ಬೆಂಗಳೂರು: ರಾಹುಲ್ ಗಾಂಧಿ ಕಾರಿನ ಹಿಂದೆ ಸಿಎಂ ಡಿಕೆಶಿ ಬಾಡಿಗಾರ್ಡ್ ರೀತಿ ಓಡಾಡುತ್ತಿದ್ದಾರೆ. ಕೆಪಿಎಸ್ಸಿ ನೇಮಕಾತಿಯಲ್ಲಿ ದೊಡ್ಡ ಮಟ್ಟ ಭ್ರಷ್ಟಾಚಾರ ನಡೆದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದು ಕೆಪಿಎಸ್ ಸಿ ಅಕ್ರಮದ ಬಗ್ಗೆ ಹೋರಾಡಲಿ ಎಂದು ಮಾಜಿ ಸಚಿವ ಶ್ರೀರಾಮುಲು ಟಾಂಗ್ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀರಾಮುಲು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕ್ಕೆ ಯಾವಾಗ ಬರುತ್ತಾರೆ. ನೀಟ್ ಅಕ್ರಮದ ಬಗ್ಗೆ ಹೋರಾಟ ಮಾಡಿದ್ದೇವೆ ಎಂದು ಹೇಳಿದ್ದಾರೆ ಅದೇ ರೀತಿ ಕರ್ನಾಟಕಕ್ಕೆ ಬಂದು ಕೆಪಿಎಸ್ ಸಿ ಅಕ್ರಮದ ಬಗ್ಗೆ ಹೋರಾಡಲಿ. ಕೆಪಿಎಸ್ ಸಿ ಅಕ್ರಮದ ಬಗ್ಗೆ ಯಾರು ರಾಜೀನಾಮೆ ನೀಡುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಒಂದಷ್ಟು ಸಚಿವರು ಮಾತ್ರ ಖುಷಿಯಾಗಿದ್ದಾರೆ. ಹೈಕಮಾಂಡ್ ಗೆ ಕಪ್ಪ ಕಾಣಿಕೆ ನೀಡುತ್ತಿರುವುದೇ ಈ ಖುಷಿಗೆ ಕಾರಣ. ಹೈಕಮಾಂಡ್ ಮೆಚ್ಚಿಸಲು ಹಣ ತೆಗೆದುಕೊಂಡು ಹೋಗಿ ಕೊಡುತ್ತಿದ್ದಾರೆ. ಸಿದ್ದರಾಮಯ್ಯಗಿಂತ ಡಿಕೆ ಶಿವಕುಮಾರ್ ಉತ್ತಮವಾಗಿ ಕಪ್ಪ ಕಾಣಿಕೆ ನೀಡುತ್ತಿದ್ದಾರೆ ಎಂದರು.
ರಾಜ್ಯದ ಹಲವು ಭಾಗಗಳಲ್ಲಿ ಜಮೀನುಗಳು ಒಣಗಿದ್ದು, ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಬರಬೇಕಾದರೆ, ಬೆಳೆ ನಷ್ಟದ ಡ್ರೋನ್ ಸಮೀಕ್ಷೆಯಲ್ಲಿ ತೊಡಗಿರುವುದು ಸಮಂಜಸವಲ್ಲ ಎಂದು ಟೀಕಿಸಿದರು. "ಅಂಗೈ ಹುಣ್ಣಿಗೆ ಕನ್ನಡಿಯೇಕೆ ಎಂಬಂತಾಗಿದೆ. ಮೊದಲು ರೈತರಿಗೆ ಪರಿಹಾರ ಘೋಷಿಸಬೇಕು. ಜಿಲ್ಲಾಧಿಕಾರಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಬರಬಾರದು" ಎಂದು ಹೇಳಿದರು.
ನೀರಾವರಿ ಸಚಿವರೊಂದಿಗೆ ಮಾತನಾಡಿ ಕಾಲುವೆಗಳಿಗೆ ನೀರು ಹರಿಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದ ಅವರು, ರೈತರ ಹಿತದೃಷ್ಟಿಯಿಂದ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿದ ಶ್ರೀರಾಮುಲು, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಯುವಕರ ಭವಿಷ್ಯ ಮತ್ತು ಪರೀಕ್ಷಾ ವ್ಯವಸ್ಥೆಯ ಪಾರದರ್ಶಕತೆಗೆ ಆದ್ಯತೆ ನೀಡುತ್ತಿರುವ ನಾಯಕ ಎಂದು ಪ್ರಶಂಸಿಸಿದರು. ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ನಂದನ್ ನೀಲೇಕಣಿ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದ್ದು, ಇಂತಹ ಪ್ರಕರಣಗಳ ತ್ವರಿತ ವಿಚಾರಣೆಗೆ ಫಾಸ್ಟ್‌ಟ್ರಾಕ್ ನ್ಯಾಯಾಲಯಗಳ ಅಗತ್ಯವಿದೆ ಎಂದರು.
ರಾಜ್ಯದಲ್ಲಿ ರೈತರ ಸಮಸ್ಯೆಗಳಿಗಿಂತ ರಾಜಕೀಯ ಚಟುವಟಿಕೆಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿದರು. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಕೆಲವರೇ ಸಂತೃಪ್ತರಾಗಿದ್ದು, ಸಾಮಾನ್ಯ ಜನರು ಮತ್ತು ರೈತರು ಸಂಕಷ್ಟದಲ್ಲಿದ್ದಾರೆ" ಎಂದು ಹೇಳಿದರು.
ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಕಲುಷಿತವಾಗಿದೆ ಎಂದು ಹೇಳಿರುವ ಹೇಳಿಕೆಯನ್ನು ಉಲ್ಲೇಖಿಸಿ, "ಅಧಿಕಾರದಲ್ಲಿದ್ದಾಗ ಎಲ್ಲವೂ ಸರಿಯಾಗಿತ್ತು. ಈಗ ಮಾತ್ರ ರಾಜಕೀಯ ಕಲುಷಿತವಾಗಿದೆ ಎನ್ನುವುದು ಏಕೆ?" ಎಂದು ಪ್ರಶ್ನಿಸಿದರು.
"ತೆಲಂಗಾಣ ಸೇರಿದಂತೆ ಕಾಂಗ್ರೆಸ್ ಆಡಳಿತದ ರಾಜ್ಯಗಳ ಅಭಿವೃದ್ಧಿ ಕುರಿತು ಕೂಡ ಟೀಕೆ ವ್ಯಕ್ತಪಡಿಸಿದ ಅವರು, ಕರ್ನಾಟಕದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿದ್ದು, ಜನರಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ಹೆಚ್ಚುತ್ತಿದೆ" ಎಂದು ಆರೋಪಿಸಿದರು.