ದೆಹಲಿಯಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ (ಸಂಗ್ರಹ ಚಿತ್ರ) 
ರಾಜಕೀಯ

ಸಚಿವ ಸಂಪುಟ ಕಸರತ್ತು: ರಾಹುಲ್ ಭೇಟಿಗೆ ಡಿಕೆಶಿ-ಸಿದ್ದು ದೆಹಲಿ ಪ್ರಯಾಣ, ಸಚಿವಾಕಾಂಕ್ಷಿಗಳಿಗಿದು ನಿರ್ಣಾಯಕ ವಾರ..!

ಆಷಾಢ ಮಾಸ ಆರಂಭಕ್ಕೂ ಮುನ್ನವೇ ಸಚಿವ ಸಂಪುಟ ವಿಸ್ತರಣೆ ನಡೆಯಬೇಕಿತ್ತು. ಆದರೆ, ರಾಹುಲ್ ಗಾಂಧಿ ಅವರ ಭೇಟಿಗೆ ಸಮಯ ಸಿಗದ ಕಾರಣ ಪ್ರಕ್ರಿಯೆ ವಿಳಂಬವಾಗಿತ್ತು.

ಬೆಂಗಳೂರು: ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಅಂತಿಮ ರೂಪ ನೀಡಲು ಕಾಂಗ್ರೆಸ್ ಹೈಕಮಾಂಡ್ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಜುಲೈ 18ರಂದು ನವದೆಹಲಿಗೆ ತೆರಳಿ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಈ ಸಭೆಯಲ್ಲಿ ಹೊಸ ಸಚಿವರ ಪಟ್ಟಿಗೆ ಅಂತಿಮ ಒಪ್ಪಿಗೆ ದೊರೆಯುವ ನಿರೀಕ್ಷೆ ಇದೆ.

ಕಾಂಗ್ರೆಸ್ ಹೈಕಮಾಂಡ್ ಹೊಸ ಸಚಿವರ ಪಟ್ಟಿಗೆ ಅಂತಿಮ ಮುದ್ರೆ ಒತ್ತಿದ ಬಳಿಕ ಜುಲೈ 21 ಅಥವಾ 22ರಂದು ಪ್ರಮಾಣವಚನ ಸಮಾರಂಭ ನಡೆಯುವ ಸಾಧ್ಯತೆ ಇದ್ದು, ಹಿಂದೂ ಪಂಚಾಂಗದ ಶುಭ ಮುಹೂರ್ತವನ್ನು ಗಮನದಲ್ಲಿಟ್ಟುಕೊಂಡು ದಿನಾಂಕ ಅಂತಿಮಗೊಳ್ಳಲಿದೆ ಎಂದು ತಿಳಿದುಬಂದಿದೆ.

ಆಷಾಢ ಮಾಸ ಆರಂಭಕ್ಕೂ ಮುನ್ನವೇ ಸಚಿವ ಸಂಪುಟ ವಿಸ್ತರಣೆ ನಡೆಯಬೇಕಿತ್ತು. ಆದರೆ, ರಾಹುಲ್ ಗಾಂಧಿ ಅವರ ಭೇಟಿಗೆ ಸಮಯ ಸಿಗದ ಕಾರಣ ಪ್ರಕ್ರಿಯೆ ವಿಳಂಬವಾಗಿತ್ತು.

ಡಿ.ಕೆ. ಶಿವಕುಮಾರ್ ಮಂಗಳವಾರವೇ ದೆಹಲಿಗೆ ತೆರಳಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದರೂ, ಅಂತಿಮವಾಗಿ ಪ್ರಮುಖ ನಾಯಕರು ಒಟ್ಟಾಗಿ ಶನಿವಾರ ದೆಹಲಿಗೆ ತೆರಳುವ ಸಾಧ್ಯತೆ ಇದೆ.

ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ದೆಹಲಿಯ ಕರ್ನಾಟಕ ಭವನದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸಚಿವ ಸ್ಥಾನಾಕಾಂಕ್ಷಿ ಹಲವು ಶಾಸಕರು ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲೇ ತಂಗಿದ್ದು, ಕಾಂಗ್ರೆಸ್ ಪ್ರಧಾನ ಕಚೇರಿ ಹಾಗೂ ಇಂದಿರಾ ಭವನಕ್ಕೆ ಭೇಟಿ ನೀಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಿರಿಯ ನಾಯಕರನ್ನು ಭೇಟಿಯಾಗಲು ಪ್ರಯತ್ನಿಸುತ್ತಿದ್ದಾರೆ.

ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಕೂಡ ದೆಹಲಿಯ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಮಂಗಳವಾರ ಸಂಜೆ ಅವರು ತುಮಕೂರಿನಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪಕ್ಷದ ಮೂಲಗಳ ಪ್ರಕಾರ, ಈ ಬಾರಿ ಸಚಿವ ಸಂಪುಟಕ್ಕೆ ಸುಮಾರು 10 ಹೊಸ ಮುಖಗಳು ಸೇರ್ಪಡೆಯಾಗುವ ಸಾಧ್ಯತೆ ಇದ್ದು, ಈಗಿರುವ ಸಚಿವರಲ್ಲಿ ಸುಮಾರು 10 ಮಂದಿಗೆ ಮುಂದುವರಿಯುವ ಅವಕಾಶ ಸಿಗಬಹುದು ಎಂದು ತಿಳಿದುಬದಿದೆ.

2028ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇನ್ನೂ ನಾಲ್ಕೈದು ಲಿಂಗಾಯತ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂಬ ನಿಲುವು ಹೊಂದಿದ್ದಾರೆ ಎನ್ನಲಾಗಿದೆ.

ರಾಜಕೀಯವಾಗಿ ಪ್ರಭಾವಿ ಲಿಂಗಾಯತ ಸಮುದಾಯದ ಬೆಂಬಲವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.

ಇತ್ತೀಚೆಗೆ ರಾಜ್ಯ ಸರ್ಕಾರ ನಾಲ್ವರು ಲಿಂಗಾಯತ ಸಮುದಾಯದ ಶಿಕ್ಷಣ ತಜ್ಞರನ್ನು ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳಾಗಿ ನೇಮಕ ಮಾಡಿದ್ದೂ ಇದೇ ರಾಜಕೀಯ ತಂತ್ರದ ಭಾಗವೆಂದು ವಿಶ್ಲೇಷಿಸಲಾಗಿತ್ತು.

ವೀರಶೈವ-ಲಿಂಗಾಯತ ಪರಂಪರೆಯ ಅಜ್ಜಯ್ಯ ಸ್ವಾಮೀಜಿಗಳ ಅನುಯಾಯಿಯಾಗಿರುವ ಡಿ.ಕೆ. ಶಿವಕುಮಾರ್, ಲಿಂಗಾಯತ ಮತದಾರರ ಬೆಂಬಲವನ್ನು ಇನ್ನಷ್ಟು ವಿಸ್ತರಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

2028ರ ವಿಧಾನಸಭೆ ಚುನಾವಣೆಗೆ ಮುನ್ನ ನಡೆಯಲಿರುವ ಪ್ರಮುಖ ಸಚಿವ ಸಂಪುಟ ವಿಸ್ತರಣೆ ಇದಾಗುವ ಸಾಧ್ಯತೆ ಇದೆ. ಸೀಮಿತ ಸಚಿವ ಸ್ಥಾನಗಳು, ಪ್ರಾದೇಶಿಕ ಸಮತೋಲನ, ಜಾತಿ ಸಮೀಕರಣ ಹಾಗೂ ಪಕ್ಷದ ವಿವಿಧ ಬಣಗಳ ಬೇಡಿಕೆಗಳನ್ನು ಸಮತೋಲನಗೊಳಿಸಿ ಅಂತಿಮ ಸಚಿವರ ಪಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಮುದ್ರೆ ಒತ್ತುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಹುಲ್ ಗಾಂಧಿ 'ಭಾರತ್ ಜೋಡೋ ಯಾತ್ರೆ' ಸ್ಮರಣಾರ್ಥ ಹೊಸ ಯೋಜನೆ: 'ಭಾರತ್ ಜೋಡೋ ಯುವ ಸಂಘ' ಸ್ಥಾಪನೆಗೆ ಸರ್ಕಾರ ಗ್ರೀನ್ ಸಿಗ್ನಲ್; ಪ್ರತಿ ಸಂಘಕ್ಕೆ 10 ಲಕ್ಷ ರೂ. ಅನುದಾನ..!

ಏಳು ತಲೆಮಾರುಗಳ ಪಿತೃಗಳಿಗೆ ಮೋಕ್ಷ: ಗಯಾ ಶ್ರಾದ್ಧ ಮಹಿಮೆ ಏನು; ಗಯಾದಲ್ಲೇ ಏಕೆ ಪಿಂಡ ಪ್ರಧಾನ ಮಾಡಬೇಕು?

ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ದುರಂತ: ಮೂವರು IPS ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಕ್ಲೀನ್ ಚಿಟ್..!

ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ತಂಡ ಕಳುಹಿಸಿ; ಪ್ರಧಾನಿ ಮೋದಿಗೆ CM ಡಿ.ಕೆ. ಶಿವಕುಮಾರ್ ಪತ್ರ

ಬೆಂಗಳೂರು ಆಸ್ತಿ ಮಾಲೀಕರಿಗೆ GOOD NEWS; ಮನೆ ಬಾಗಿಲಿಗೇ ಖಾತೆ ತಲುಪಿಸಲು ಸರ್ಕಾರ ಸಿದ್ಧತೆ..!