭವದ ಬಗ್ಗೆ ಮಾತನಾಡೋಣ. ನಾನು ಎರಡು ಸಣ್ಣ ಅವಧಿಗೆ ಮುಖ್ಯಮಂತ್ರಿ, ಅಲ್ಪ ಅವಧಿಗೆ ಪ್ರತಿಪಕ್ಷ ನಾಯಕ. ಈಗ ಕೇಂದ್ರ ಮಂತ್ರಿ. ನೀವೂ ಸುದೀರ್ಘ ಅವಧಿಗೆ ಶಾಸಕ, ಅನೇಕ ಬಾರಿ ಮಂತ್ರಿ. ಈಗ ಉಪ ಮುಖ್ಯಮಂತ್ರಿ. ನಮ್ಮಿಬ್ಬರ ಆಡಳಿತಾನುಭವದ ಬಗ್ಗೆ ನೀವು ಹೇಳುವುದಲ್ಲ, ಜನರನ್ನೇ ಕೇಳಬೇಕು.
ಕೊಳ್ಳೆ, ಸುಲಿಗೆ, ಬೇಲಿ, ಚದರಡಿ, ಕಮಿಷನ್, ಫಿಕ್ಸಿಂಗ್, ಒದ್ದು ಕಿತ್ತುಕೊಳ್ಳುವುದು ನನ್ನ ಎಕ್ಸ್ ಪೀರಿಯನ್ಸ್ ಅಲ್ಲಾ ಡಿಕೆಶಿರವರೇ..ಏನೋ.. ಜನರ ಆಶೀರ್ವಾದ ಮತ್ತು ದೇವರ ದಯೆಯಿಂದ ಸಿಕ್ಕಿದ ಅವಕಾಶದಲ್ಲಿ ಜನರಿಗೆ ಕೈಲಾದ ಸಹಾಯ ಮಾಡುವ ಹುಲು ರಾಜಕಾರಣಿ ನಾನಷ್ಟೇ. ನಿಮಗೆ ಸಿದ್ಧಿಸಿರುವ ಅಂತಹ ಭಾರೀ ಅನುಭವ ನನಗಿಲ್ಲ.. ವಿನಮ್ರವಾಗಿ ಒಪ್ಪಿಕೊಳ್ಳುವೆ.
ನಿಮಗೆ ಭೂ ಕಬ್ಜ, ಒತ್ತುವರಿ ಕರತಲಾಮಲಕ. ಅದೇ ರೀತಿ ಮತ್ತೊಬ್ಬ ಸಚಿವರ ಖಾತೆಯನ್ನು ಒತ್ತುವರಿ ಮಾಡುವುದರಲ್ಲಿಯೂ ನೀವು ನಿಸ್ಸೀಮರು. ಅದನ್ನಷ್ಟೇ ನಾನು ಹೇಳಿದ್ದು.. ತಾವು ಡಿಸಿಎಂ ಆಗಿರಬಹುದು. ಆದರೆ ಮಂತ್ರಿ ಪದವಿಗೆ ಇರುವಷ್ಟೇ ಶಿಷ್ಟಾಚಾರ, ಅಧಿಕಾರ ವ್ಯಾಪ್ತಿ ಆ ಹುದ್ದೆಗಿದೆ ಎನ್ನುವುದು ಗೊತ್ತಿಲ್ಲವೇ? ಅದಕ್ಕೇನು ಎಕ್ಸ್'ಟ್ರಾ ಕೊಂಬು, ಕೋಡು ಇರಲ್ಲ. ಇರಲಿ ಎಂದು ತಾವು ಸಿಕ್ಕಿಸಿಕೊಳ್ಳೋದಕ್ಕೂ ಬರಲ್ಲ. ನಿಮ್ಮ ಎಕ್ಸ್'ಪೀರಿಯನ್ಸ್ ಗೆ ಈ ಸಣ್ಣ ವಿಷಯವೂ ತಟ್ಟಲಿಲ್ಲವೇ ಮಿಸ್ಟರ್ ಡಿಕೆಶಿ ಅವರೇ.
ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆಯನ್ನು ಗೃಹ ಸಚಿವರೇ ನಡೆಸಬೇಕಿತ್ತು. ಅದು ಅವರ ಅಧಿಕಾರ ವ್ಯಾಪ್ತಿ. ಅವರು ಬಿಟ್ಟರೆ ಮುಖ್ಯಮಂತ್ರಿಗಳು ಅಂಥ ಸಭೆ ನಡೆಸಬಹುದು. ನೀವು ಸಭೆ ನಡೆಸಿದ್ದು ಶಿಷ್ಟಾಚಾರ, ಅಧಿಕಾರದ ಸ್ಪಷ್ಟ ಉಲ್ಲಂಘನೆ. ಇದನ್ನು ಆಡಳಿತಾನುಭವ, ಸೀನಿಯಾರಿಟಿ ಎಂದು ಬೆನ್ನು ತಟ್ಟಿಕೊಳ್ಳುತ್ತೀರಾ?
ಹೋಗಲಿ, ನೀವು ಮೀಟಿಂಗ್ ಮಾಡಿ ಎಂದು ಗೃಹ ಸಚಿವರು, ಸಿಎಂ ಅವರು ಹೇಳಿದ್ದರಾ? ಇಲ್ಲವಲ್ಲ. ಅದಕ್ಕೇ ನಾನು ಹೇಳಿದ್ದು; ಅವರೇನು ಹೆಬ್ಬೆಟ್ಟು ಗೃಹ ಮಂತ್ರಿಗಳಾ? ಅಥವಾ ರಬ್ಬರ್ ಸ್ಟ್ಯಾಂಪ್ ಗೃಹ ಮಂತ್ರಿಗಳಾ? ಎಂದು. ಒಬ್ಬ ಹಿರಿಯ ಮಂತ್ರಿಯ ಖಾತೆಯನ್ನು ನೀವು ಹೀಗೆ ಅಕ್ರಮವಾಗಿ ಒತ್ತುವರಿ ಮಾಡುವುದಕ್ಕೆ ಸಂವಿಧಾನದಲ್ಲಿ ವಿಶೇಷ ತಿದ್ದುಪಡಿ ಏನನ್ನಾದರೂ ಮಾಡಿಸಿದ್ದೀರ? ನಿಮ್ಮದು ಭಾರೀ ಅನುಭವ, ಸಿಕ್ಕಾಪಟ್ಟೆ ಸೀನಿಯಾರಿಟಿ!! ಇಂಥ ಸಣ್ಣ ವಿಷಯ ನಿಮಗೇಕೆ ತಿಳಿಯಲಿಲ್ಲ ಮಿಸ್ಟರ್ ಡಿಕೆಶಿ ಅವರೇ? ಎಂದು ವ್ಯಂಗ್ಯವಾಡಿದ್ದರು.
ಇದಕ್ಕೆ ಟ್ವೀಟ್ ಮೂಲಕವೇ ತಿರುಗೇಟು ನೀಡಿದ್ದ ಕಾಂಗ್ರೆಸ್, ಮೀಡಿಯಾ ಹುಲಿ,' ಕುಮಾರಸ್ವಾಮಿ ಅವರ ಅನುಭವದ ಕಾಲುವೆಯಲ್ಲಿ ಹರಿಯುತ್ತಿರುವುದು ಬರೀ ಸುಳ್ಳು, ಹಿಟ್ ಅಂಡ್ ರನ್, ಅವಕಾಶವಾದ, ಆತ್ಮರತಿ ಎಂಬ ಕೊಚ್ಚೆ. ಬಳ್ಳಾರಿ ಗಲಭೆಯಲ್ಲಿ ಮೃತಪಟ್ಟ ರಾಜಶೇಖರ ರೆಡ್ಡಿ ಶವದ ಡಬಲ್ ಪೋಸ್ಟ್ ಮಾರ್ಟಮ್ ಮಾಡಿದ್ದಾರೆ ಅಂತ ಪುಂಗಿದ್ದು, ಅರ್ಜಿ ಹಾಕದಿದ್ದರೂ ಮಂಡ್ಯದಲ್ಲಿ ಕೈಗಾರಿಕೆಗೆ ಜಮೀನು ಕೊಡುತ್ತಿಲ್ಲ ಎಂದು ಆರೋಪ ಮಾಡಿದ್ದು ಕುಮಾರಸ್ವಾಮಿ ಸುಳ್ಳುಗಳಿಗೆ ಸಣ್ಣ ಸ್ಯಾಂಪಲ್.
'ಪೇಪರ್ ಟೈಗರ್' ಕುಮಾರಣ್ಣ ಮೀಡಿಯಾ ಮುಂದೆ ರಾಜಕಾರಣ ಮಾಡೋ ಬದಲು ನಿನ್ನ ಪಟಾಲಾಂ ಕರ್ಕೋಂಡು ಬಳ್ಳಾರಿಗೆ ಹೋಗಿ ಎರಡು ಬಾರಿ ಪೋಸ್ಟ್ ಮಾರ್ಟಮ್ ಆಗಿದೆಯೋ ಇಲ್ವೋ ಅಂತ ಸ್ವಲ್ಪ ತಿಳ್ಕೋಳಿ. ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿಯ ಕೇತಗಾನಹಳ್ಳಿಯಲ್ಲಿ ದಲಿತರ ಜಮೀನಿಗೆ ಬೇಲಿ ಹಾಕಿರೋರು ಯಾರು ಕುಮಾರಣ್ಣ? ಕೋತಿ ತಿಂದು ಮೇಕೆ ಬಾಯಿಗೆ ಒರೆಸಿದಂತೆ ಆಡ್ಬೇಡಿ.
ತಟ್ಟೆ, ಲೋಟ, ಚೊಂಬು, ಬಿಂದಿಗೆ ಯಾವುದಕ್ಕೂ ಸುರಿದರೂ ಅಡ್ಜಸ್ಟ್ ಆಗೋ ನೀರಿನಂತೆ, ಅಧಿಕಾರಕ್ಕಾಗಿ ಯಾವ ಪಕ್ಷದ ಜತೆಗೆ ಬೇಕಾದರೂ ಕೈ ಜೋಡಿಸೋ ಸಮಯಸಾಧಕ ಕುಮಾರಣ್ಣ ಬೇರೆಯವರಿಗೆ ಪಾಠ ಮಾಡೋ ಮೊದಲು ನಿಮ್ಮ ಮುಖಕ್ಕೆ ಮೆತ್ತಿಕೊಂಡಿರೋ ಕೆಸರು ಒರೆಸ್ಕೊಂಡು,ಗಟ್ಟಿಯಾಗಿ ಕಮಲ ಹಿಡ್ಕೊಳಿ. ಭೂತದ ಬಾಯಲ್ಲಿ ಭಗವದ್ಗೀತೆ ಬೇಡ ಕುಮಾರಣ್ಣ. ನಿನ್ನ ಅನುಭವ ಎಷ್ಟು ಪ್ರಖರವಾಗಿ "ಪ್ರಜ್ವಲಿ"ಸುತ್ತಿದೆ ಎಂದು ಇಡೀ ಜಗತ್ತಿಗೇ ಗೊತ್ತು ಎಂದು ತಿರುಗೇಟು ನೀಡಿತ್ತು.
ಇದಕ್ಕೆ ಜೆಡಿಎಸ್ ಟ್ವೀಟ್ ಮಾಡಿ, ಸಿಡಿ ಫ್ಯಾಕ್ಟರಿ ಮಾಲೀಕನ “ಮನೆಹಾಳು ಆತ್ಮರತಿ” ಬಗ್ಗೆ ಕಾಂಗ್ರೆಸ್ ಮರೆತಿದೆ. ಟೆಂಟ್'ನಲ್ಲಿ ನೀಲಿ ಸಿನಿಮಾ ತೋರಿಸಿದ “ದಂಧೆಕೋರನ ಆತ್ಮರತಿ” ಎಂತಹದ್ದು? “ಕಲೆಕ್ಷನ್ ಗಿರಾಕಿಯ ಆತ್ಮರತಿ” ಇರುವುದು ಮಸಾಜ್ ಪಾರ್ಲರ್'ಗಳಲ್ಲಿ ಅಲ್ಲವೇ? “ಹನಿಟ್ರಾಪ್ ಅಧ್ಯಕ್ಷನ ಆತ್ಮರತಿ”ಗೆ ಸಂಪುಟದ ಮಂತ್ರಿಗಳು, ಶಾಸಕರೇ ಬಲಿಪಶುಗಳಲ್ಲವೇ?
ದೀನ ದಲಿತರು, ಬಡವರು, ಮಹಿಳೆಯರ ಜಮೀನು ಕಬಳಿಸುವ ರಿಯಲ್ ಎಸ್ಟೇಟ್ ಏಜೆಂಟ್’ನ ಆತ್ಮರತಿ ಬಗ್ಗೆ ಬೆಂಗಳೂರಿಗೇ ಚಿರಪರಿಚಿತ. "ಸ್ವಾರ್ಥ ಸಾಧನೆಗೆ ಬ್ಲ್ಯಾಕ್ ಮೇಲ್" ಮಾಡುವ ಆತ್ಮರತಿಯ ರಾಜಕಾರಣಿಯ ಅನಾಚಾರಗಳ ದೊಡ್ಡ ಪಟ್ಟಿಯೇ ಇದೆ. ರೌಡಿ ರಾಜಕಾರಣಿಯ ಅನುಭವದ ಕೊಚ್ಚೆಗೆ ಯಾರು ತಾನೆ ಸಮ. ನಿಮಗೆ ಯಾರೂ ಪ್ರತಿಸ್ಪರ್ಧಿಗಳೇ ಇಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ರೋಲ್ ಕಾಲ್ ಅಧ್ಯಕ್ಷ? ಎಂದು ವ್ಯಂಗ್ಯವಾಡಿದೆ.
ಇದಕ್ಕೆ ಕಾಂಗ್ರೆಸ್ ಮತ್ತೆ ತಿರುಗೇಟು ನೀಡಿದ್ದು, ನಿಮ್ಮ ಹುಡುಗ ನಿರ್ಮಿಸಿ, ನಟಿಸಿದ 'ಹಾಸನ್ ಬ್ಲೂ' ಚಿತ್ರ ವರ್ಲ್ಡ್ ಫೇಮಸ್! ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾಲಿವುಡ್ ವರೆಗೂ ಹಾರಾಡಿಸಿದೆ. ಸುಮ್ಮನೇ ಆಕಾಶಕ್ಕೆ ಉಗುಳಿ ಮುಖಕ್ಕೆ ಸಿಂಪಡಿಸಿಕೊಳ್ಳಬೇಡಿ ಎಂದು ಹೇಳಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಅಟಕಟಾ.. ನಿಮ್ಮದು ಸೆಕ್ಯೂರ್ಡ್ "ಬ್ಲೂ ಬಾಯ್ಸ್" ಪಾರ್ಟಿ ಅನ್ನೋದು ಮರೆತು ಹೋಯ್ತೆ..?! ಅದೂ ಇಷ್ಟು ಬೇಗ..? ಶಾಂತಂ ಪಾಪಂ..! ನಿಮ್ಮಲ್ಲಿ ಬ್ಲೂ ಫಿಲಂ ನಿರ್ಮಾಪಕರು, ನಿರ್ದೇಶಕರು, ಎಲ್ಲಕ್ಕಿಂತ ಮಿಗಿಲಾಗಿ ಪಾತ್ರಧಾರಿಗಳು ತುಂಬಿ ತುಳುಕುತಿದ್ದಾರೆ.
ನಿಮ್ಮ ಹುಡುಗ ನಿರ್ಮಿಸಿ, ನಟಿಸಿದ 'ಹಾಸನ್ ಬ್ಲೂ' ಚಿತ್ರ ವರ್ಲ್ಡ್ ಫೇಮಸ್. ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾಲಿವುಡ್ ವರೆಗೂ ಹಾರಾಡಿಸಿದೆ. ಅವರು ಈಗಲೂ ಜೈಲಲ್ಲಿ "ನೀಲ ಮೇಘ ಶ್ಯಾಮ.." ಹಾಡುತ್ತಿದ್ದಾರೆ. ನಿಮ್ಮ ಇನ್ನೊಬ್ಬ ಲಿಂಬಿಯ ಬನದ ನಾಯಕರು "ಲಿಂಬೆ ಹಣ್ಣಿನಂತ..." ಹಾಡು ಹೇಳಲು ಹೋಗಿ ಜೈಲಲ್ಲಿ ಮುದ್ದೆ ಮುರಿದು ಬಂದಿದ್ದಾರೆ. ಇನ್ನೊಬ್ಬ "ರಾಧಾ ಮಾಧವ ಮನೋ ವಿಲಾಸ.." ನಾಯಕರು ಜಸ್ಟ್ ಎಸ್ಕೇಪ್ ಆಗಿದ್ದಾರೆ.
ನಿಮ್ಮ ನಾಯಕರೇ ನಿರ್ಮಿಸಿ, ನಿರ್ದೇಶಿಸಿ, ನಟಿಸಿ ಸಿನಿಮಾ ತೆಗೆದು ಜಗತ್ತಿಗೆ ತೋರಿಸಿರುವಾಗ ಬೇರೆಯವರಿಗೆ ಟೆಂಟಲ್ಲಿ ತೋರಿಸುವ ಅವಕಾಶವೆಲ್ಲಿದೇ? ನಿಜಕ್ಕೂ ನಿಮ್ಮ ಸಿನಿಮಾ ಚನ್ನಾಗಿದೆ. ಅದರ ಮೇಲೆ ಮತ್ತೊಂದು ಕತೆ ಕಟ್ಟಲು ಹೋಗಬೇಡಿ. ಸುಮ್ಮನೇ ಆಕಾಶಕ್ಕೆ ಉಗುಳಿ ಮುಖಕ್ಕೆ ಸಿಂಪಡಿಸಿಕೊಳ್ಳಬೇಡಿ ಎಂದು ತಿರುಗೇಟು ನೀಡಿದೆ.