ಕಲಬುರಗಿ: AICC ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸೋಮವಾರ ಒಂದೇ ವೇದಿಕೆಯಲ್ಲಿ ಆಡಿರುವ ಮಾತುಗಳು ಆಡಳಿತಾರೂಢ ಕಾಂಗ್ರೆಸ್ ಹಾಗೂ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿರುವಂತೆಯೇ ಜೆಡಿಎಸ್ ಟಾಂಗ್ ನೀಡಿದೆ.
ಹೌದು.ಇಂದು ಕಲಬುರಗಿ ಜಿಲ್ಲೆ ಯಡ್ರಾಮಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಕಲ್ಯಾಣ ಕರ್ನಾಟದ ಭಾಗಕ್ಕೆ ಹರಿದು ಬರುತ್ತಿರುವ ಅನುದಾನವನ್ನು ಉಲ್ಲೇಖಿಸಿ ನಾನು ಈ ಭಾಗದಲ್ಲಿ ಹುಟ್ಟಬೇಕಿತ್ತು ಎಂದು ಎಂಬ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ತೀಕ್ಷ್ಣವಾಗಿ ಟಾಂಗ್ ಕೊಟ್ಟಿದ್ದಾರೆ.
ಈ ಭಾಗದಲ್ಲಿ ಹುಟ್ಟಬೇಕಿತ್ತು ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಆದರೆ ನೀವು ಇಲ್ಲಿ ಹುಟ್ಟುವುದು ಬೇಡ. ನಾವು ಅಲ್ಲಿ ಹುಟ್ಟುವುದು ಬೇಡ. ನಿಮ್ಮ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ ಎಂದು ತಿರುಗೇಟು ನೀಡಿದರು.
ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜೆಡಿಎಸ್ ಖರ್ಗೆ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಟಾಂಗ್ ನೀಡಿದೆ. ಆರು ದಶಕಗಳಿಂದ ಅಧಿಕಾರ ಅನುಭವಿಸಿರುವ AICC ಅಧ್ಯಕ್ಷ ಖರ್ಗೆಯವರೇ ನಿಮ್ಮದೇ ಕಾಂಗ್ರೆಸ್ ಸರ್ಕಾರದಲ್ಲಿ ಭಿಕ್ಷೆ ಬೇಡುವ ಸ್ಥಿತಿ ಬರಬಾರದಿತ್ತು ಎಂದು ಲೇವಡಿ ಮಾಡಿದೆ.
ಕಳೆದ 6 ದಶಕಗಳಿಂದಲೂ ಅಧಿಕಾರ ಅನುಭವಿಸುತ್ತಿರುವ ಖರ್ಗೆ ಮತ್ತು ಕುಟುಂಬ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮರೆತು, ತಮ್ಮ ಕುಟುಂಬದ ಕಲ್ಯಾಣ ಮಾಡಿಕೊಂಡಿರುವುದೇ ಹೆಚ್ಚು ಎಂದು ಪೋಸ್ಟ್ ಮಾಡಿದೆ.
ರಾಜಕೀಯ ಕೊನೆಘಟ್ಟದಲ್ಲಿರುವ AICC ಅಧ್ಯಕ್ಷ ಖರ್ಗೆಯವರೇ, ನಿಮ್ಮದೇ ಸರ್ಕಾರದಲ್ಲಿ ಭಿಕ್ಷೆ ಬೇಡುವ ದಯನೀಯ ಸ್ಥಿತಿ ಬರಬಾರದಿತ್ತು. ಡಿಕೆ ಶಿವಕುಮಾರ್ ಕಲಬುರಗಿಯಲ್ಲಿ ಹುಟ್ಟಬೇಕಿತ್ತು ಎಂದಿದ್ದಕ್ಕೆ ನೀವು ಬೇಡ ಎಂದಿದ್ದರ ಮರ್ಮ ಏನು?ಲೂಟಿಕೋರನ ಬಗ್ಗೆ ಭಯವೇ? ಎಂದು ವ್ಯಂಗವಾಡಿದೆ.